Advertisement

ಪಕ್ಷ ಸಂಘಟನೆಯಲ್ಲಿ ಸೊರಗಿದ ಜೆಡಿಎಸ್‌

06:20 AM Oct 01, 2018 | Team Udayavani |

ಬೆಂಗಳೂರು: ಸಮ್ಮಿಶ್ರ ಸರ್ಕಾರದ ನೇತೃತ್ವ ವಹಿಸಿರುವ ಜೆಡಿಎಸ್‌ ತಳಮಟ್ಟದಿಂದ ಪಕ್ಷ ಸಂಘಟನೆಯಲ್ಲಿ ಸೊರಗುತ್ತಿದೆ.
ಎಚ್‌.ಡಿ.ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವಲ್ಲಿ ಬ್ಯುಸಿಯಾಗಿದ್ದಾರೆ. ದೇವೇಗೌಡರ ಒತ್ತಾಯಕ್ಕೆ ಕಟ್ಟುಬಿದ್ದು ಒಲ್ಲದ ಮನಸ್ಸಿನಿಂದ ರಾಜ್ಯಾಧ್ಯಕ್ಷ ಸ್ಥಾನ ವಹಿಸಿಕೊಂಡ ಎಚ್‌.ವಿಶ್ವನಾಥ್‌ ಸಂಘಟನೆಯಲ್ಲಿ ಪೂರ್ಣಪ್ರಮಾಣದಲ್ಲಿ ತೊಡಗಿಕೊಂಡಿಲ್ಲ.

Advertisement

ನೂತನ ರಾಜ್ಯಾಧ್ಯಕ್ಷರ ನೇಮಕ ಬೆನ್ನಲ್ಲೇ ಸಮಗ್ರ ಬದಲಾವಣೆ ಹಾಗೂ ಪುನರ್‌ರಚನೆ ಹಿನ್ನೆಲೆಯಲ್ಲಿ ಹಿಂದಿನ ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಘಟಕಗಳ ಅಧ್ಯಕ್ಷರನ್ನು ತೆಗೆದುಹಾಕಲಾಗಿದೆ.

ಪಕ್ಷದ ವಿಚಾರ ಜೆಪಿ ಭವನಕ್ಕೆ ಸೀಮಿತ, ವಿಧಾನಸೌಧವರೆಗೂ ಯಾರೂ ಬರಬಾರದು ಎಂದು ಕುಮಾರಸ್ವಾಮಿಯವರು ತಾಕೀತು ಮಾಡಿದ್ದಾರೆ.ಹೀಗಾಗಿ, ಸರ್ಕಾರ ಇದ್ದರೂ ಜೆಡಿಎಸ್‌ ಕಾರ್ಯಕರ್ತರು ಒಂದು ರೀತಿಯಲ್ಲಿ “ಅನಾಥ’ ಎಂಬಂತಾಗಿದೆ.

ಅತ್ತ ಜೆಪಿ ಭವನಕ್ಕೂ ಪಕ್ಷದ ಕಾರ್ಯಕರ್ತರು ತಲೆ ಹಾಕುತ್ತಿಲ್ಲ. ದೇವೇಗೌಡರು ಅಥವಾ ಕುಮಾರಸ್ವಾಮಿ ಪಕ್ಷದ ಕಚೇರಿಗೆ ಬಂದಾಗ ಮಾತ್ರ ತುಂಬಿ ತುಳುಕುತ್ತದೆ. ಇಲ್ಲದಿದ್ದರೆ ಕಚೇರಿ ಸಿಬ್ಬಂದಿ ಬಿಟ್ಟರೆ ಯಾರೂ ಇರುವುದಿಲ್ಲ. ಜೆಡಿಎಸ್‌ನ ಸಚಿವರು ಪಕ್ಷದ ಕಚೇರಿಗೆ ಬಂದಾಗಲೂ ಅಹವಾಲು ಹೊತ್ತು ಬರುವವರು ಕಡಿಮೆಯೇ. ಇತ್ತೀಚೆಗೆ ನಡೆದ ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲೂ ದೇವೇಗೌಡರಾಗಲಿ, ಕುಮಾರಸ್ವಾಮಿಯವಾಗಲಿ, ಎಚ್‌.ವಿಶ್ವನಾಥ್‌ ಆಗಲಿ ಪಕ್ಷದ ಅಭ್ಯರ್ಥಿಗಳ ಪರ ಹೆಚ್ಚಾಗಿ ಪ್ರಚಾರವೇ ಮಾಡಲಿಲ್ಲ. ಇದರಿಂದಾಗಿ ಒಂದು ರೀತಿಯಲ್ಲಿ ಪಕ್ಷಕ್ಕೂ ಸರ್ಕಾರಕ್ಕೂ ಸಂಪರ್ಕವೇ ಇಲ್ಲದಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಸಮ್ಮಿಶ್ರ ಸರ್ಕಾರ ರಚನೆಯಾದ ನಂತರ ಪಕ್ಷ ಸಂಘಟನೆ ವಿಚಾರದಲ್ಲಿ ಒಂದೇ ಒಂದು ಸಭೆಯೂ ಆಗಿಲ್ಲ. ಆಪರೇಷನ್‌ ಕಮಲ ಭೀತಿಯಿಂದ  ದೇವೇಗೌಡ ಹಾಗೂ ಕುಮಾರಸ್ವಾಮಿಯವರು ಸರ್ಕಾರ ಉಳಿಸಿಕೊಳ್ಳುವ ಕಸರತ್ತಿನಲ್ಲಿ ತೊಡಗಿದ್ದಾರೆ. ಹೀಗಾಗಿ, ಪಕ್ಷ ಸಂಘಟನೆ ಬಗ್ಗೆ ತಲೆಕಡಿಸಿಕೊಂಡಿಲ್ಲ.

Advertisement

ಲೋಕಸಭೆ ಚುನಾವಣೆಗೆ ಕಾಂಗ್ರೆಸ್‌ ಹಾಗೂ ಬಿಜೆಪಿ  ಈಗಾಗಲೇ ಸಾಕಷ್ಟು ಸಿದ್ಧತೆ ಕೈಗೊಂಡಿದೆ. ಕ್ಷೇತ್ರಾವಾರು ಸಭೆ ಸಹ ಮಾಡಿದೆ. ಆದರೆ, ಜೆಡಿಎಸ್‌ನಲ್ಲಿ ಆ ಬಗ್ಗೆ ಏನೂ ಚಟುವಟಿಕೆ ನಡೆಯುತ್ತಿಲ್ಲ. ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮೈತ್ರಿ ಮಾಡಿಕೊಂಡು ಎದುರಿಸುವುದು ಖಚಿತವಾಗಿರುವುದರಿಂದ ಕ್ಷೇತ್ರ ನಮಗೆ ಸಿಗುತ್ತೋ ಇಲ್ಲವೋ ಎಂಬ ಅನುಮಾನವೂ ಕೆಲವು ಜಿಲ್ಲಾ ಘಟಕಗಳಲ್ಲಿದೆ.

ಅಸಮಾಧಾನ
ಈ ಮಧ್ಯೆ, ವಿಧಾನಪರಿಷತ್‌ ಚುನಾವಣೆಯಲ್ಲಿ  ಪಕ್ಷದ ಅಧಿಕೃತ ಅಭ್ಯರ್ಥಿ ಸೋಲಿಸಿದವರಿಗೆ ಪಕ್ಷದ ನಾಯಕರು ವಿರೋಧ ವ್ಯಕ್ತಪಡಿಸಿದವರಿಗೆ ಮಣೆ ಹಾಕಿರುವುದು ಮತ್ತಷ್ಟು ಅಸಮಾಧಾನಕ್ಕೆ ಕಾರಣವಾಗಿದೆ. ವಿಧಾನಪರಿಷತ್‌ನ ಎರಡು ಸ್ಥಾನಗಳಿಗೂ ಒಂದೇ ಸಮುದಾಯದಕ್ಕೆ ಸೇರಿದವರಿಗೆ ಅವಕಾಶ ನೀಡಿದ್ದು ಇತರೆ ವರ್ಗದ ನಾಯಕರಲ್ಲಿ ಬೇಸರ ತರಿಸಿದೆ.

ಜೆಡಿಎಸ್‌ಗಿದ್ದ ಒಕ್ಕಲಿಗ ಹಣೆಪಟ್ಟಿ ಕಳಚಿಕೊಳ್ಳಲು ಚುನಾವಣೆ ಸಂದರ್ಭದಲ್ಲಿ ಎಚ್‌.ವಿಶ್ವನಾಥ್‌, ಮಧು ಬಂಗಾರಪ್ಪ, ಪಿ.ಜಿ.ಆರ್‌.ಸಿಂಧ್ಯಾ, ಬಸವರಾಜ ಹೊರಟ್ಟಿ, ಬಿ.ಎಂ.ಫ‌ರೂಕ್‌, ವೈ.ಎಸ್‌.ವಿ.ದತ್ತಾ, ಕೋನರೆಡ್ಡಿ, ನೀರಾವರಿ ಮುಂತಾದ ನಾಯಕರ ಜತೆಗೂಡಿ ಸಾಮೂಹಿಕ ನಾಯಕತ್ವ ಎಂದು ಹೇಳಿ ಅಧಿಕಾರಕ್ಕೆ ಬಂದ ನಂತರ ಯಾರನ್ನೂ ಲೆಕ್ಕಕ್ಕೇ ಇಟ್ಟುಕೊಂಡಿಲ್ಲ. ಪಕ್ಷದ ವೇದಿಕೆಯಲ್ಲಿ ಯಾವ ತೀರ್ಮಾನವೂ ಆಗುತ್ತಿಲ್ಲ. ಯಾವ ವಿಚಾರದ ಬಗ್ಗೆಯೂ ಚರ್ಚೆಯೂ ಆಗುವುದಿಲ್ಲ ಎಂಬ ಅಸಮಾಧಾನವೂ ಬಹಿರಂಗವಾಗಿಯೇ ಕೆಲವು ನಾಯಕರು ಹೊರಹಾಕುತ್ತಿದ್ದಾರೆ. ಇತ್ತೀಚೆಗಿನ ವಿಧಾನಪರಿಷತ್‌ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಖುದ್ದು ಕುಮಾರಸ್ವಾಮಿಯವರು ತೀವ್ರ ಅಸಮಾಧಾನಗೊಂಡು ದೇವೇಗೌಡರ ಜತೆ ಒಂದು ವಾರ ಮಾತು ಬಿಟ್ಟಿದ್ದರು ಎಂದು ಹೇಳಲಾಗಿದೆ.

ನಿಜ, ಜೆಡಿಎಸ್‌ ಸಂಘಟನೆಯಲ್ಲಿ ಕೊರತೆ ಉಂಟಾಗಿದೆ. ಪಕ್ಷ ಬಲಪಡಿಸುವ ನಿಟ್ಟಿನಲ್ಲಿ ನಾವು ಕಾರ್ಯೋನ್ಮುಖರಾಗಲೇಬೇಕು. ಶೀಘ್ರದಲ್ಲೇ ರಾಷ್ಟ್ರೀಯ ಅಧ್ಯಕ್ಷರಾದ ಎಚ್‌.ಡಿ.ದೇವೇಗೌಡರು ಹಾಗೂ ನಾನು ರಾಜ್ಯ ಪ್ರವಾಸ ಮಾಡಿ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಲಿದ್ದೇವೆ.
– ಎಚ್‌.ವಿಶ್ವನಾಥ್‌, ಜೆಡಿಎಸ್‌ ರಾಜ್ಯಾಧ್ಯಕ್ಷ

– ಎಸ್‌.ಲಕ್ಷ್ಮಿನಾರಾಯಣ
 

Advertisement

Udayavani is now on Telegram. Click here to join our channel and stay updated with the latest news.

Next