ಹೊಸದಿಲ್ಲಿ: ಜಾಯಿಂಟ್ ಎಂಟ್ರಾನ್ಸ್ ಎಕ್ಸಾಮಿನೇಷನ್(ಜೆಇಇ)ನ ದಿನಾಂಕಗಳಲ್ಲಿ ಮತ್ತೊಮ್ಮೆ ಬದಲಾವಣೆ ಮಾಡಲಾಗಿದೆ.
ಪರಿಷ್ಕೃತ ವೇಳಾಪಟ್ಟಿಯಂತೆ ಎ.21, 24, 25, 29, ಮೇ 1 ಹಾಗೂ 2ರಂದು ಪರೀಕ್ಷೆ ನಡೆಯಲಿದೆ ಎಂದು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ) ಸೋಮವಾರ ತಿಳಿಸಿದೆ.
ವಿವಿಧ ರಾಜ್ಯಗಳ ಪದವಿ ಪೂರ್ವ ತರಗತಿಗಳ ಪರೀಕ್ಷೆಗಳೂ ಅದೇ ಸಂದರ್ಭದಲ್ಲಿ ನಡೆಯಲಿದೆ. ಹೀಗಾಗಿ, ದಿನಾಂಕಗಳಲ್ಲಿ ಬದಲಾವಣೆ ಮಾಡಬೇಕೆಂದು ಮನವಿ ಸಲ್ಲಿಕೆಯಾಗಿದ್ದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಎನ್‌ಟಿಎ ತಿಳಿಸಿದೆ.
ಈ ಹಿಂದೆ ಪ್ರಕಟವಾಗಿರುವ ವೇಳಾಪಟ್ಟಿ ಪ್ರಕಾರ ಜೆಇಇ -2022 ಸೆಷನ್ 1ರ ಪರೀಕ್ಷೆಗಳು ಎ.16ರಿಂದ 21ರ ವರೆಗೆ ನಡೆಯಬೇಕಾಗಿತ್ತು.
ಜೆಇಇ ವೇಳಾಪಟ್ಟಿಯ ಕಾರಣದಿಂದಾಗಿ ಕರ್ನಾಟಕದಲ್ಲಿ ಹಲವಾರು ಬಾರಿ ಪಿಯುಸಿ ಪರೀಕ್ಷಾ ದಿನಾಂಕಗಳನ್ನು ಬದಲಿಸಲಾಗಿದೆ. ಇತ್ತೀಚೆಗಷ್ಟೇ ಜೆಇಇ ಪರೀಕ್ಷೆ ಜತೆಗೆ ವೇಳಾಪಟ್ಟಿ ಸಂಘರ್ಷ ಬೇಡವೆಂದು ಪಿಯು ಮಂಡಳಿ ಪರೀಕ್ಷಾ ದಿನಾಂಕ ಬದಲಿಸಿತ್ತು. ಈಗ ಮತ್ತೆ ಕರ್ನಾಟಕದ ಪಿಯುಸಿ ಪರೀಕ್ಷೆ ವೇಳೆಯಲ್ಲೇ ಮತ್ತೆ ಜೆಇಇ ನಿಗದಿಯಾಗಿದೆ. ಈ ಮೂಲಕ ವಿದ್ಯಾರ್ಥಿಗಳಲ್ಲಿ ಗೊಂದಲಕ್ಕೂ ಕಾರಣವಾಗಿದೆ.
ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜೆಇಇ ಮತ್ತು ದ್ವಿತೀಯ ಪರೀಕ್ಷಾ ವೇಳಾಪಟ್ಟಿಯನ್ನು ಮತ್ತೊಮ್ಮೆ ಪರಿಶೀಲನೆ ಮಾಡುತ್ತೇವೆ. ಒಂದು ವೇಳೆ ಅಗತ್ಯ ಎನಿಸಿದರೆ, ಬದಲಾವಣೆ ಮಾಡುತ್ತೇವೆ. ಇಲ್ಲವಾದಲ್ಲಿ ನಿಗದಿತ ವೇಳಾಪಟ್ಟಿಯಂತೆಯೇ ಪರೀಕ್ಷೆ ನಡೆಯಲಿದೆ. ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗದೆ ನಿಶ್ಚಿಂತೆಯಲ್ಲಿರಿ.
– ಆರ್. ರಾಮಚಂದ್ರನ್,
ಪಿಯು ಇಲಾಖೆ ನಿರ್ದೇಶಕರು