ಯಳಂದೂರು (ಚಾಮರಾಜನಗರ): ಜಿಲ್ಲೆಯ ಪ್ರಸಿದ್ಧ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯ ಕೆ.ಗುಡಿಯಲ್ಲಿ ಸೋಮವಾರ ಸಫಾರಿಗೆ ತೆರಳಿದ ವಾಹನದ ಹಿಂದೆ- ಮುಂದೆ ಎರಡು ಆನೆಗಳು ಹಿಂಬಾಲಿಸಿದ್ದು ವಾಹನ ಚಾಲಕನ ಸಮಯಪ್ರಜ್ಞೆಯಿಂದ ಪ್ರವಾಸಿಗರು ಬಚಾವಾಗಿ ಬಂದಿರುವ ಘಟನೆ ನಡೆದಿದೆ.
ಕೆ.ಗುಡಿಯಲ್ಲಿ ಸಫಾರಿಗೆ ತೆರಳಿದ್ದ ಸಂದರ್ಭದಲ್ಲಿ ಇಲ್ಲಿನ ಭತ್ತದ ಗದ್ದೆ ಕೆರೆಯ ಬಳಿ ಈ ಘಟನೆ ನಡೆದಿದೆ.
ಇದನ್ನೂ ಓದಿ:ಕಿಡಿಗೇಡಿಗಳ ಕೊಡಲಿ ಏಟಿಗೆ ನಾಶವಾದ ಸಾಧಕ ಬೆಳೆಸಿದ ಸಾಲು ಮರಗಳು
ವಾಹನ ಚಲಿಸುವ ವೇಳೆ ಆನೆಗಳ ಗುಂಪು ಕಾಡಿನ ರಸ್ತೆಯ ಪಕ್ಕದಲ್ಲಿ ನಿಂತಿದೆ. ಆದರೆ ಇದ್ದಕ್ಕಿದ್ದಂತೆ ಒಂದು ಆನೆ ಸಫಾರಿಯ ಜೀಪ್ ನ ಹಿಂಭಾಗದಲ್ಲಿ ಓಡಿಸಿಕೊಂಡು ಬಂದಿದೆ. ಚಾಲಕ ನಾಗರಾಜು ವೇಗವಾಗಿ ವಾಹನ ಚಾಲನೆ ಮಾಡಿದ್ದಾರೆ. ಇದೇ ಸಂದರ್ಭದಲ್ಲಿ ವಾಹನದ ಮುಂಭಾಗದಲ್ಲಿ ಮತ್ತೊಂದು ಆನೆ ಬಂದಿದೆ, ಆದರೂ ಕೂಡ ಜೀಪ್ ಚಾಲಕ ಧೈರ್ಯದಿಂದ ವಾಹನ ಚಲಾಯಿಸಿದ್ದಾರೆ. ವಾಹನ ಜೋರಾಗಿ ಚಲಾಯಿಸಿದ್ದರಿಂದ ಆನೆ ವೇಗವಾಗಿ ಓಡಿ ರಸ್ತೆಯಿಂದ ಸರಿದು ಕಾಡಿಗೆ ಓಡಿದೆ.
ಇದನ್ನೂ ಓದಿ: ಮತ್ತೆ ಲಯಕ್ಕೆ ಮರಳಿದ ವಿರಾಟ್: ಒಂದು ಪಂದ್ಯ- ಹಲವು ದಾಖಲೆಗಳು
ಜೀಪ್ ನಲ್ಲಿದ್ದ ಪ್ರವಾಸಿಗರೊಬ್ಬರು ಈ ವೀಡಿಯೊವನ್ನು ತಮ್ಮ ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪ್ರವಾಸಿಗರನ್ನು ಆನೆ ದಾಳಿಯಿಂದ ಕಾಪಾಡಿದ ಚಾಲಕನಿಗೆ ಎಲ್ಲೆಡೆ ಪ್ರಶಂಸೆ ವ್ಯಕ್ತವಾಗುತ್ತಿದೆ.