ಬೆಂಗಳೂರು: ಕಳೆದ ಕೆಲ ವಾರಗಳಿಂದ ಚರ್ಚೆಯ ವಿಚಾರವಾಗಿರುವ ಲೋಕಸಭೆ ಚುನಾವಣೆಗೆ ಬಿಜೆಪಿ- ಜೆಡಿಎಸ್ ಮೈತ್ರಿ ಸಾಧ್ಯತೆ ಕುರಿತಂತೆ ಜಾತ್ಯಾತೀತ ಜನತಾ ದಳ (ಜೆಡಿಎಸ್) ವರಿಷ್ಠ ಎಚ್ ಡಿ ದೇವೇಗೌಡರು ಸ್ಪಷ್ಟನೆ ನೀಡಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ತಮ್ಮ ಪಕ್ಷವು ಸ್ವತಂತ್ರವಗಿ ಸ್ಪರ್ಧೆ ನಡೆಸಲಿದೆ ಎಂದು ಅವರು ಹೇಳಿದ್ದಾರೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, “ನಾವು (ಪಕ್ಷ) ಐದು, ಆರು, ಮೂರು, ಎರಡು ಅಥವಾ ಒಂದು ಸ್ಥಾನವನ್ನು ಗೆದ್ದರೂ ಪರವಾಗಿಲ್ಲ, ನಾವು ಲೋಕಸಭೆ ಚುನಾವಣೆಯಲ್ಲಿ ಸ್ವತಂತ್ರವಾಗಿ ಹೋರಾಡುತ್ತೇವೆ” ಎಂದು ಅವರು ಹೇಳಿದರು.
“ನಮ್ಮ ಕಾರ್ಯಕರ್ತರೊಂದಿಗೆ ಸಮಾಲೋಚಿಸಿದ ನಂತರ ನಾವು ಪ್ರಬಲವಾಗಿರುವ ಸ್ಥಳಗಳಲ್ಲಿ ಮಾತ್ರ ನಾವು ಅಭ್ಯರ್ಥಿಗಳನ್ನು ನಿಲ್ಲಿಸುತ್ತೇವೆ” ಎಂದು ದೇವೇಗೌಡರು ಹೇಳಿದರು.
ಇದನ್ನೂ ಓದಿ:Allu Arjun: ಒಂದೇ ಒಂದು ಪೋಸ್ಟ್‌ನಿಂದ “ಥ್ರೆಡ್ಸ್”ನಲ್ಲಿ ದಾಖಲೆ ಬರೆದ ಅಲ್ಲು ಅರ್ಜುನ್
ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ ಬಿಜೆಪಿ- ಜೆಡಿಎಸ್ ಮೈತ್ರಿ ಸಾಧ್ಯತೆಗಳ ಬಗ್ಗೆ ಚರ್ಚೆ ಆರಂಭವಾಗಿತ್ತು. ಇದಾದ ಬಳಿಕ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ್ದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಜತೆ ಸೇರಿ ಹೋರಾಟ ಮಾಡುವುದಾಗಿ ಹೇಳಿದ್ದರು.