Advertisement

ಪ್ರಾದೇಶಿಕ ಪಕ್ಷ ನಡೆಸಿಕೊಳ್ಳುವುದನ್ನು ಕಾಂಗ್ರೆಸ್‌ ಅರಿತುಕೊಳ್ಳಲಿ

12:30 AM Jan 04, 2019 | Team Udayavani |

ಬೆಂಗಳೂರು: ಜಾತ್ಯತೀತ ವ್ಯವಸ್ಥೆಯಲ್ಲಿ ಕಾಂಗ್ರೆಸ್‌ ಹಿರಿಯಣ್ಣನಂತೆ. ಪ್ರಾದೇಶಿಕ ಪಕ್ಷಗಳನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದು ಅವರೂ ಅರ್ಥ ಮಾಡಿಕೊಳ್ಳಬೇಕು ಎಂದು ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸೂಕ್ಷ್ಮವಾಗಿ ಹೇಳಿದ್ದಾರೆ.

Advertisement

ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ಪಕ್ಷ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು,  ನಾನು ಯಾರ ವಿರುದ್ಧವೂ ದೂರಲು ಹೋಗುವುದಿಲ್ಲ. ಆದರೂ ಕಾಂಗ್ರೆಸ್‌ ಅರ್ಥ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

ಕುಮಾರಸ್ವಾಮಿಯವರಿಗೆ  ಸರ್ಕಾರ ನಡೆಸುವಲ್ಲಿ ಎಷ್ಟು ನೋವಿದೆ ಅಂತ ಗೊತ್ತಿದೆ. ಆದರೆ, ಅವರು ಆ ನೋವನ್ನು ಸಹಿಸಿಕೊಳ್ಳಲೇಬೇಕು ಎಂದು ಹೇಳಿದರು.

ಪ್ರಸ್ತುತ  ಸಂದರ್ಭದಲ್ಲಿ ದೇಶದಲ್ಲಿ ಎಲ್ಲ ಜಾತ್ಯತೀತ ಪಕ್ಷಗಳು ಒಟ್ಟಾಗಿ ಹೋಗಬೇಕಿದೆ. ಅದು ಅನಿವಾರ್ಯವೂ ಹೌದು. ಹೀಗಾಗಿ, ನಾವೂ ಕಾಂಗ್ರೆಸ್‌ ಜತೆ ಸಮ್ಮಿಶ್ರ ಸರ್ಕಾರ ಮಾಡಿದ್ದೇವೆ. ಲೋಕಸಭೆ ಚುನಾವಣೆಗೂ ಜತೆಗೂಡಿ ಹೋರಾಟ ಮಾಡಲಿದ್ದೇವೆ.ನಮ್ಮ ಪಕ್ಷದ ಕಾರ್ಯಕರ್ತರು, ಮುಖಂಡರು ಸ್ಥಳೀಯ ಮಟ್ಟದಲ್ಲಿ ಏನೇ ವ್ಯತ್ಯಾಸವಿದ್ದರೂ ಬದಿಗಿಟ್ಟು ಒಗ್ಗಟ್ಟಾಗಿ ಚುನಾವಣೆ ಎದುರಿಸಬೇಕು ಎಂದು ಹೇಳಿದರು.

ಬಿ.ಎಸ್‌.ಯಡಿಯೂರಪ್ಪ ವಿರುದ್ಧ ವಾಗಾœಳಿ ನಡೆಸಿದ ಗೌಡರು, ಯಾವ ಕಾರಣ ಇಟ್ಟುಕೊಂಡು ಅಪ್ಪ ಮಕ್ಕಳನ್ನು ಮುಗಿಸುತ್ತೇವೆ ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ. ನಾವು ಅಂಥ ಪಾಪ ಏನು ಮಾಡಿದ್ದೇವೆ ಎಂದು ಪ್ರಶ್ನಿಸಿದರು.ಪಕ್ಷ ಸಂಘಟನೆಗೆ ಇಂದಿನಿಂದ ಎಲ್ಲರೂ ಶ್ರಮಿಸಬೇಕು. ರೇವಣ್ಣ ಅವರು ಒಳ್ಳೆಯ ದಿನ ಯಾವುದು ಎಂದು ನಿಗದಿ ಮಾಡಿದ್ದಾರೆ. ದೇವರ ಮೇಲೆ ನಂಬಿಕೆ ಇರುವವರು ಗುರಿ ಮುಟ್ಟುತ್ತಾರೆ ಎಂದು ಹೇಳಿದರು.

Advertisement

ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮಾತನಾಡಿ, ಹಿಂದೆ ಇದೇ ವೇದಿಕೆಯಲ್ಲಿ ಭಾವೋದ್ವೇಗಕ್ಕೆ ಒಳಗಾಗಿ ಮಾತನಾಡಿದ್ದೆ. ಆಗ ಅದಕ್ಕೆ ನಾನಾ ಅರ್ಥ ಕಲ್ಪಿಸಿದರು.  ಇದು ದೇವರು ಕೊಟ್ಟ ಅದಿಕಾರ. ಕುಮಾರಸ್ವಾಮಿಗೆ ಬೆಂಬಲಕೊಟ್ಟು ಮುಖ್ಯಮಂತ್ರಿ ಮಾಡಬೇಕು ಎಂದು ಕಾಂಗ್ರೆಸ್‌ನವರಿಗೆ ಮನಸ್ಸು ಕೊಟ್ಟಿದ್ದು ಯಾವುದೇ ಒಂದು ಕಾಣದ ಶಕ್ತಿ  ಎಂದು ತಿಳಿಸಿದರು.

ಉಮೇಶ್‌ ಕತ್ತಿ ಆರನೇ ತಾರೀಖು ಒಳಗೆ ಸರ್ಕಾರ ರಚನೆ ಮಾಡುವುದಾಗಿ ಹೇಳಿದ್ದರು. ಹಾಗಾಗಿ ಅವರಿಗೆ ನನ್ನಿಂದ ತೊಮದರೆಯಾಗುವುದು ಬೇಡ. ಹೊಸ ಸರ್ಕಾರ ರಚನೆ ಕಸರತ್ತು ಮಾಡಿಕೊಳ್ಳಲಿ ಎಂದು ನಾನು ವಿದೇಶಕ್ಕೆ ಹೋಗಿದ್ದೆ ಎಂದರು.

ರೈತರಿಗೆ ಏನಾದ್ರೂ ಮಾಡಿ. ರೈತರನ್ನು ಕಡೆಗಣಿಸಬೇಡಿ. ಹಾಗೇನಾದ್ರೂ ಕಡೆಗಣಿಸಿದರೆ ನಿಮ್ಮ ಸ್ಥಾನ ಉಳಿಯಲ್ಲ ಎಂದು ಪ್ರಧಾನಿ ನರೇಂದ್ರಮೋದಿ ಅವರಿಗೆ ನೇರವಾಗಿ ಹೇಳಿಬಂದಿದ್ದೇನೆ. ಫೆಬ್ರವರಿ 8 ರಂದು ಬಜೆಟ್‌ ಮಂಡಿಸಿ ಅಂದೇ ರೈತರ ಬೆಳೆ ಸಾಲ ಸಂಪೂರ್ಣ ಚುಕ್ತಾ ಆಗಲಿದೆ. ಬಜೆಟ್‌ ಯಾವಾಗ ಮಂಡಿಸಬೇಕು ಎಂಬ ಬಗ್ಗೆ ರೇವಣ್ಣ ಭವಿಷ್ಯ ನೋಡಿಲ್ಲ ಎಂದು ಚಟಾಕಿ ಹಾರಿಸಿದರು.

ನಿಗಮ ಮಂಡಳಿಗಳಿಗೆ ನೇಮಕ ಮಾಡಿಲ್ಲ, ಅಧಿಕಾರ ಹಂಚಿಕೆ ಮಾಡಿಲ್ಲ ಎಂದು ಕಾರ್ಯಕರ್ತರು ಮುಖಂಡರು ಹೇಳುತ್ತಾರೆ. ಹಿಂದೆ ಬಿಜೆಪಿ ಜತೆ ಮೈತ್ರಿ ಸರ್ಕಾರದಲ್ಲಿ ಯಾರನ್ನೂ ನೇಮಕ ಮಾಡಿರಲಿಲ್ಲ. ಆದರೆ ಈಗ ಮಾಡಬೇಕಿದೆ. ಆದರೆ, ಶಾಸಕರು ತ್ಯಾಗ ಮಾಡಬೇಕು. ಕಳೆದ ಚುನಾವಣೆಯಲ್ಲಿ ಸೋತ ಅಭ್ಯರ್ಥಿಗಳಿಗೆ ಅವಕಾಶ ಮಾಡಿಕೊಡಬೇಕು. ಇದಕ್ಕೆ ಶಾಸಕರು ಒಪ್ಪಿದರೆ ಮಾತ್ರ. ಇಲ್ಲದಿದ್ದರೆ ಶಾಸಕರಿಗೆ ಅವಕಾಶ ಎಂದು ಹೇಳಿದರು.

ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ವಿಶ್ವನಾಥ್‌ ಮಾತನಾಡಿ, ರಾಜ್ಯಾಧ್ಯಕ್ಷ ಸ್ಥಾನದಿಂದ ಬಿಡುಗಡೆ ಮಾಡಿ ಎಂದು ದೇವೇಗೌಡರಲ್ಲಿ ಮನವಿ ಮಾಡಿದೆ. ಅವರ ಮನೆಗೆ ಹೋಗಿ ಭೇಟಿ ಮಾಡಿದೆ. ಆದರೆ, ಪರಿಸ್ಥಿತಿ ಸರಿ ಇಲ್ಲ, ಇಂತಹ  ಸಂದರ್ಭದಲ್ಲಿ  ನೀವು ಇರಬೇಕು, ನೀವೇ ಮುಂದುವರಿಯಬೇಕು ಎಂದರು. 

ದೇವೇಗೌಡರ ಆರ್ಶೀವಾದ ಪಡೆದು ಬಂದೆ. ಬಿಡುಗಡೆಗಾಗಿ ಕೇಳಲು ಹೋಗಿದ್ದೆ, ವಿಶ್ವಾಸದ ಬಂಧನಕ್ಕೆ ಒಳಗಾದೆ ಎಂದು ಭಾವುಕರಾದರು. ಸಚಿವ ಬಂಡೆಪ್ಪ ಕಾಶಂಪುರ್‌, ಮಾಜಿ ಸಚಿವರಾದ ಕೆ.ಶ್ರೀನಿವಾಸಗೌಡ, ಬಸವರಾಜ ಹೊರಟ್ಟಿ, ಮುಖಂಡರಾದ ಪಿ.ಜಿ.ಆರ್‌.ಸಿಂಧ್ಯ, ಟಿ.ಎ.ಶರವಣ ಮತ್ತಿತರರು ಉಪಸ್ಥಿತರಿದ್ದರು.

ಗೌಡರ ಕಣ್ಣೀರು
ಜೆಪಿ ಭವನದಲ್ಲಿ ಮುಖಂಡರ ಸಭೆಯಲ್ಲಿ ಮಾತನಾಡುತ್ತಿದ್ದಾಗ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಕಣ್ಣೀರು ಹಾಕಿದರು. ನನ್ನ ಮಗ ತನ್ನ ಮಗನಾಣೆಗೂ ರೈತರ ಸಾಲ ಮನ್ನಾ ಮಾಡುವುದಾಗಿ ಹೇಳಿದ್ದಾನೆ. ಇರುವನೊಬ್ಬ ಮಗ, ಯಾರಿಗೋಸ್ಕರ ಮನ ಮೇಲೆ ಆಣೆ ಮಾಡಬೇಕು ಎನ್ನುತ್ತಾ ಗದ್ಗದಿತರಾದರು.

ದತ್ತಾ ಜೆಡಿಎಸ್‌ ಪ್ರಚಾರ ಸಮಿತಿ ಅಧ್ಯಕ್ಷ: ಲೋಕಸಭೆ ಚುನಾವಣೆಗೆ ಜೆಡಿಎಸ್‌ ಸಹ  ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಜಿ ಶಾಸಕ ವೈ.ಎಸ್‌.ವಿ.ದತ್ತಾ ಅವರನ್ನು ನೇಮಿಸಲಾಗಿದೆ. ಗುರುವಾರ ಜೆಪಿ ಭವನದಲ್ಲಿ ನಡೆದ ಪಕ್ಷದ ಮುಖಂಡರ ಸಭೆಯಲ್ಲಿ  ಈ ತೀರ್ಮಾನ ಘೊಷಿಸಲಾಗಿದೆ.

ಮುಂದಿನ ಲೋಕಸಭೆಗೆ ದೇವೇಗೌಡರ ಜತೆ 12 ಜನರನ್ನು ಆರಿಸಿ ಕಳುಹಿಸಿ. 16 ಸೀಟು ಗೆದ್ದಾಗ ದೇವೇಗೌಡರು ಪ್ರಧಾನಿಯಾದರು. 12 ಅಥವಾ 14 ಸೀಟು ಬಂದರೆ ಮೋದಿನೂ ದೇವೇಗೌಡರ ಮನೆ ಮುಂದೆ ಇರ್ತಾರೆ.
– ಎಚ್‌.ಡಿ.ಕುಮಾರಸ್ವಾಮಿ

ಯಡಿಯೂರಪ್ಪ ಅವರು ಯಾವ ಕಾರಣ ಇಟ್ಟುಕೊಂಡು ಅಪ್ಪ-ಮಕ್ಕಳನ್ನು ಮುಗಿಸುತ್ತೇವೆ ಎಂದು ಹೇಳುತ್ತಿದ್ದಾರೋ ಗೊತ್ತಿಲ್ಲ. ನಾವು ಅಂಥ ಪಾಪ ಏನು ಮಾಡಿದ್ದೇವೆ?.
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

Udayavani is now on Telegram. Click here to join our channel and stay updated with the latest news.

Next