“ಜೀರ್‌ಜಿಂಬೆ’ ಎಂಬ ಚಿತ್ರವೊಂದು ಪ್ರಶಸ್ತಿಗಳನ್ನು ಪಡೆದಿರುವ, ಆ ಮೂಲಕ ಸುದ್ದಿಯಾಗಿರುವ ವಿಚಾರ ನಿಮಗೆ ಗೊತ್ತಿರಬಹುದು. ಆ ನಂತರ ಆ ಚಿತ್ರ ದೊಡ್ಡ ಮಟ್ಟದಲ್ಲಿ ಸುದ್ದಿಯಾಗಿರಲಿಲ್ಲ. ಈಗ ಈ ಚಿತ್ರ ಸುದ್ದಿಯಲ್ಲಿದೆ. ಅದಕ್ಕೆ ಕಾರಣ ಮಕ್ಕಳ ದಿನಾಚರಣೆ. ಹೌದು, ನವೆಂಬರ್ 14 ಮಕ್ಕಳ ದಿನಾಚರಣೆ. ಹೀಗಾಗಿ, “ಜೀರ್‌ಜಿಂಬೆ’ ಚಿತ್ರ ಕೂಡಾ ಸೌಂಡ್ ಮಾಡುತ್ತಿದೆ. ಮಕ್ಕಳ ದಿನಾಚರಣೆಗೂ “ಜೀರ್‌ಜಿಂಬೆ’ಗೂ ಏನು ಸಂಬಂಧ ಎಂದು ನೀವು ಕೇಳಬಹುದು.
“ಜೀರ್‌ಜಿಂಬೆ’ ಮಕ್ಕಳ ಸಿನಿಮಾ. ಈಗ ಆ ಚಿತ್ರ ಬಿಡುಗಡೆಗೆ ಸಿದ್ಧವಾಗಿದ್ದು, ನವೆಂಬರ್ 15 ರಂದು ತೆರೆಕಾಣುತ್ತಿದೆ. ಈ ಮೂಲಕ ಮಕ್ಕಳಿಗೆ ಸಿನಿಮಾವನ್ನು ಕೊಡುಗೆಯಾಗಿ ನೀಡಲು ಚಿತ್ರತಂಡ ಮುಂದಾಗಿದೆ. ನಾಲ್ಕು ರಾಜ್ಯಪ್ರಶಸ್ತಿ ವಿಜೇತ ಹಾಗು ಹಲವಾರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನ ಕಂಡು ಎಲ್ಲರಿಂದಲೂ ಮೆಚ್ಚುಗೆಗೆ ಪಾತ್ರವಾಗಿರುವ ಈ ಚಿತ್ರವನ್ನು ಕಾರ್ತಿಕ್ ಸರಗೂರು ನಿರ್ದೇಶಿಸಿದ್ದಾರೆ.
ಎಲ್ಲಾ ಓಕೆ, “ಜೀರ್‌ಜಿಂಬೆ’ ಟೈಟಲ್‌ಗೂ ಕಥೆಗೂ ಹೇಗೆ ಹೊಂದಿಕೆಯಾಗುತ್ತದೆ ಎಂದು ನೀವು ಕೇಳಬಹುದು. ನಿರ್ದೇಶಕರು ಅದಕ್ಕೂ ಉತ್ತರಿಸುತ್ತಾರೆ. “ಇಡೀ ಸಿನಿಮಾ ಹೆಣ್ಣು ಮಗುವಿನ ಸುತ್ತ ಸಾಗಲಿದ್ದು, ಹೆಣ್ಣುಮಗುವಿನ ಜೀವನದ ಹಂತಗಳನ್ನು ಜೀರ್‌ಜಿಂಬೆಯ ಜೀವನದ ಹಂತದಂತೆ ಹೇಳಲು ಪ್ರಯತ್ನಿಸಿದ್ದೇನೆ. ಇಲ್ಲಿ ಸರ್ಕಾರಿ ಶಾಲೆಗಳಲ್ಲಿ ನೀಡುವ ಸೈಕಲ್ ಮತ್ತು ಅದರೊಂದಿಗೆ ಹೆಣ್ಣು ಮಗುವಿನ ಸಂಬಂಧವನ್ನು ಹೇಳಿದ್ದೇನೆ.
ಜೀವನದ ಪ್ರತಿ ಹಂತಗಳಲ್ಲಿ ಎದುರಾಗುವ ಸವಾಲುಗಳನ್ನು ಹೇಗೆ ಎದುರಿಸಿ ಮುನ್ನಡೆಯುತ್ತಾಳೆ ಎಂಬ ಅಂಶದೊಂದಿಗೆ ಸಿನಿಮಾ ಸಾಗುತ್ತದೆ’ ಎನ್ನುವುದು ನಿರ್ದೇಶಕ ಕಾರ್ತಿಕ್ ಸರಗೂರು ಮಾತು. ಅಂದಹಾಗೆ, ಇದು ಕ್ರೌಡ್ ಫಂಡಿಂಗ್ ಮೂಲಕ ನಿರ್ಮಾಣವಾದ ಚಿತ್ರ. ಸುಮಾರು 36 ಜನ ಈ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಚಿತ್ರವನ್ನು ಮೆಚ್ಚಿಕೊಂಡಿರುವ ಪುಷ್ಕರ್ ಫಿಲಂಸ್‌ನ ಪುಷ್ಕರ್ ಕೂಡಾ ಸಿನಿಮಾದ ನಿರ್ಮಾಣ ಹಾಗೂ ಬಿಡುಗಡೆಯಲ್ಲಿ ಕೈ ಜೋಡಿಸಿದ್ದಾರೆ.
ಮಕ್ಕಳು ನೋಡುವಂತಹ ಒಳ್ಳೆಯ ಅಂಶಗಳಿರುವ ಸಿನಿಮಾ ಇದಾಗಿದ್ದರಿಂದ ತಾವು ನಿರ್ಮಾಣದಲ್ಲಿ ಪಾಲ್ಗೊಂಡಿದ್ದಾಗಿ ಹೇಳುತ್ತಾರೆ. ಈ ಚಿತ್ರವನ್ನು ಪೋಷಕರು ಹಾಗೂ ಮಕ್ಕಳು ನೋಡಿ ಆನಂದಿಸಬಹುದು ಎನ್ನಲು ಅವರು ಮರೆಯುವುದಿಲ್ಲ. ಚಿತ್ರದಲ್ಲಿ “ಬೆಳದಿಂಗಳ ಬಾಲೆ’ ಖ್ಯಾತಿಯ ಸುಮನ್ ನಗರ್‌ಕರ್ ಪ್ರಮುಖ ಪಾತ್ರವೊಂದರಲ್ಲಿ ನಟಿಸಿದ್ದಾರೆ. ಜೊತೆಗೆ ರಂಗಭೂಮಿ ಕಲಾವಿದರು ಕಾಣಿಸಿಕೊಂಡಿದ್ದಾರೆ.