Advertisement

ಜಾರಿಯಾಗಲಿ ಜೀವನಚೈತ್ರ ಯಾತ್ರೆ

01:22 AM Feb 18, 2021 | Team Udayavani |

ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಪ್ರವಾಸೋದ್ಯಮ ಕ್ಷೇತ್ರದ ಕೊಡುಗೆ ಅಪಾರ. ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ರಾಜ್ಯದ ಬೊಕ್ಕಸಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡುತ್ತಾ ಬಂದಿದ್ದರೂ ಪ್ರವಾಸೋದ್ಯಮ ವಲಯವನ್ನು ಸಮರ್ಥವಾಗಿ ಬಳಸಿಕೊಳ್ಳುವಲ್ಲಿ ಎಲ್ಲ ಸರಕಾರಗಳು ವಿಫ‌ಲವಾಗುತ್ತಲೇ ಬಂದಿವೆ. ಮುಂಬರುವ ಸಾಲಿನ ಬಜೆಟ್‌ನಲ್ಲಾದರೂ ಸರಕಾರ ಹೊಸ ಯೋಜನೆಗಳ ಬದಲು ಈಗಾಗಲೇ ಘೋಷಿಸಲ್ಪಟ್ಟ ಕೆಲವೊಂದು ಮಹತ್ವದ ಯೋಜನೆಗಳ ಅನುಷ್ಠಾನಕ್ಕೆ ಮುಂದಾ ಗಲಿ ಎಂಬುದು ಜನರ ಆಶಯ.

Advertisement

ಬೆಂಗಳೂರು: ಕೋವಿಡ್‌ ಕಾರಣಕ್ಕೆ ಹಲವು ಮಹತ್ವದ ಯೋಜನೆಗಳು ಜಾರಿಯಾಗದಿದ್ದರೂ ಪ್ರವಾಸಿ ತಾಣಗಳ ಅಭಿವೃದ್ಧಿ ಹಾಗೂ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಹೊಸ ಪ್ರವಾಸೋದ್ಯಮ ನೀತಿ ಜಾರಿಯಾಗಿದೆ. ಪ್ರಸಕ್ತ ಸಾಲಿನಲ್ಲಿ ಬಿಡುಗಡೆಯಾದ ಅನುದಾನದಲ್ಲಿ ಈವರೆಗೆ ಶೇ.82ರಷ್ಟು ಹಣ ಬಳಸುವಲ್ಲಿ ಪ್ರವಾಸೋದ್ಯಮ ಇಲಾಖೆ ಯಶಸ್ವಿಯಾಗಿದೆ.
ಪ್ರಸಕ್ತ ಸಾಲಿನ ಆಯ ವ್ಯಯದಲ್ಲಿ 60 ವರ್ಷ ಮೀರಿದ ಬಿಪಿಎಲ್‌ ಕಾರ್ಡ್‌  ದಾರರಿಗೆ ರಾಜ್ಯ- ದೇಶದ ಪ್ರಮುಖ ತೀರ್ಥ ಕ್ಷೇತ್ರಗಳ ದರ್ಶನಕ್ಕಾಗಿ “ಜೀವನಚೈತ್ರ ಯಾತ್ರೆ’ ಯೋಜನೆ ಘೋಷಿಸಲಾಗಿತ್ತು. ಕೋವಿಡ್‌ನಿಂದ ಜಾರಿಯಾಗದ ಯೋಜನೆಯನ್ನು ಮುಂದಿನ ಆರ್ಥಿಕ ವರ್ಷದಲ್ಲಿ ಜಾರಿಗೊಳಿಸಲು ಇಲಾಖೆ ಚಿಂತಿಸಿದೆ. ಐತಿಹಾಸಿಕ ಮಹತ್ವದ ದೇವಸ್ಥಾನ, ಪ್ರಾಚೀನ ಸ್ಥಳ, ಸ್ಮಾರಕ ಗಳನ್ನು ಸಂರಕ್ಷಿಸಿ ಪುನರುಜ್ಜೀವನಗೊಳಿಸುವ “ಸಂರಕ್ಷಣಾ’ ಯೋಜನೆ ಐದು ತಾಲೂಕುಗಳಲ್ಲಿ ಪ್ರಾಯೋಗಿಕವಾಗಿ ಜಾರಿ ಯಾಗಿದೆ. ಇತರ ತಾಲೂಕುಗಳಿಗೆ ವಿಸ್ತರಿಸಿ 25,000 ಐತಿಹಾಸಿಕ ಸ್ಥಳ, ಕಟ್ಟಡಗಳ ಸಂರಕ್ಷಣೆಗೆ ನೀಲನಕ್ಷೆ ಸಿದ್ಧವಾಗಿದ್ದು, ಬಜೆಟ್‌ನಲ್ಲಿ ಹೆಚ್ಚು ಅನುದಾನದ ನಿರೀಕ್ಷೆಯಲ್ಲಿದೆ.

ಬಜೆಟ್‌ನಲ್ಲಿ ಘೋಷಿಸಿದಂತೆ ವೈವಿಧ್ಯಮಯ ಪ್ರವಾಸಿ ತಾಣಗಳ ಪ್ರಚಾರದ ಜತೆಗೆ ರಾಜ್ಯ, ದೇಶ, ವಿದೇಶಗಳ ಪ್ರವಾಸಿಗರನ್ನು ಸೆಳೆಯಲು ಪೂರಕವಾದ ಪ್ರವಾಸೋದ್ಯಮ ನೀತಿ ಜಾರಿಯಾಗಿದೆ. ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯಕ್ಕೆ ಒತ್ತು, ಪೂರಕ ಚಟು ವಟಿಕೆಗೆ ನೆರವಾಗುವ ಪ್ರಯತ್ನಗಳಿಗೆ ಉತ್ತೇಜನ ಸಹಿತ ಹಲವು ಅಂಶಗಳು ನೀತಿಯಲ್ಲಿರುವುದು ವಿಶೇಷ. ಐತಿಹಾಸಿಕ ಪ್ರವಾಸಿ ತಾಣ ಬಾದಾಮಿಯ ಸಮಗ್ರ ಅಭಿವೃದ್ಧಿಗೆ 25 ಕೋಟಿ ರೂ. ಅನುದಾನವನ್ನು ಬಜೆಟ್‌ನಲ್ಲಿ ಪ್ರಕಟಿಸಲಾಗಿತ್ತು. ಸದ್ಯ ಸಮಗ್ರ ಯೋಜನಾ ವರದಿ (ಡಿಪಿಆರ್‌) ಸಿದ್ಧವಾಗಿದೆ. ಎಪಿಎಂಸಿಗೆ ಸೇರಿದ 9 ಎಕ್ರೆ ಭೂಮಿ ಹಸ್ತಾಂತರ, ಒತ್ತುವರಿ ತೆರವು ಪ್ರಕ್ರಿಯೆ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಅಭಿವೃದ್ಧಿ ಕಾರ್ಯ ಆರಂಭವಾಗಲಿದೆ. ಜೋಗ ಜಲಪಾತ ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಯೋಜನೆ ಸಿದ್ಧವಾಗಿದ್ದು, ಟೆಂಡರ್‌ ಹಂತದಲ್ಲಿದ್ದು, ಮುಗಿದ ಕೂಡಲೇ ಅಭಿವೃದ್ಧಿ ಕಾರ್ಯ ಆರಂಭವಾಗುವ ಸಾಧ್ಯತೆ ಇದೆ.

ನಿರೀಕ್ಷಿತ ಯೋಜನೆ
– “ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಮಾವೇಶ’ ಆಯೋಜನೆ
– ಕರಾವಳಿ ಸರ್ಕಿಟ್‌, ಮಲೆನಾಡು ಸರ್ಕಿಟ್‌, ಬಂಜಾರ ಹೆರಿಟೇಜ್‌, ದಲಿತ ಹೆರಿಟೇಜ್‌ ಪರಿಕಲ್ಪನೆಗಳ ಜಾರಿ
– ಜಿಲ್ಲಾ ಮಟ್ಟದಲ್ಲೇ ಕೆಲವು ದಿನಗಳ ಮಟ್ಟಿಗೆ ಹಬ್ಬ, ಉತ್ಸವ ಆಯೋಜನೆ
– ಡೆಸ್ಟಿನೇಶನ್‌ ಟೂರಿಸಂ, ಅಗ್ರಿ ಟೂರಿಸಂಗೆ ಆದ್ಯತೆ
– ಐತಿಹಾಸಿಕ ದೇವಸ್ಥಾನ, ಪ್ರಾಚೀನ ಸ್ಥಳ, ಸ್ಮಾರಕಗಳ ಸಂರಕ್ಷಣೆಗೆ “ಸಂರಕ್ಷಣ’ ಯೋಜನೆ ವಿಸ್ತರಣೆ
– ಅನುದಾನ ಬಳಕೆ
– 2020-21ನೇ ಸಾಲಿಗೆ ಹಂಚಿಕೆಯಾದ ಅನುದಾನ 151 ಕೋಟಿ ರೂ.
– ಈವರೆಗೆ ಬಿಡುಗಡೆಯಾಗಿರುವುದು 98 ಕೋಟಿ ರೂ.
– ಬಳಕೆ ಪ್ರಮಾಣ ಶೇ. 82

ಆಗಲೇಬೇಕಾದ ಕೆಲಸ
– ಪ್ರವಾಸೋದ್ಯಮ ನೀತಿ ಘೋಷಣೆಯಾಗಿ ಆರು ತಿಂಗಳುಗಳಾದರೂ ನಿಯಮಾವಳಿ ರಚನೆ ಯಾಗಿಲ್ಲ. ಕೂಡಲೇ ನಿಯಮಾವಳಿ ರಚಿಸಬೇಕು.
– ರಾಜ್ಯದಲ್ಲಿ ಅಜ್ಞಾತವಾಗಿ ಉಳಿದಿರುವ ಪ್ರವಾಸಿ ತಾಣಗಳನ್ನು ಗುರುತಿಸಿ ಅಭಿವೃದ್ಧಿಪಡಿಸಿ ವ್ಯಾಪಕ ಪ್ರಚಾರ ಕೈಗೊಳ್ಳುವುದು. –  ಕೇರಳ ಮಾದರಿಯಲ್ಲಿ ಬೋಟ್‌ಹೌಸ್‌, ಜಲ ಸಾಹಸ ಕ್ರೀಡೆಗಳಿಗೆ ಒತ್ತು.
– ಪ್ರವಾಸೋದ್ಯಮ ಇಲಾಖೆಗೆ ಬಜೆಟ್‌ ಅನುದಾನ ಕಡಿಮೆ. ಆದರೆ ಹೊಸ ಪರಿಕಲ್ಪನೆ, ಯೋಜನೆಗಳ ಪ್ರಸ್ತಾವದ ಮೂಲಕ ಕೇಂದ್ರ ಅನುದಾನ ಪಡೆಯಬೇಕು.

Advertisement

– ಎಂ. ಕೀರ್ತಿಪ್ರಸಾದ್‌

Advertisement

Udayavani is now on Telegram. Click here to join our channel and stay updated with the latest news.

Next