Advertisement

ತಾಳ್ಮೆಯಿಂದ ಕೆಲಸ ಮಾಡಿ ಜೆಡಿಯು ಅಧಿಕಾರಕ್ಕೆ ತನ್ನಿ: ನಿತೀಶ್‌ ಕುಮಾರ್

06:40 AM Apr 12, 2018 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಅಧಿಕಾರ ರಾಜಕೀಯದತ್ತ ಹೊರಟಿರುವ ಸಂಯುಕ್ತ ಜನತಾದಳಕ್ಕೆ (ಜೆಡಿಯು) ಉತ್ತಮ ಆರಂಭ ಸಿಕ್ಕಿದ್ದು, ಈ ಬಾರಿ ಅಲ್ಲದಿದ್ದರೂ ಮುಂದೆ ಪಕ್ಷ ಅಧಿಕಾರಕ್ಕೆ ಬರಲಿದೆ. ಅದುವರೆಗೆ ತಾಳ್ಮೆಯಿಂದ ಪಕ್ಷ ಬೆಳೆಸಲು ಕೆಲಸ ಮಾಡಬೇಕು ಎಂದು ಜೆಡಿಯು ರಾಷ್ಟ್ರೀಯ ಅಧ್ಯಕ್ಷ ಹಾಗೂ ಬಿಹಾರ್‌ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಹೇಳಿದ್ದಾರೆ.

Advertisement

ವೈಯಾಲಿಕಾವಲ್‌ನ ಚೌಡಯ್ಯ ಸ್ಮಾರಕ ಭವನದಲ್ಲಿ ಜೆಡಿಯು ಕರ್ನಾಟಕ ಬುಧವಾರ ಏರ್ಪಡಿಸಿದ್ದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಬಲಾಡ್ಯವಾಗಿ ಇಲ್ಲದಿದ್ದರೂ ಏಕಾಂಗಿಯಾಗಿ ಸ್ಪರ್ಧೆ ಮಾಡಿರುವ ಬಗ್ಗೆ ಅನೇಕರು ಕುಹಕವಾಡಬಹುದು. ಆದರೆ, ಪಕ್ಷಕ್ಕೆ ಉತ್ತಮ ಆರಂಭ ಸಿಕ್ಕಿದೆ. ಕಾರ್ಯಕರ್ತರು ತಾಳ್ಮೆಯಿಂದ ಕೆಲಸ ಮಾಡಿದರೆ ಮುಂದಿನ ದಿನಗಳಲ್ಲಿ ಅಧಿಕಾರಕ್ಕೆ ಬರಲಿದೆ ಎಂಬ ಭರವಸೆ ಇದೆ ಎಂದರು.

ಈಗಿನ ರಾಜಕಾರಣದಲ್ಲಿ ಸೇವೆಯ ಬದಲು ಹಣ ಮತ್ತು ಆಸ್ತಿ ಮಾಡಲು ಬರುವವರೇ ಹೆಚ್ಚು. ಹಣ ಮತ್ತು ಆಸ್ತಿ ಮಾಡಿಕೊಳ್ಳಲು ರಾಜಕಾರಣ ಬಳಸುವ ಪ್ರವೃತ್ತಿಗೆ ಕಡಿವಾಣ ಹಾಕಬೇಕು. ಅಭಿವೃದ್ಧಿಯ ಕೆಲಸ ಮಾಡಬೇಕಾದರೆ ಮನಸ್ಸಿನಲ್ಲಿ ಸೇವೆಯ ಭಾವನೆ ಇರಬೇಕು. ಆ ನಿಟ್ಟಿನಲ್ಲಿ ಜೆಡಿಯು ಕಾರ್ಯಕರ್ತರು ಮತ್ತು ಜನಪ್ರತಿನಿಧಿಗಳನ್ನು ಬೆಳೆಸಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಜೆ.ಎಚ್‌.ಪಟೇಲ್‌, ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಮುಂತಾದವರು ಭೂಸುಧಾರಣೆ, ಮೀಸಲಾತಿ, ಮಹಿಳಾ ಮೀಸಲಾತಿ, ಮಾಹಿತಿ ತಂತ್ರಜ್ಞಾನ ಅಭಿವೃದ್ಧಿ ಸೇರಿದಂತೆ ಸಮಗ್ರ ಬೆಳವಣಿಗೆಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಈ ಪೈಕಿ ದೇವೇಗೌಡರು ಜೆಡಿಎಸ್‌ ಸ್ಥಾಪಿಸದೇ ಇದ್ದರೆ ಅವರೀಗ ಜೆಡಿಯುನಲ್ಲಿ ಇರುತ್ತಿದ್ದರು ಎಂದು ಹೇಳಿದ ನಿತೀಶ್‌ ಕುಮಾರ್‌, ಜೆಡಿಯು ಮತ್ತೆ ತನ್ನ ಗತವೈಭವಕ್ಕೆ ಮರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಮಾಜದಲ್ಲಿ ಪರಸ್ಪರ ಶಾಂತಿ, ಪ್ರೀತಿ, ನಂಬಿಕೆ ಇರಬೇಕು. ಸಮುದಾಯ, ಕೋಮುಗಳ ಮಧ್ಯೆ ನಡೆಯುವ ಜಗಳವನ್ನು ದಂಗೆಯಾಗಲು ಅವಕಾಶ ಕೊಡಬಾರದು. ಪರಸ್ಪರ ಗೌರವಿಸುವ ಮೂಲಕ ಶಾಂತಿ ಮೂಡಿಸುವ ಕೆಲಸ ಆಗಬೇಕು. ಪ್ರಸ್ತುತ ಭಾರತದಲ್ಲಿ ಇಂತಹ ಪ್ರಯತ್ನ ನಡೆಯುತ್ತಿದ್ದು, ಪರಸ್ಪರರನ್ನು ಎತ್ತಿಕಟ್ಟುವ ರಾಜಕಾರಣ ಹೆಚ್ಚು ದಿನ ಉಳಿಯುವುದಿಲ್ಲ ಎಂದರು.

Advertisement

ತಮ್ಮ ಭಾಷಣವನ್ನು ಬಿಹಾರ್‌ನಲ್ಲಿ ತಮ್ಮ ಸರ್ಕಾರ ಮಾಡಿದ ಸಾಧನೆ ಮತ್ತು ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್‌ ಮತ್ತು ಜೆ.ಎಚ್‌.ಪಟೇಲರ ಹೊಗಳಿಕೆಗೆ ಮೀಸಲಿಟ್ಟ ನಿತೀಶ್‌ ಕುಮಾರ್‌, ಬಿಹಾರ್‌ನಲ್ಲಿ ನಮ್ಮ ಸರ್ಕಾರ ಕೇವಲ ಅಭಿವೃದ್ಧಿಯ ಬಗ್ಗೆ ಕೆಲಸ ಮಾಡುವ ಬದಲು ನ್ಯಾಯದೊಂದಿಗೆ ಅಭಿವೃದ್ಧಿ ಎಂಬ ಯೋಜನೆಯೊಂದಿಗೆ ಜನ ಕಲ್ಯಾಣ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಸರ್ಕಾರದ ಎಲ್ಲಾ ಯೋಜನೆಗಳು ಸಾರ್ವತ್ರಿಕವಾಗಿ ಅನ್ವಯವಾಗುತ್ತಿದ್ದು, ಯಾವುದೇ ಒಂದು ಯೋಜನೆ ಒಂದು ಸಮುದಾಯದ ಪರ ಎಂದು ಇಲ್ಲ ಎಂದರು.

ಜೆ.ಎಚ್‌.ಪಟೇಲ್‌ ಕುರಿತು ಮಾತನಾಡಿದ ಅವರು, ಸಂಸತ್ತಿನಲ್ಲಿ ಮೊಟ್ಟ ಮೊದಲ ಬಾರಿಗೆ ಕನ‚°ಡದಲ್ಲಿ ಭಾಷಣ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದವರು ಜೆ.ಎಚ್‌.ಪಟೇಲರು.  ಮೀಸಲಾತಿ ಜಾರಿಗೆ ತರುವಲ್ಲೂ ಪ್ರಮುಖ ಪಾತ್ರ ವಹಿಸಿದ್ದರು ಎಂದರು. ಮಹಿಮ ಪಟೇಲ್‌ ಕುರಿತು, ನನ್ನ ಮತ್ತು ಮಹಿಮಾ ಪಟೇಲ್‌ ಅವರ ಯೋಚನೆ ಒಂದೇ ರೀತಿ ಇದೆ. ಇಂಥವರು ಅಧಿಕಾರಕ್ಕೆ ಬಂದರೆ ಈಗಾಗಲೇ ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ಕರ್ನಾಟಕ ದೇಶದಲ್ಲಿ ನಂಬರ್‌ ವನ್‌ ರಾಜ್ಯವಾಗಲಿದೆ ಎಂದು ಹೇಳಿದರು.
ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್‌, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಸಂಜಯ್‌ ಜಾ, ಅಖೀಲೇಶ್‌ ಕಟಿಯಾರ್‌, ಆರ್‌.ಸಿ.ಪಿ.ಸಿಂಗ್‌, ರಾಷ್ಟ್ರೀಯ ವಕ್ತಾರ ಅಜಯ್‌ ಅಲೋಕ್‌, ಜೆಎಚ್‌ ಪಟೇಲರ ಪುತ್ರರಾದ ತೇಜಸ್ವಿ ಪಟೇಲ್‌, ತ್ರಿಶೂಲ್‌ ಪಾಣಿ ಪಟೇಲ್‌ ಮತ್ತಿತರರು ಇದ್ದರು.

ಏ. 15ರಂದು ಜೆಡಿಯು ಮೊದಲ ಪಟ್ಟಿ
ಮುಂಬರುವ ವಿಧಾನಸಭೆ ಚುನಾವಣೆ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏ. 15ರಂದು ಬಿಡುಗಡೆ ಮಾಡುವುದಾಗಿ ಜೆಡಿಯು ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್‌ ಹೇಳಿದ್ದಾರೆ.ನಮಗೆ ಈ ಬಾರಿಯೇ ಅಧಿಕಾರಕ್ಕೆ ಬರುತ್ತೇವೆ ಎಂಬ ಹುಂಬತನವಿಲ್ಲ. 20ರಿಂದ 30 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ತೀರ್ಮಾನಿಸಲಾಗಿದೆ. ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಏ. 15ರಂದು ಬಿಡುಗಡೆ ಮಾಡಲಾಗುವುದು. ಇದಾದ 2-3 ದಿನಗಳಲ್ಲಿ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ ಎಂದು ತಿಳಿಸಿದರು.

ನಾವು ಕಡಿಮೆ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದರೂ ಸಾಕಷ್ಟು ಸ್ಥಾನಗಳಲ್ಲಿ ಗೆಲ್ಲಲಿದ್ದೇವೆ. ವಿಧಾನಸಭೆ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದ್ದು, ಜೆಡಿಯು ಬೆಂಬಲವಿಲ್ಲದೆ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂಬ ಪರಿಸ್ಥಿತಿ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ಪಕ್ಷದ ಗುರುತಾದ ಬಾಣದಂತೆ ಜೆಡಿಯು ರಾಜ್ಯದಲ್ಲಿ ಶರವೇಗದಲ್ಲಿ ಬೆಳೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next