Advertisement

ಮೂರನೇ ಬಾರಿ ಗುಂಡು ಹೊಡೆದದ್ದು ನಾನು!

12:40 AM Feb 20, 2021 | Team Udayavani |

ಮುಲ್ಲಾ ನಾಸಿರುದ್ದೀನ್‌ ತಮ್ಮ ಶಿಷ್ಯರೊಂದಿಗೆ ಉತ್ಸವವೊಂದಕ್ಕೆ ಹೊರ ಟಿದ್ದರು. ಬಹಳ ದೊಡ್ಡ ಉತ್ಸವ. ರಾಟೆ ತೊಟ್ಟಿಲು, ಉಯ್ನಾಲೆ- ಹೀಗೆ ಬಗೆಬಗೆಯ ಆಟಗಳು, ಸರ್ಕಸ್‌, ಮಣಿಸರಕಿನ ಅಂಗಡಿಗಳು ಎಲ್ಲವೂ ಅಲ್ಲಿದ್ದವು. ಎಲ್ಲವನ್ನೂ ನೋಡುತ್ತ ನಾಸಿರುದ್ದೀನ್‌ ಮುಂದೆ ಮುಂದೆ… ಶಿಷ್ಯರು ಅವರ ಹಿಂದೆ ಹಿಂದೆ…

Advertisement

ಒಂದು ಕಡೆಯಲ್ಲಿ ಆಟಿಕೆ ಬಂದೂಕಿನಿಂದ ಗುರಿಗೆ ಗುಂಡು ಹೊಡೆಯುವ ಆಟ ಇತ್ತು. ಗೆದ್ದವರಿಗೆ ಒಂದು ವರಹ ಬಹುಮಾನ. ಸುತ್ತಲೂ ಕುತೂಹಲಿಗಳ ದೊಡ್ಡ ಗುಂಪು ನೆರೆದಿತ್ತು.

ಮುಲ್ಲಾ ನಾಸಿ ರುದ್ದೀನ್‌ ಶಿಷ್ಯರ ಜತೆಗೆ ಅಲ್ಲಿಗೆ ತಲುಪಿದರು. “ಇಲ್ಲಿಗೆ ಬನ್ನಿ, ಈ ಆಟದಿಂದ ನಾವು ತುಂಬಾ ಕಲಿಯುವುದಕ್ಕಿದೆ’ ಎಂದರು ಶಿಷ್ಯರನ್ನು ಉದ್ದೇಶಿಸಿ. ಸೂಫಿ ಗುರುಗಳು ಶಿಷ್ಯರಿಗೆ ದೊಡ್ಡ ದೊಡ್ಡ ತಣ್ತೀಗಳನ್ನು ಪಾಠ ಮಾಡುವುದು ಹೀಗೆಯೇ, ಪ್ರತ್ಯಕ್ಷ ಘಟನೆಗಳ ಮೂಲಕ. ನಾಸಿರುದ್ದೀನ್‌ ಬಂದೂಕನ್ನು ಕೈಯಲ್ಲೆತ್ತಿಕೊಂಡು ಗುರಿ ಹಿಡಿದರು.

ಸುತ್ತ ಸೇರಿದ್ದ ಜನರ ಉತ್ಸಾಹ ಹೆಚ್ಚಿತು. ಒಬ್ಬರು ಸೂಫಿ ಗುರುಗಳು ಮತ್ತವರ ಶಿಷ್ಯರು! ಈಗೇನೋ ನಡೆಯುವುದಕ್ಕಿದೆ! ಗುಲ್ಲು ಜೋರಾಯಿತು. ಅಷ್ಟರಲ್ಲಿ ಮುಲ್ಲಾ ನಾಸಿರುದ್ದೀನ್‌ ಹೊಡೆದ ಗುಂಡು ಗುರಿಯಿಂದ ಕೊಂಚ ಕೆಳಗೆ ನಾಟಿತು.

ಗುಂಪು ಗಹಗಹಿಸಿ ನಗಲು ಆರಂಭಿಸಿತು. “ಶ್‌Ï… ಸುಮ್ಮನಿರಿ, ಮೂರ್ಖರಂತೆ ಆಡಬೇಡಿ. ಇದು ಕೀಳರಿಮೆ ಹೊಂದಿರುವ ವ್ಯಕ್ತಿಗೆ ಉದಾಹರಣೆ. ಕೀಳರಿಮೆ ಹೊಂದಿರು ವಾತ ತಾನು ಸಮರ್ಥನಿದ್ದರೂ ಅಂಜಿ ಅಳುಕಿ ಪ್ರಯತ್ನಿಸುತ್ತಾನೆ. ಆದ್ದರಿಂದ ಗುರಿ ತಲುಪಲು ವಿಫ‌ಲನಾಗುತ್ತಾನೆ…’ ಎಂದರು ಮುಲ್ಲಾ ನಾಸಿರುದ್ದೀನ್‌.

Advertisement

ಗುಂಪು ಮೌನವಾಯಿತು. ಎಂಥ ಸತ್ಯವಾದ ಮಾತು ಎಂದುಕೊಂಡರು ಎಲ್ಲರೂ.

ಈಗ ಮುಲ್ಲಾ ನಾಸಿರುದ್ದೀನ್‌ ಇನ್ನೊಂದು ಬಾರಿ ಬಂದೂಕು ಎತ್ತಿದರು. ಈಗ ಹೊಡೆದ ಗುಂಡು ಗುರಿಯಿಂದ ಕೊಂಚ ಮೇಲಕ್ಕೆ ನಾಟಿತು. ಜನರು ಮತ್ತೆ ಗಹಗಹಿಸಿ ನಕ್ಕರು.

“ಮೂರ್ಖರೆ, ಸುಮ್ಮನಿರಿ. ಇದು ಮೇಲರಿಮೆ ಹೊಂದಿರುವ ವ್ಯಕ್ತಿಗೆ ಉದಾಹರಣೆ. ಆತ ಅತಿಯಾದ ಆತ್ಮವಿಶ್ವಾಸ ಹೊಂದಿರುತ್ತಾನೆ, ತನ್ನಿಂದ ಎಲ್ಲವೂ ಸಾಧ್ಯ ಎಂದುಕೊಳ್ಳುತ್ತಾನೆ. ಹಾಗಾಗಿ ಸೋಲುತ್ತಾನೆ…’

ನಿಜ, ನಿಜ ಅಂದುಕೊಂಡಿತು ಜನರ ಗುಂಪು.

ಮುಲ್ಲಾ ನಾಸಿ ರುದ್ದೀನ್‌ ಮೂರನೇ ಬಾರಿ ಬಂದೂಕು ಎತ್ತಿ ಕೊಂಡು ಗುರಿ ಹಿಡಿದರು. ಈ ಬಾರಿ ಗುಂಡು ಗುರಿಯನ್ನು ಸೇರಿತು. ಗುಂಪು ಮೌನವಾಗಿ ನಿರೀಕ್ಷಿಸಿತು, ಈಗ ಮುಲ್ಲಾ ನಾಸಿರುದ್ದೀನ್‌ ಹೇಳುವ ಪಾಠವೇನು?

ಆದರೆ ಮುಲ್ಲಾ ನಾಸಿರುದ್ದೀನ್‌ ಏನೂ ಹೇಳದೆ ಆಟದ ಯಜಮಾನನ ಬಳಿ ಬಹುಮಾನ ಕೊಡಯ್ನಾ ಎಂದು ಕೇಳಿದರು. “ಆದರೆ ಬಹುಮಾನ ಕೊಡುವುದು ಹೇಗೆ ಸಾಧ್ಯ? ಎರಡು ಬಾರಿಯ ಪ್ರಯತ್ನ ವಿಫ‌ಲವಾಗಿದೆಯಲ್ಲ’ ಎಂದ ಆತ.

ಮುಲ್ಲಾ ನಾಸಿರುದ್ದೀನ್‌, “ಅದು ಹೇಗಾಗುತ್ತದೆ? ಮೊದಲ ಬಾರಿ ಕೀಳರಿಮೆಯ ವ್ಯಕ್ತಿ ಗುಂಡು ಹೊಡೆದದ್ದು. ಎರಡನೆಯ ಬಾರಿ ಗುಂಡಿಕ್ಕಿದ್ದು ಮೇಲರಿಮೆ ಹೊಂದಿದಾತ. ಈಗ ಮೂರನೇ ಬಾರಿ ಗುಂಡು ಹಾರಿಸಿದ್ದು ಮಾತ್ರ ನಾನು, ಮುಲ್ಲಾ ನಾಸಿರುದ್ದೀನ್‌…’ ಎಂದು ವಾದಿಸಿದರು!

ನಮ್ಮೆಲ್ಲರ ಆಲೋಚನ ಕ್ರಮ, ವಾದಿಸುವ ಕ್ರಮ ಹೀಗೆಯೇ! ಪ್ರತೀ ಸನ್ನಿವೇಶದಲ್ಲಿಯೂ ಸೋಲು ಎದುರಾ ದಾಗ ವಿಧಿ, ದೇವರು, ಸಮಾಜ, ಸನ್ನಿವೇಶ… ಹೀಗೆ ತಪ್ಪನ್ನು, ಹೊಣೆಯನ್ನು ಇನ್ನೊಬ್ಬರ ಮೇಲೆ ಹೊರಿಸುತ್ತೇವೆ. ಗೆಲುವು ಎದುರಾದಾಗ ಮಾತ್ರ ನಾವೇ ಬೆನ್ನು ತಟ್ಟಿಕೊಳ್ಳುತ್ತೇವೆ. ಸೋಲಿನ ಹೊಣೆ ಹೊತ್ತುಕೊಳ್ಳಲು ನಮ್ಮ ಅಹಂ ಸಿದ್ಧವಿಲ್ಲ.

ಅಹಂಗೆ ಆಹಾರ ಕೊಡುವುದನ್ನು ನಿಲ್ಲಿಸಿ. ಅದನ್ನು ಸುಮ್ಮನೆ ಗಮನಿಸಿ. ಆಹಾರ ಕೊಡದೆ ಇದ್ದರೆ ಅದು ನಿಧಾನವಾಗಿ ಸತ್ತುಹೋಗುತ್ತದೆ.

( ಸಾರ ಸಂಗ್ರಹ)

Advertisement

Udayavani is now on Telegram. Click here to join our channel and stay updated with the latest news.

Next