ನಾವು ಯಾವುದನ್ನು ನಮ್ಮ “ವ್ಯಕ್ತಿತ್ವ’ ಎಂದು ಗುರುತಿಸುತ್ತೇವೆಯೋ ಅದು ನಮ್ಮ ಮನಸ್ಸಿನಲ್ಲಿ ನಾವೇ ಕಲೆಹಾಕಿಕೊಂಡ ಮಾಹಿತಿಗಳ ಸಂಗ್ರಹರೂಪ. “ನಾನೊಬ್ಬ ಒಳ್ಳೆಯ ವ್ಯಕ್ತಿ’, “ನಾನು ಕೆಟ್ಟವನು’, “ನಾನು ತುಂಬಾ ತುಂಟ’, “ನಾನು ಸಿಟ್ಟಿನವನು’- ಇವೆಲ್ಲವೂ ಮನಸ್ಸಿನಲ್ಲಿ ಗುಡ್ಡೆ ಹಾಕಿಕೊಂಡ ಮಾಹಿತಿಗಳ ರಾಶಿ. ಇನ್ನೊಂದು ರೀತಿಯಲ್ಲಿ ಹೇಳುವು ದಾದರೆ, ಇದು ಭೂತಕಾಲದ ರಾಶಿ. ಸರಳವಾಗಿ ಹೇಳಬೇಕಾದರೆ ನಾವು ಭೂತಕಾಲದ ಆಧಾರ ದಲ್ಲಿ ಬದುಕುತ್ತಿದ್ದೇವೆ. ಈ ಹಿಂದಿನದನ್ನು ತೆಗೆದು ಹಾಕಿದರೆ ಅನೇಕರು ಕಳೆದೇ ಹೋಗುತ್ತಾರೆ. ಹಾಗಾಗಿ ವ್ಯಕ್ತಿತ್ವ ಎನ್ನುವುದು ಪ್ರಾಮುಖ್ಯ ವಾಗಿರುವ ವರೆಗೆ ಈ “ಹಿಂದಿನದು’ ಪ್ರಭುತ್ವ ಸ್ಥಾಪಿಸಿರುತ್ತದೆ. ವರ್ತಮಾನ ಮುಖ್ಯವಾಗುವುದಿಲ್ಲ.
ಹಾಗಾಗಿ ನಾವು ಹೊದ್ದುಕೊಂಡಿರುವ ವ್ಯಕ್ತಿತ್ವದ ಮುಸುಕು ನಿರ್ಜೀವವಾದದ್ದು. ಈ ನಿರ್ಜೀವ ವಸ್ತುವನ್ನು ಹೊತ್ತು ಕೊಂಡು ಬಹಳ ದೂರ ಹೋಗಲಾಗದು. ತುಂಬಾ ಹೊತ್ತು ಈ ನಿರ್ಜೀವ ವಸ್ತುವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದರೆ ಅದು ವಾಸನೆ ಬೀರಲಾರಂಭಿಸುತ್ತದೆ. ವ್ಯಕ್ತಿತ್ವ ಇದ್ದಷ್ಟು ಸಮಯ ನಾವು ದುರ್ವಾಸನೆಯನ್ನೂ ಬೀರುತ್ತಿರುತ್ತೇವೆ.
ಈ ಹಳತನ್ನು ಆದಷ್ಟು ಬೇಗನೆ ತ್ಯಜಿಸಬೇಕು. ಅಂದರೆ ಹಳೆಯದರ ಆಧಾರದಲ್ಲಿ ಬದುಕುವುದನ್ನು ಬಿಟ್ಟು ವರ್ತಮಾನದಲ್ಲಿ ಜೀವಿಸಬೇಕು. ಇದು ಒಂದು ಹಾವು ತನ್ನ ಪೊರೆಯನ್ನು ಕಳಚಿದ ಹಾಗೆ. ಹಾವು ತನ್ನ ದೇಹದ ಭಾಗವೇ ಆಗಿದ್ದ ಪೊರೆಯನ್ನು ಕಳಚಿ ತಿರುಗಿ ನೋಡದೆ ಮುಂದಕ್ಕೆ ಸಾಗುತ್ತದೆ. ಹಾಗಾದಾಗ ಮಾತ್ರ ಹೊಸ ಬೆಳವಣಿಗೆ ಘಟಿಸುತ್ತದೆ. ನಾವು ಕೂಡ ಹಾಗೆಯೇ. ಹಳೆಯದರ ಭಾರವನ್ನು ಹೊತ್ತು ಕೊಂಡಿಲ್ಲದವನು ನಿಷ್ಕಲ್ಮಶನಾಗಿರುತ್ತಾನೆ. ನಿಷ್ಕಲ್ಮಶ ಅಂದರೆ ಆತ ಏನೂ ಮಾಡಿಲ್ಲ ಎಂದರ್ಥವಲ್ಲ. ಮನುಷ್ಯನಾಗಿ ಬದುಕಲು ಏನೆಲ್ಲ ಮಾಡಬೇಕೋ ಅದನ್ನೆಲ್ಲ ಆತ ಮಾಡಿರುತ್ತಾನೆ. ಆದರೆ ಆ ಕ್ರಿಯೆಗಳ ಲವಲೇಶವನ್ನೂ ಆತ ಉಳಿಸಿಕೊಂಡಿರುವುದಿಲ್ಲ, ತನ್ನ ಕ್ರಿಯೆಗಳಿಂದ ಆತ ತನ್ನ ವ್ಯಕ್ತಿತ್ವವನ್ನು ನಿರ್ಮಿಸಿಕೊಳ್ಳುವುದಿಲ್ಲ.
ಶುಕ ಎಂಬೊಬ್ಬ ಮಹರ್ಷಿ ಇದ್ದ. ಅವನು ವ್ಯಾಸನ ಮಗ. ಆತ ನಿಷ್ಕಲ್ಮಶ ವ್ಯಕ್ತಿ, ಬಟ್ಟೆಯನ್ನೂ ಧರಿಸು ತ್ತಿರಲಿಲ್ಲ. ಒಂದು ಬಾರಿ ಆತ ಅರಣ್ಯದಲ್ಲಿ ನಡೆದುಹೋಗುತ್ತಿದ್ದ. ಅಲ್ಲೊಂದು ಕಡೆ ಸರೋವರದಲ್ಲಿ ಜಲ ಕನ್ನಿಕೆಯರು ದಿಗಂಬರರಾಗಿ ಸ್ನಾನ ಮಾಡುತ್ತಿದ್ದರಂತೆ. ಶುಕ ಅಲ್ಲಿಗೆ ಬಂದು, ಅವರನ್ನು ನೋಡಿ ನೀರು ಕುಡಿದು ಹೊರಟುಹೋದ. ಜಲಕನ್ನಿಕೆಯರು ನಾಚಿಕೊಳ್ಳಲಿಲ್ಲ.
ಸ್ವಲ್ಪ ಹೊತ್ತು ಕಳೆದ ಬಳಿಕ ತಂದೆ ವ್ಯಾಸರು ಮಗನನ್ನು ಹುಡುಕುತ್ತ ಆ ದಾರಿಯಾಗಿ ಬಂದರು. ಆಗ ಜಲಕನ್ನಿಕೆಯರು ಬೇಗಬೇಗನೆ ಬಟ್ಟೆ ಧರಿಸಿಕೊಂಡರಂತೆ.
ಜಲಕನ್ನಿಕೆಯರ ನಡವಳಿಕೆ ಕಂಡು ವ್ಯಾಸರಿಗೆ ಆಶ್ಚರ್ಯವಾಯಿತು. ಅವರು, “ಅಮ್ಮಾ, ನನ್ನ ಯುವಕ ಮಗ ನಿಮ್ಮನ್ನು ನೋಡಿದಾಗ ನೀವು ನಾಚಿಕೊಳ್ಳ ಲಿಲ್ಲ. ಆದರೆ ವಯೋವೃದ್ಧನಾದ ನಾನು ಬಂದಾಗ ಬಟ್ಟೆ ಧರಿಸಿಕೊಂಡಿರಿ. ಏನಿದರ ಗುಟ್ಟು’ ಎಂದು ಕೇಳಿದರು.
“ನಿಮ್ಮ ಮಗ ಪರಿಶುದ್ಧನಾಗಿದ್ದಾನೆ, ನಿಷ್ಕಲ್ಮಶನಾಗಿದ್ದಾನೆ. ಅವನು ಮಗು ವಿನಂಥವನು’ ಎಂದರಂತೆ ಜಲಕನ್ಯೆಯರು.
ಭೂತಕಾಲದ ನೆನಪುಗಳನ್ನು ವರ್ತಮಾನಕ್ಕೆ ಹೊತ್ತು ತಾರದವನು ಮುಕ್ತ ಮನುಷ್ಯನಾಗಿರುತ್ತಾನೆ. ಅಂಥ ಗುಣ ಸರ್ವಮಾನ್ಯವಾಗಿರುತ್ತದೆ. ಅಂಥವರನ್ನು ಎಲ್ಲರೂ ಪ್ರೀತಿಸುತ್ತಾರೆ, ಅಂಥವರ ಮೇಲೆ ತಮ್ಮ ತಮ್ಮ ಹೆತ್ತವರು, ಹೆಂಡತಿ ಮಕ್ಕಳಿಗಿಂತಲೂ ಹೆಚ್ಚು ವಿಶ್ವಾಸವಿರಿಸುತ್ತಾರೆ. ಅಂಥವರು ಸಂಸಾರ ಸಾಗರವನ್ನು ಬಹಳ ಸಲೀಸಾಗಿ ಈಜಿ ದಾಟುತ್ತಾರೆ.
( ಸಾರ ಸಂಗ್ರಹ)