ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ರಾಜಕೀಯ ಪಕ್ಷಗಳು ಸಾಮಾಜಿಕ ಜಾಲತಾಣಗಳ ಬಳಕೆಗೆ ಹೆಚ್ಚು ಒತ್ತು ನೀಡುತ್ತಿದ್ದು, ಜೆಡಿಎಸ್ “ವಾಟ್ಸ್‌ಆ್ಯಪ್ ವಿತ್ ಕುಮಾರಣ್ಣ’ ಪ್ರಾರಂಭಿಸಿದೆ.
ಎಚ್.ಡಿ.ಕುಮಾರಸ್ವಾಮಿ ಅವರ ಪ್ರವಾಸ, ಪಕ್ಷದ ಕಾರ್ಯಕ್ರಮ ಹಾಗೂ ಇತರೆ ಸಂದೇಶಗಳು ಈ ಗ್ರೂಪ್‌ನಲ್ಲಿ ರವಾನೆಯಾಗಲಿದ್ದು ಒಂದೇ ದಿನದಲ್ಲಿ 50 ಸಾವಿರ ಜನ ನೋಂದಣಿ ಮಾಡಿಕೊಂಡಿದ್ದಾರೆ. ಒಂದು ಲಕ್ಷ ಜನರ ಜತೆ ನಿರಂತರ ಸಂಪರ್ಕ ಸಾಧಿಸಿ 15 ಲಕ್ಷ ಜನರಿಗೆ ಸಂದೇಶ ರವಾನಿಸುವ ಗುರಿಯೊಂದಿಗೆ ಈ ಹೊಸ ಪ್ರಯೋಗ ಮಾಡಲಾಗಿದೆ. ಕುಮಾರಸ್ವಾಮಿಯವರ ರಾಜ್ಯ ಪ್ರವಾಸ ಹಾಗೂ ಭಾಷಣಗಳು, ವಿಡಿಯೋ ತುಣುಕುಗಳು ಇದರಲ್ಲಿ ಲಭ್ಯವಾಗಲಿವೆ. ಇದಕ್ಕಾಗಿಯೇ ಜೆಡಿಎಸ್ ಐಟಿ ವಿಂಗ್ ಕಾರ್ಯನಿರತವಾಗಿದೆ.
ಕುಮಾರಸ್ವಾಮಿ ಅವರು ತಮ್ಮ ಸಂದೇಶ ಮತ್ತು ಪಕ್ಷದ ವಿಚಾರವನ್ನು ನೇರವಾಗಿ ವಾಟ್ಸ್‌ಆ್ಯಪ್ ಮೂಲಕ ಕಾರ್ಯಕರ್ತರಿಗೆ ತಲುಪಿಸಲಿದ್ದಾರೆ. ಇದಕ್ಕಾಗಿ ಹೊಸ ಖಾತೆ ತೆರೆಯಲಾಗಿದೆ. ಪಕ್ಷದ ಕಾರ್ಯಕರ್ತರು ತಮ್ಮ ಹೆಸರು, ಮೊಬೈಲ್ ನಂಬರ್ ಹಾಗೂ ವಿಧಾನಸಭೆ ಕ್ಷೇತ್ರದ ಹೆಸರು ಲಿಂಕ್‌ಗೆ ಜೋಡಣೆ ಮಾಡಿದರೆ ಸದಸ್ಯರಾಗಲಿದ್ದಾರೆ. ಪಕ್ಷದ ವೆಬ್‌ಸೈಟ್‌ನಲ್ಲಿ ಹೆಚ್ಚಿನ ಮಾಹಿತಿ ನೋಡಬಹುದು ಎಂದು ಪಕ್ಷದ ಪ್ರಕಟಣೆ ತಿಳಿಸಿದೆ.
ಪಿ.ಜಿ.ಆರ್.ಸಿಂಧ್ಯಾ ಮತ್ತೆ ಜೆಡಿಎಸ್‌ಗೆ ?: ಮಾಜಿ ಸಚಿವ ಪಿ.ಜಿ.ಆರ್.ಸಿಂಧ್ಯಾ ಶೀಘ್ರವೇ ಜೆಡಿಎಸ್‌ಗೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗಿದೆ. ಕಾಂಗ್ರೆಸ್‌ನಲ್ಲಿ ಕೆಲ ಕಾಲ ಕಾಣಿಸಿಕೊಂಡರೂ ಸಕ್ರಿಯ ರಾಜಕಾರಣದಿಂದ ದೂರವಾಗಿದ್ದ ಸಿಂಧ್ಯಾ ಅವರನ್ನು ಜೆಡಿಎಸ್‌ಗೆ ಮತ್ತೆ ಕರೆತರಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರೇ ಆಸಕ್ತಿ ವಹಿಸಿದ್ದಾರೆ. ಈಗಾಗಲೇ ಸಿಂಧ್ಯಾ ಅವರ ಜತೆ ಎರಡು ಸುತ್ತು
ಮಾತುಕತೆ ಸಹ ನಡೆಸಲಾಗಿದ್ದು, ಮುಂದಿನ ತಿಂಗಳು ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಹೇಳಲಾಗಿದೆ.
ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆಗಾಗಿ ಕೈಗೊಳ್ಳುವ ರಾಜ್ಯ ಪ್ರವಾಸದಲ್ಲಿ ಸಿಂಧ್ಯಾ ಜತೆಗೂಡಲಿದ್ದು, ಸೂಕ್ತ ಸ್ಥಾನಮಾನದ ಭರವಸೆ ನೀಡಲಾಗಿದೆ ಎಂದು ತಿಳಿದು ಬಂದಿದೆ.