Advertisement
ಈ ಅನಿಶ್ಚಿತತೆಯೇ ಬದುಕಿನ ಸೌಂದರ್ಯ.
Related Articles
Advertisement
ಬದುಕು ಅನಿಶ್ಚಿತವಾಗಿರುವುದರಿಂದಲೇ ನಾವು ಬದುಕುತ್ತಿದ್ದೇವೆ.
ಅದು ಲೆಕ್ಕಾಚಾರದಂತೆ ಇಲ್ಲದಿರುವುದರಿಂದಲೇ ಜೀವನ ನಡೆಸುವುದು ಸವಾಲಾಗಿದೆ. ಹೊಸ ರಸ್ತೆಯಲ್ಲಿ ಬೈಕ್ ಚಲಾಯಿಸುತ್ತಿರುವಾಗ ಎಲ್ಲಿ ಹೊಂಡ ಇದೆ, ಎಲ್ಲಿ ಏರುತಗ್ಗು ಇರುವುದಿಲ್ಲ ಎಂಬುದು ಗೊತ್ತಿರುವುದಿಲ್ಲ. ಹಾಗಾಗಿ ಎಚ್ಚರಿಕೆಯಿಂದ ಇರುತ್ತೇವೆಯೇ ವಿನಾ ಆ ಮಾರ್ಗದಲ್ಲಿ ಹೋಗುವುದನ್ನೇ ಕೈಬಿಡುವುದಿಲ್ಲ.
ಅನಿಶ್ಚಿತವು ಹೊಸ ಸಾಧ್ಯತೆಗಳನ್ನು ಕಂಡುಕೊಳ್ಳುವ ಅವಕಾಶ ಎಂದು ಪರಿಭಾವಿಸಿಕೊಂಡರೆ ಬದುಕಿಗೊಂದು ಹೊಸ ಉಲ್ಲಾಸ, ಅರ್ಥ ಬರುತ್ತದೆ. ದೂರದೃಷ್ಟಿ, ಮುಂಗಾಣ್ಕೆಯನ್ನು ಹೊಂದಿರುವವರು ಅನಿಶ್ಚಿತ ಜೀವನವನ್ನು ಅವಕಾಶವಾಗಿ ಕಾಣುತ್ತಾರೆ. ಇನ್ನುಳಿದವರಿಗೆ ಅದು ಸಮಸ್ಯೆಯಾಗಿ ಕಾಣುತ್ತದೆ. ಎಲ್ಲವೂ ಲೆಕ್ಕ ಹಾಕಿದಂತೆ ನಡೆಯುತ್ತಿದ್ದರೆ ಹೊಸತು ಆವಿರ್ಭವಿಸುವುದಿಲ್ಲ. ಜಡತ್ವವುಂಟಾಗುತ್ತದೆ. ಎಲ್ಲವೂ ನಿಂತ ನೀರಾಗುತ್ತದೆ. ಅದು ದುರ್ಗಂಧ ಬೀರುತ್ತದೆ. ಹುಳಗಳು ಹುಟ್ಟುವುದು ಕೂಡ ಆಗಲೇ. ಹರಿಯುವ ನೀರಿನಂತೆ ಬದುಕು ಬದಲಾಗುತ್ತದೆ, ಬದಲಾಗಲೇಬೇಕು. ಅದು ಲೋಕದ ನಿಯಮ.
ಲೋಕದ ನಿಯಮವೇ ಹಾಗಿದ್ದ ಮೇಲೆ ನನ್ನ ಪಾಲಿಗೆ ಎಲ್ಲವೂ ಸ್ಥಿರವಾಗಿರಬೇಕು, ಬದಲಾಗಬಾರದು ಎಂದು ಬಯಸು ವಂತಿದೆಯೇ? ಇಲ್ಲ. ಹಾಗಾಗಿ ಅನಿಶ್ಚಿತತೆ, ಬದಲಾವಣೆ ಎಂಬುದು ಲೋಕದ ತಪ್ಪಲ್ಲ. ಆದ್ದರಿಂದ ಅದನ್ನು ಪ್ರತಿಭಟಿಸುವ ಮನೋ ಭಾವವನ್ನು ನಾವು ತ್ಯಜಿಸಬೇಕು. ಧಿಕ್ಕರಿಸುವ ಮನೋವೃತ್ತಿಯಿಂದ ನಾವು ಇದ್ದಲ್ಲೇ ಇರುತ್ತೇವೆ, ಹೊಸತನ್ನು ಸ್ವೀಕರಿಸದಿರುವ ಮನೋಭಾವ ಹುಟ್ಟಿಕೊಳ್ಳುತ್ತದೆ. ಅದು ಅಪಾಯಕಾರಿ.
ಬದಲಾವಣೆಗಳನ್ನು ಸರಿಯಾಗಿ ಗ್ರಹಿಸಿ ಎದುರಿಸಲು ಸಾಧ್ಯವಾಗದಿರುವುದು ನಮ್ಮ ಅಸಾಮರ್ಥ್ಯ. ಬದಲಾಗುತ್ತಿರುವ ಬದುಕನ್ನು ನಮ್ಮ ಗರಿಷ್ಠ ಶಕ್ತಿ, ಅತ್ಯುತ್ತಮ ಸಾಮರ್ಥ್ಯಗಳನ್ನು ವಿನಿಯೋಗಿಸಿ ಎದುರಿಸೋಣ.ಬದಲಾವಣೆಗಳಿಗೆ ತಕ್ಕುದಾಗಿ ನಾವೂ ಬದಲಾಗೋಣ, ಒಗ್ಗಿಕೊಳ್ಳೋಣ, ಹೊಸ ಹೊಸ ಸಾಧ್ಯತೆಗಳನ್ನು ಹುಡುಕೋಣ. ಇನ್ನೊಬ್ಬರಷ್ಟು ಚೆನ್ನಾಗಿ ನಮಗೆ ಸವಾಲನ್ನು ನಿಭಾಯಿಸಲು ಸಾಧ್ಯವಾಗದು; ಆದರೆ ನಮ್ಮ ಗರಿಷ್ಠ ಮಟ್ಟವನ್ನು ಮುಟ್ಟೋಣ. ನಾವು ಈ ಭೂಮಿಗೆ ಬರುವಾಗ ಇನಿತೂ ಬಂಡವಾಳವನ್ನು ಹೊತ್ತು ತರಲಿಲ್ಲ. ಇಲ್ಲಿಂದ ತೆರಳುವಾಗ ಹೂಡಿಕೆಯನ್ನು ಒಯ್ಯುವುದಕ್ಕಿಲ್ಲ. ಹಾಗಾಗಿ ಇಲ್ಲಿ ಸಿಕ್ಕಿದ್ದೆಲ್ಲವೂ ಲಾಭವೇ. ಆದಿ-ಅಂತ್ಯಗಳ ನಡುವೆ ಆಗುವುದೆಲ್ಲವೂ ಲಾಭವೇ. ಬದುಕು ಇಡಿಯಾದ ಒಂದು ಅನುಭವ. ಅದನ್ನು ನಾವು ಹೇಗೆ ಅನುಭವಿಸುತ್ತೇವೆ ಎಂಬುದು ಬಹಳ ಪ್ರಾಮುಖ್ಯವಾದುದು. ಬದುಕಿನ ಬದಲಾವಣೆಗಳನ್ನು, ಚಲನೆಯನ್ನು, ಗತಿಯನ್ನು ನಿರ್ಧರಿಸುವುದು ನಮ್ಮ ಕೈಯಲ್ಲಿಲ್ಲ. ಆದರೆ ಅದನ್ನು ಹೇಗೆ ಅನುಭವಿಸಬೇಕು ಎಂಬುದು ನೂರಕ್ಕೆ ನೂರು ನಮ್ಮ ಕೈಯಲ್ಲಿದೆ. ಬದಲಾವಣೆಗಳಿಗೆ ಒಡ್ಡಿಕೊಳ್ಳುತ್ತ, ಅವುಗಳನ್ನು ಹೊಸ ಸಾಧ್ಯತೆಗಳಾಗಿ ಪರಿಗಣಿಸಿ ಜೀವಿಸಲು ನಮ್ಮನ್ನು ನಾವು ಸಿದ್ಧಗೊಳಿಸಿಕೊಳ್ಳಬೇಕು. ಆಗ ನಾವೀನ್ಯಗಳು ಆವಿಷ್ಕಾರಗೊಳ್ಳಲು ಸಾಧ್ಯವಾಗುತ್ತದೆ. ನಾವೂ ನಮ್ಮ ಗರಿಷ್ಠ ಶಕ್ತಿ ಸಾಮರ್ಥ್ಯಗಳನ್ನು ಬಂಡವಾಳವಾಗಿ ಹೂಡಿ ಮುಂದಡಿಯಿಡೋಣ. (ಸಂಗ್ರಹ)