ಬೆಂಗಳೂರು: ರಾಜಕೀಯ ಕ್ಷೇತ್ರದಲ್ಲಿ ಇನ್ನೊಬ್ಬರ ಕೈಕಾಲು, ನಾಲಿಗೆ ಕತ್ತರಿಸುವ ಸವಾಲು ಕೆಲವೊಮ್ಮೆ ಕೇಳಿಬರುತ್ತದೆ. ಆದರೆ, ಇದೀಗ ತನ್ನ ತಲೆಯನ್ನು ತಾನೇ ಕತ್ತರಿಸಿಕೊಳ್ಳುವ ಸವಾಲು ಕೇಳಿಬಂದಿದ್ದು, ಇದನ್ನು ಹಾಕಿದವರು ಜೆಡಿಎಸ್‌ನ ಅಮಾನತುಗೊಂಡ ಶಾಸಕ ಎಂ.ಝೆಡ್ ಜಮೀರ್ ಅಹ್ಮದ್ ಖಾನ್!
ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಶುಕ್ರವಾರ ಜೆಡಿಎಸ್ ಕಾರ್ಯಕರ್ತರ ಸಮಾವೇಶ ನಡೆಸಿದ್ದ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಜಮೀರ್ ವಿರುದ್ಧ ವಾಕ್‌ಪ್ರಹಾರ ನಡೆಸಿದ್ದಲ್ಲದೆ, “ಈ ಕ್ಷೇತ್ರದಲ್ಲಿ ಜೆಡಿಎಸ್ ಗೆಲ್ಲಿಸುತ್ತೇವೆ” ಎಂದು ಸವಾಲೆಸೆದಿದ್ದರು. ಇದಕ್ಕೆ ಶನಿವಾರ ಪ್ರತಿಕ್ರಿಯಿಸಿದ ಜಮೀರ್, “”ಇಲ್ಲಿ ಜೆಡಿಎಸ್ ಗೆದ್ದರೆ ನನ್ನ ರುಂಡ ಕತ್ತರಿಸಿ ಮಾಧ್ಯಮದವರ ಕೈಯಲ್ಲಿ ಇಡುತ್ತೇನೆ” ಎಂದು ಸವಾಲು ಹಾಕಿದ್ದಾರೆ.
“”ಕ್ಷೇತ್ರದ ಜನ ನನ್ನನ್ನು ಇಷ್ಟಪಟ್ಟು ಗೆಲ್ಲಿಸಿದ್ದಾರೆಯೇ ಹೊರತು ದೇವೇಗೌಡರನ್ನಲ್ಲ. ಆ ಜನ ನನ್ನನ್ನು ಮಗನಂತೆ ಭಾವಿಸಿದ್ದಾರೆ. ನನ್ನ ಕ್ಷೇತ್ರವಾದ ಚಾಮರಾಜಪೇಟೆಯಲ್ಲಿ ಜೆಡಿಎಸ್ ಸಮಾವೇಶ ನಡೆಸಲು ದೇವೇಗೌಡರು ಒಂದು ತಿಂಗಳು ಪ್ರಯತ್ನ ಪಟ್ಟಿದ್ದರು. ಕೊನೆಗೆ ಅರಮನೆ ಮೈದಾನದಲ್ಲಿ ಸಮಾವೇಶ ನಡೆಸಿದ್ದು, ಅದಕ್ಕೆ ಎಷ್ಟು ಮಂದಿ ಬಂದಿದ್ದರು ಎಂಬುದು ಎಲ್ಲರಿಗೂ ಗೊತ್ತಿದೆ. ಆ ಸಮಾವೇಶದಲ್ಲಿ ದೇವೇಗೌಡರು ಹೇಳಿದ ಮಾತು ನನಗೆ ಬೇಸರ ತರಿಸಿದೆ” ಎಂದರು.
ದೇವೇಗೌಡರ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಈ ರೀತಿ ರಾಜಕೀಯ ಮಾಡುತ್ತಾರೆ ಎಂದುಕೊಂಡಿರಲಿಲ್ಲ. ನಾನು ಯಾವತ್ತೂ ಕೀಳುಮಟ್ಟದ ರಾಜಕಾರಣ ಮಾಡಿಲ್ಲ ಮತ್ತು ಮಾಡುವುದೂ ಇಲ್ಲ. ಅಲ್ಪಸಂಖ್ಯಾತರ ಬಗ್ಗೆ ದೇವೇಗೌಡರಿಗೆ ಕಾಳಜಿಯಿಲ್ಲ ಎಂದು ಆರೋಪಿಸಿದರು.
ದೇವರು ಜಮೀರ್‌ಗೆ ಒಳ್ಳೇದು ಮಾಡಲಿ- ದೇವೇಗೌಡ
“ಅಯ್ಯೋ ಪಾಪ.. ಅವರು ರುಂಢ ಕತ್ತರಿಸಿಕೊಳ್ಳುವುದು ಬೇಡ. ಕಾಂಗ್ರೆಸ್‌ನಲ್ಲಿ ಅವರು ಇನ್ನೇನೇನೋ ಆಗಬೇಕಾಗಿದೆ. ಎಲ್ಲವನ್ನೂ ನಿರ್ಧಾರ ಮಾಡುವುದು ಮತದಾರರು ಮತ್ತು ಕಾಲ. ದೇವರು ಅವರಿಗೆ ಒಳ್ಳೆಯದು ಮಾಡಲಿ’.