Advertisement

ಬದುಕಿನ ವೈವಿಧ್ಯ ಮತ್ತು ಕುಂಟು ನಾಯಿಮರಿ

01:11 AM Sep 15, 2020 | Hari Prasad |

ಒಂದು ಹಸ್ತದ ಐದು ಬೆರಳುಗಳು ಒಂದರಂತೆ ಇನ್ನೊಂದು ಇರುವುದಿಲ್ಲ ಎಂಬುದು ಆಡು ಭಾಷೆಯ ಪ್ರಸಿದ್ಧ ನುಡಿಗಟ್ಟು.

Advertisement

ಮನುಷ್ಯನ ಬದುಕು, ವರ್ತನೆ, ಸ್ವರೂಪ, ಅಂತಸ್ತು ಒಬ್ಬರಂತೆ ಇನ್ನೊಬ್ಬರದು ಇರುವುದಿಲ್ಲ ಎಂಬುದು ಇದರ ತಿರುಳು. ಪರೋಕ್ಷವಾಗಿ ವೈವಿಧ್ಯವೇ ಬದುಕಿನ ಜೀವಾಳ ಎನ್ನುತ್ತದೆ ಇದು.

ಯಾರು ಕೂಡ ಯಾವುದೇ ಕಾರಣಕ್ಕೂ ಕೀಳಲ್ಲ, ಯಾರೂ ಮೇಲಲ್ಲ. ಜೀವನ ಎಲ್ಲರ ಮುಂದೆಯೂ ಸಮಾನವಾಗಿ ತೆರೆದುಕೊಂಡಿರುತ್ತದೆ.

ಮನುಷ್ಯನನ್ನು ಮಾನವನನ್ನಾಗಿಸುವ ಪ್ರೀತಿ ವಾತ್ಸಲ್ಯ, ಕರುಣೆ, ಸಹಾನುಭೂತಿಗಳಂತಹ ಮಾನವೀಯ ಗುಣಗಳೊಂದಿಗೆ ಸಕಾರಾತ್ಮಕವಾಗಿ ಬದುಕಬೇಕು ಅಷ್ಟೇ.
***

ಶಾಲೆಯಿಂದ ಮನೆಯ ಕಡೆ ಹೋಗುತ್ತಿದ್ದ ಬಾಲಕನನ್ನು ದಾರಿ ಬದಿಯ ಮನೆಯ ಗೇಟಿಗೆ ಅಳವಡಿಸಿದ್ದ ‘ನಾಯಿಮರಿಗಳು ಮಾರಾಟಕ್ಕಿವೆ’ ಎಂಬ ಫ‌ಲಕ ಆಕರ್ಷಿಸಿತು. ಹುಡುಗ ನಿಂತ. ಬಹಳ ಹೊತ್ತು ಫ‌ಲಕವನ್ನು ವೀಕ್ಷಿಸಿದ. ಮರಿಗಳು ಎಲ್ಲಾದರೂ ಕಣ್ಣಿಗೆ ಬೀಳುತ್ತವೆಯೇ ಎಂದು ಗೇಟಿನ ಒಳಕ್ಕೆ ಇಣುಕಿದ.

Advertisement

ಅಲ್ಲೇ ಪಕ್ಕದಲ್ಲಿ ಹೂಗಿಡಗಳಿಗೆ ನೀರು ಹಾಯಿಸುತ್ತಿದ್ದ ಮನೆಯ ಯಜಮಾನ ನಳ್ಳಿ ಕಟ್ಟಿ ಗೇಟಿನ ಬಳಿಗೆ ಬಂದ. ಹುಡುಗನಲ್ಲೇನು ಮಾತು ಎಂದು ಉಪೇಕ್ಷಿಸದೆ “ಮರಿ ಬೇಕಾ’ ಎಂದು ಕೇಳಿದ.

ಬಾಲಕ ನಿಂತದ್ದೇ ಅದಕ್ಕೆ. “ಒಂದು ಮರಿಗೆ ಎಷ್ಟು ದುಡ್ಡು’ ಎಂದು ಪ್ರಶ್ನಿಸಿದ ಆತ. “ದುಡ್ಡಿನ ವಿಚಾರ ಮತ್ತೆ ಅಪ್ಪನ ಹತ್ತಿರ ಮಾತಾಡೋಣ. ಈಗ ನಾಯಿ ಮರಿ ನೋಡುತ್ತೀಯಾ?’ ಎಂದ ಯಜಮಾನ. ಹುಡುಗ ತಲೆ ಅಲ್ಲಾಡಿಸಿದ. ಯಜಮಾನನ ಸಿಳ್ಳಿನ ಸದ್ದಿಗೆ ಮನೆಯ ಹಿಂದಿನಿಂದ ನಾಲ್ಕೈದು ಮರಿಗಳು ಚೆಂಡುಗಳಂತೆ ಜಿಗಿಯುತ್ತ ಬಂದವು. ಒಂದೊಂದು ಕೂಡ ಬಹು ಸುಂದರ; ಬೆಳೊ°ರೆಯಂಥ ಕೂದಲು ಗಳುಳ್ಳದ್ದು ಒಂದು, ಕೆಂಪು – ಕಪ್ಪು ಮಿಶ್ರ ಬಣ್ಣದ್ದು ಇನ್ನೊಂದು… ಒಂದರ ಹಿಂದೆ ಒಂದು ಮುದ್ದು ಮುದ್ದು ಮರಿಗಳು.

ಅವೆಲ್ಲಕ್ಕಿಂತ ಹಿಂದೆ ಒಂದು ಮರಿ ನಿಧಾನ ವಾಗಿ ಬಂತು. ಅದು ಕೊಂಚ ಕುಂಟುತ್ತಿತ್ತು. ಯಜಮಾನ ಯಾವ ಮರಿ ಇಷ್ಟವಾಯಿತು ಎಂದು ಹುಡುಗನನ್ನು ಕೇಳಿದ.

ಬಾಲಕನ ಆಯ್ಕೆ ಕುಂಟುವ ನಾಯಿಮರಿಯಾಗಿತ್ತು. ಮನೆ ಮಾಲಕನಿಗೆ ಆಶ್ಚರ್ಯ. “ಅದು ಬೇಡ, ಸರಿಯಾಗಿರುವ ಈ ಮರಿಗಳಲ್ಲಿ ಯಾವುದಾದರೂ ಒಂದನ್ನು ಆಯ್ದುಕೋ’ ಎಂಬ ಸಲಹೆಯನ್ನೂ ಕೊಟ್ಟ. ಆದರೆ ಹುಡುಗ ತನ್ನ ನಿರ್ಧಾರದಿಂದ ಹಿಂದೆ ಸರಿಯಲೊಲ್ಲ. ಕುಂಟು ನಾಯಿಮರಿಯೇ ಆದರೆ ಉಚಿತವಾಗಿ ಕೊಡುವೆ ಎಂಬ ಮಾಲಕನ ಮಾತಿಗೂ ಒಪ್ಪದೆ “ಅಪ್ಪನಲ್ಲಿ ಹೇಳಿ ದುಡ್ಡು ಕೊಡಿಸುವೆ’ ಎಂದ.

ಇಡೀ ಕತೆಯ ಸ್ವಾರಸ್ಯ ಇರುವುದು ಇಲ್ಲಿಯೇ.

“ಅದು ಬೇಡ ಪುಟ್ಟಾ, ಅದರ ಕಾಲು ಕುಂಟು. ಎಲ್ಲ ಮರಿಗಳ ಹಾಗೆ ಅದಕ್ಕೆ ಓಡಿ ಯಾಡಲು ಆಗದು’ ಯಜಮಾನ ಮತ್ತೂ ಹೇಳಿದ.

ಆಗ ಬಾಲಕ ನಾಯಿ ಮರಿಗಳ ಯಜಮಾನನಿಗೆ ತನ್ನ ಸಮವಸ್ತ್ರದ ಪ್ಯಾಂಟನ್ನು ಕೊಂಚ ಎತ್ತಿ ಎಡಗಾಲನ್ನು ತೋರಿಸಿದ. ನೋಡಿದರೆ ಅವನ ಕಾಲು ಕೂಡ ಕುಂಟು.

ಈಗ ಬಾಲಕ ಹೇಳಿದ, “ನನಗೂ ವೇಗವಾಗಿ ಓಡಿಯಾಡಲು ಆಗುವುದಿಲ್ಲ. ನನಗೆ ನನ್ನ ಹಾಗಿರುವ ಸಂಗಾತಿಯೇ ಬೇಕು. ಅದಕ್ಕೇ ಈ ಮರಿಯೇ ನನ್ನ ಆಯ್ಕೆ…’
***

ವೈವಿಧ್ಯವೇ ಬದುಕಿನ ಸೌಂದರ್ಯ. ಎಲ್ಲರೂ ಎಲ್ಲ ರೀತಿಯಲ್ಲೂ ಅನುರೂಪರು, ಸಮಾನರಾಗಿದ್ದರೆ ಅದು ಏಕತಾನವಾಗುತ್ತದೆ. ಅದಕ್ಕೆ ರುಚಿಯಿಲ್ಲ. ಸದಾ ತಿನ್ನುವ ಸಿಹಿಯು ಸಿಹಿಯಲ್ಲ. ಅದಕ್ಕೇ ಐದು ಬೆರಳುಗಳು ಸಮಾನವಲ್ಲ.

(ಜೀವನಾನುಭವ ಸಾರ)

Advertisement

Udayavani is now on Telegram. Click here to join our channel and stay updated with the latest news.

Next