ಕಾಲದ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಅದು ಅಷ್ಟು ಸುಲಭವಾಗಿ ತಿಳಿವಳಿಕೆಗೆ ನಿಲುಕುವಂಥದ್ದಲ್ಲ. ಪಾಶ್ಚಾ ತ್ಯರ ಪ್ರಕಾರ ಕಾಲ ಸರಳ ರೇಖೆಯ ಹಾಗೆ; ಬೆಳಕಿನ ಕಿರಣದ ಹಾಗೆ – ಮುಂದು ಮುಂದಕ್ಕೆ ಹೋಗುತ್ತಲೇ ಇರುತ್ತದೆ. ಆದರೆ ಭಾರತೀಯರ ಚಿಂತನೆಯ ಪ್ರಕಾರ ಅದು ವರ್ತುಲ ಸ್ವರೂಪದ್ದು. ಹೀಗಾಗಿಯೇ ಕಾಲಚಕ್ರ ಎನ್ನುತ್ತಾರೆ. ಕಾಲಚಕ್ರಕ್ಕೆ ಎಲ್ಲವನ್ನೂ ಮರೆಯಿಸುವ ಶಕ್ತಿ ಇದೆ. ಸುಖ-ದುಃಖ, ನೋವು-ನಲಿವು, ಹಿಗ್ಗು-ಕುಗ್ಗು ಎಲ್ಲವೂ ಅನಂತವಾದ ಕಾಲಚಕ್ರ ದಲ್ಲಿ ಸರಿದುಹೋಗು ತ್ತವೆ. ಕಾಲದ ಮುಂದೆ ವಿನೀತವಾಗಿ, ಆಗುವು ದೆಲ್ಲವೂ ಒಳ್ಳೆಯದಕ್ಕೆ ಎಂಬ ಆಶಾಭಾವನೆ ಯೊಂದಿಗೆ, ಕಾಲದಲ್ಲಿ ಒಳ್ಳೆಯ ಘಟ್ಟ ಬರಲಿದೆ ಎಂಬ ವಿಶ್ವಾಸದೊಂದಿಗೆ ಬದುಕುವುದಷ್ಟೇ ನಮ್ಮ ದಾರಿ.
ದೇವರನ್ನು ಕಾಲ ಎಂದು ಕಲ್ಪಿಸಿ ಕೊಂಡ ಪರಂಪರೆ ನಮ್ಮದು. ಆದ್ದರಿಂದ ಶಿವನಿಗೆ ಮಹಾಕಾಲ ಎಂಬ ಹೆಸರು. ಕಾಲದ ಬಗ್ಗೆ ನಮ್ಮ ಪೂರ್ವಸೂರಿಗಳು ನಡೆಸಿದಷ್ಟು ಚಿಂತನೆ ಪ್ರಪಂಚದ ಬೇರಾವ ಭಾಗ, ಸಂಸ್ಕೃತಿ, ನಾಗರಿಕತೆಗಳಲ್ಲೂ ಆಗಿಲ್ಲ. ಭಾರತೀಯ ಪುರಾಣಗಳಲ್ಲಿ ಕಾಲವು ಚಕ್ರ ಸ್ವರೂಪದ್ದು ಎನ್ನುವುದನ್ನು ಒತ್ತಿಹೇಳುವ ಅನೇಕ ಕಥೆಗಳಿವೆ. ಅವುಗಳಲ್ಲಿ ಕೆಲವನ್ನು ನೋಡೋಣ.
ಇದು ವಿಷ್ಣು ಪುರಾಣದಲ್ಲಿ ಬರುವ ಒಂದು ಕಥೆ. ವಿಷ್ಣು ಮತ್ತು ನಾರದರು ಒಮ್ಮೆ ಪ್ರಪಂಚ ಪರ್ಯಟನೆಗೆ ಹೊರಟಿದ್ದರಂತೆ. ಒಂದು ಕಡೆ ವಿಷ್ಣುವಿಗೆ ಬಾಯಾರಿಕೆಯಾಯಿತು. ಹತ್ತಿರದ ಗ್ರಾಮದಿಂದ ನೀರು ತಂದುಕೊಡುವಂತೆ ಅವನು ನಾರದನಿಗೆ ಹೇಳಿದ. ಹಾಗೆ ಹೋದ ನಾರದ ಹಳ್ಳಿಯ ಒಂದು ಮನೆ ಬಾಗಿಲನ್ನು ತಟ್ಟಿದಾಗ ತೆರೆದವಳು ಒಬ್ಬಳು ಸುಂದರ ಯುವತಿ. ನಾರದನಿಗೆ ಅವಳ ಮೇಲೆ ಪ್ರೇಮವಾಯಿತು. ಆಕೆ ಯನ್ನು ಮದುವೆಯಾದ. ಮಕ್ಕಳಾದವು. ಸುಖವಾಗಿ ದಿನಗಳೆಯತೊಡಗಿದರು. ಎಷ್ಟೋ ವರ್ಷಗಳು ಸಂದ ಬಳಿಕ ಒಂದು ಬಾರಿ ಭಾರೀ ಮಳೆ ಬಂದು ಆ ಹಳ್ಳಿ ಯನ್ನು ಪ್ರವಾಹ ಆವರಿಸಿತು. ನಾರದನೂ ಅವನ ಸಂಸಾರವೂ ಅದರಲ್ಲಿ ಕೊಚ್ಚಿಹೋದರು. ಎಲ್ಲೆಲ್ಲೋ ತೇಲಿ ಹೋದ ನಾರದ ಕೊನೆಗೆ ಒಂದು ಕಡೆ ದಡ ಸೇರಿದಾಗ ಅಲ್ಲಿದ್ದ ಮಹಾವಿಷ್ಣು ಕುಡಿಯಲು ನೀರೆಲ್ಲಿ ಎಂದು ಕೇಳಿದನಂತೆ!
ಇಲ್ಲಿ ಸಂದುಹೋದ ಕಾಲವು ವಿಷ್ಣುವಿಗೂ ನಾರದನಿಗೂ ಬೇರೆ ಬೇರೆಯಾದದ್ದು.
ಲೀಲಾಶುಕನ ಬಾಲ ಗೋಪಾಲಸ್ತುತಿಯಲ್ಲಿ ಸುಂದರವಾದ ಒಂದು ವಿವರಣೆಯಿದೆ. ಒಮ್ಮೆ ಯಶೋದೆಯು ಬಾಲ ಕೃಷ್ಣನನ್ನು ತೊಡೆಯ ಮೇಲೆ ಮಲಗಿಸಿಕೊಂಡು ರಾಮಾಯಣದ ಕಥೆ ಹೇಳುತ್ತ ತಟ್ಟುತ್ತಿದ್ದಳಂತೆ. ಕಥೆ ಮುಂದು ವರಿಯುತ್ತ ಸೀತೆಯನ್ನು ಮಾರೀಚನು ಚಿನ್ನದ ಜಿಂಕೆಯಾಗಿ ಆಕರ್ಷಿಸಿದ, ರಾಮನು ಅದರ ಹಿಂದೆ ಹೋದಾಗ ರಾವಣನು ಕಪಟ ಸನ್ಯಾಸಿಯಾಗಿ ಸೀತೆಯ ಮುಂದೆ ಸುಳಿದ ವಿವರಣೆ ಬಂತು. ಅರೆಗಣ್ಣಿನಲ್ಲಿದ್ದ ಪುಟ್ಟ ಶ್ರೀಕೃಷ್ಣ ಥಟ್ಟನೆದ್ದು, “ಲಕ್ಷ್ಮಣ, ಓ ಲಕ್ಷ್ಮಣ, ನನ್ನ ಬಿಲ್ಲುಬಾಣಗಳೆಲ್ಲಿ’ ಎಂದು ಕೇಳಿದನಂತೆ.
ಕೃಷ್ಣನಿಗೆ ತನ್ನ ಪೂರ್ವಾವತಾರದ ಸ್ಮತಿ ಮನಃಪಟಲದಲ್ಲಿ ಮೂಡಿಬಂದ ಕಥೆ ಇದು. ಇಲ್ಲಿ ಕಾಲವು ಒಂದು ಯುಗದಿಂದ ಇನ್ನೊಂದರೊಳಗೆ ಹೊಕ್ಕು-ಹೊರಡುತ್ತದೆ!
ಇನ್ನೊಂದು ಕಥೆ ಬ್ರಹ್ಮವೈವರ್ತ ಪುರಾಣದ್ದು. ಇಂದ್ರನು ಒಮ್ಮೆ ತನ್ನ ಆಸ್ಥಾನದಲ್ಲಿ ವೈಭವದ ಒಡ್ಡೋಲಗದಲ್ಲಿ ಮಂಡಿಸಿದ್ದ. ಆತ ಇಂದ್ರಸಭೆಯ ಪ್ರಾಮುಖ್ಯದ ಬಗ್ಗೆ ಜಂಭ ಕೊಚ್ಚಿಕೊಳ್ಳುತ್ತಿ ದ್ದಾಗ ನೆಲದಲ್ಲಿ ಹತ್ತಾರು ಇರುವೆಗಳು ಸಾಲುಗಟ್ಟಿ ಹೊರಟದ್ದು ಕಾಣಿಸಿತು. ಎಲ್ಲರೂ ಇದೇನು ವಿಚಿತ್ರ ಎಂದು ಕೊಂಡರು. ಆದರೆ ಜ್ಞಾನದೃಷ್ಟಿ ಹೊಂದಿದ್ದ ಒಬ್ಬ ಮಾತ್ರ ಕಿಸಕ್ಕನೆ ನಕ್ಕುಬಿಟ್ಟ. ನಗಲು ಕಾರಣವೇನು ಎಂದು ಇಂದ್ರ ಪ್ರಶ್ನಿಸಿ ದಾಗ, “ಈ ಪ್ರತೀಯೊಂದು ಇರುವೆಯೂ ಹಿಂದಿನ ಜನ್ಮದಲ್ಲಿ ಒಬ್ಬೊಬ್ಬ ಇಂದ್ರನಾಗಿದ್ದವು’ ಎಂದನಂತೆ ಆತ.
ಕಾಲವೆಂದರೆ ಹೀಗೆ!
( ಸಾರ ಸಂಗ್ರಹ)