Advertisement

ಮೆದುಳು ಜ್ವರ ತಡೆಗಟ್ಟಲು ಜೆಇ ಲಸಿಕಾ ಅಭಿಯಾನ; ಮಕ್ಕಳ ಆರೋಗ್ಯಕ್ಕೆ ಅಗತ್ಯ: ಕೂರ್ಮಾರಾವ್‌

07:13 PM Dec 05, 2022 | Team Udayavani |

ಉಡುಪಿ: ಜಿಲ್ಲೆಯಲ್ಲಿನ 1ರಿಂದ 15 ವರ್ಷದೊಳಗಿನ ಮಕ್ಕಳು ಮೆದುಳು ಜ್ವರ ಬಾರದಂತೆ ತಡೆಯಲು ಜೆ.ಇ. ಲಸಿಕೆ ಪಡೆಯುವುದು ಅತ್ಯಗತ್ಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಪಡೆಯಲು ಪ್ರೇರೇಪಿಸುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್‌ ಎಂ. ತಿಳಿಸಿದರು.

Advertisement

ಉಡುಪಿಯ ಬೋರ್ಡ್‌ ಹೈಸ್ಕೂಲ್‌ನಲ್ಲಿ ನಡೆದ ಮೆದುಳು ಜ್ವರ ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮೆದುಳು ಜ್ವರವು 1 ರಿಂದ 15 ವರ್ಷದೊಳಗಿನ ಮಕ್ಕಳನ್ನು ಬಾಧಿಸುವುದರಿಂದ ಮಕ್ಕಳಲ್ಲಿ ನರ ದೌರ್ಬಲ್ಯ, ಬುದ್ಧಿಮಾಂದ್ಯತೆ ಸೇರಿದಂತೆ ಶಾಶ್ವತ ಅಂಗವೈಕಲ್ಯ ಹಾಗೂ ಮರಣ ಸಂಭವಿಸುವ ಸಾಧ್ಯತೆಗಳಿರುವುದರಿಂದ ಮುನ್ನೆಚ್ಚರಿಕೆಯಾಗಿ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸಬೇಕು. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇಲ್ಲ ಎಂದರು.

1,932 ಲಸಿಕಾ ಕೇಂದ್ರ
ಜಿಲ್ಲೆಯಲ್ಲಿ ಈ ಲಸಿಕಾ ಅಭಿಯಾನದಲ್ಲಿ 2,18,324 ಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಿದ್ದು, ಒಟ್ಟು 1,932 ಲಸಿಕಾ ಕೇಂದ್ರಗಳನ್ನು ಗುರುತಿಸಲಾಗಿದೆ. ಶಾಲೆ, ಅಂಗನವಾಡಿ, ಆರೋಗ್ಯ ಕೇಂದ್ರ ಮತ್ತು ಸಮುದಾಯ ಮಟ್ಟದಲ್ಲಿ ಲಸಿಕಾ ಶಿಬಿರಗಳನ್ನು ಆಯೋಜಿಸಲಾಗುತ್ತಿದ್ದು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಅರೋಗ್ಯ ಇಲಾಖೆ ಸಿಬಂದಿ ಈ ಕಾರ್ಯಕ್ರಮದಲ್ಲಿ ಶೇ.100 ಗುರಿ ಸಾಧಿಸುವಂತೆ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ನಾಗಭೂಷಣ ಉಡುಪ ಪ್ರಾಸ್ತಾವನೆಗೈದರು.

Advertisement

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ| ರಾಮರಾವ್‌, ಜಿಲ್ಲಾ ಏಡ್ಸ್‌ ನಿಯಂತ್ರಣಾಧಿಕಾರಿ ಡಾ| ಚಿದಾನಂದ ಸಂಜು, ಜಿಲ್ಲಾಸ್ಪತ್ರೆಯ ವೈದ್ಯೆ ಡಾ| ವೀಣಾ, ವಿಶ್ವ ಆರೋಗ್ಯ ಸಂಸ್ಥೆ ಪ್ರತಿನಿಧಿ ಡಾ| ಕೀರ್ತಿನಾಥ್‌ ಬಲ್ಲಾಳ್‌, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ ವೀಣಾ ವಿವೇಕಾನಂದ, ಬೋರ್ಡ್‌ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯಿನಿ ಶಾಂತಿ ಪೈ, ಪ.ಪೂ. ಕಾಲೇಜಿನ ಪ್ರಾಂಶುಪಾಲೆ ಲೀಲಾಬಾಯಿ ಭಟ್‌ ಮತ್ತಿತರರು ಉಪಸ್ಥಿತರಿದ್ದರು.

ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ| ನಾಗರತ್ನಾ ಸ್ವಾಗತಿಸಿ, ವಂದಿಸಿದರು. ಜಿಲ್ಲಾ ಆರ್‌.ಸಿ.ಎಚ್‌.ಅಧಿಕಾರಿ ಡಾ| ಎಂ.ಜಿ. ರಾಮ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next