Advertisement

ರಾಮನಗರ ಕ್ಷೇತ್ರ ಉಳಿಸಿಕೊಳ್ಳಲಿದೆಯೇ ಜೆಡಿಎಸ್‌?

06:25 AM Oct 07, 2018 | |

ರಾಮನಗರ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ರಾಮನಗರ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದ್ದು, ಜೆಡಿಎಸ್‌ ಕ್ಷೇತ್ರ ಉಳಿಸಿಕೊಳ್ಳಲಿದೆಯೇ ಎಂಬುದು ಈಗಿನ ಪ್ರಶ್ನೆಯಾಗಿದೆ.

Advertisement

2004ರಲ್ಲಿ ರಾಮನಗರ ವಿಧಾನಸಭಾ ಕ್ಷೇತ್ರದ ರಾಜಕಾರಣಕ್ಕೆ ಕುಮಾರಸ್ವಾಮಿ ಎಂಟ್ರಿ ಕೊಟ್ಟಾಗಿನಿಂದ ನಿರಂತರವಾಗಿ ಆಯ್ಕೆಯಾಗಿ ಬರುತ್ತಿದ್ದಾರೆ. 2004, 2008, 2013, 2018ರಲ್ಲಿ ಅವರು ಗೆಲುವು ಸಾಧಿಸಿದ್ದಾರೆ. 2009ರಲ್ಲಿ ಅವರು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸಂಸದರಾದ ಹಿನ್ನೆಲೆಯಲ್ಲಿ ತೆರವುಗೊಂಡ ಈ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿ ಕೆ.ರಾಜು ಆಯ್ಕೆಯಾದರು. 

2018ರ ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ಕುಮಾರಸ್ವಾಮಿ ಅವರು 92,626 ಮತಗಳನ್ನು ಗಳಿಸಿದರೆ, ಕಾಂಗ್ರೆಸ್‌ ಅಭ್ಯರ್ಥಿ ಇಕ್ಬಾಲ್‌ ಹುಸೇನ್‌ 69,990 ಮತಗಳನ್ನು ಗಳಿಸಿ ಸೋಲು ಕಂಡರು. ಕುಮಾರಸ್ವಾಮಿ ವಿರುದ್ಧ ಸ್ಪರ್ಧಿಸಿದ್ದ ಯಾವ ಅಭ್ಯರ್ಥಿಯೂ ಇಷ್ಟು ಮತಗಳನ್ನು ಪಡೆದಿರಲಿಲ್ಲ. 

ಹೀಗಾಗಿ, ಉಪಚುನಾವಣೆಯಲ್ಲಿ ಜೆಡಿಎಸ್‌ ಕ್ಷೇತ್ರವನ್ನು ಉಳಿಸಿಕೊಳ್ಳಲಿದೆಯೇ ಎಂಬುದು ಈಗಿನ ಪ್ರಶ್ನೆಯಾಗಿದೆ.
ಈ ಬಾರಿ, ಜೆಡಿಎಸ್‌ನಿಂದ ಅನಿತಾ ಕುಮಾರಸ್ವಾಮಿ ಅಭ್ಯರ್ಥಿ ಎಂಬುದು ಆ ಪಕ್ಷದ ಮುಖಂಡರ ಹೇಳಿಕೆ. ಇನ್ನು, ಕಾಂಗ್ರೆಸ್‌ ಅಭ್ಯರ್ಥಿಯ ವಿಚಾರ ಇನ್ನೂ ನಿಗೂಢವಾಗಿದೆ. ಮೇಲಾಗಿ, ರಾಜ್ಯದಲ್ಲಿ ಮೈತ್ರಿ ಸರ್ಕಾರ ಇರುವುದರಿಂದ ಜೆಡಿಎಸ್‌ ಅಭ್ಯರ್ಥಿಗೆ ಅದು ಬೆಂಬಲ ನೀಡುವ ಸಾಧ್ಯತೆಯೇ ಹೆಚ್ಚಿದೆ. ಕಾಂಗ್ರೆಸ್‌ನ ಕೆಲವು ಮುಖಂಡರು ಮತ್ತು ಕಾರ್ಯಕರ್ತರು ಇಕ್ಬಾಲ್‌ ಹುಸೇನ್‌ರನ್ನೇ ಮತ್ತೆ ಕಣಕ್ಕಿಳಿಸುವಂತೆ ಪಕ್ಷದ ಮೇಲೆ ಒತ್ತಡ ಹೇರಿದ್ದಾರೆಂಬ ಮಾಹಿತಿ ಇದೆ. ಜೊತೆಗೆ, ಕ್ಷೇತ್ರದ ಮಾಜಿ ಶಾಸಕ ಮತ್ತು ಹಾಲಿ ಎಂಎಲ್‌ಸಿ, ಸಿ.ಎಂ.ಲಿಂಗಪ್ಪ ಅವರು ಮೈತ್ರಿಗೆ ಒಲ್ಲೆ ಎನ್ನುತ್ತಿದ್ದಾರೆ. ಹಾಗೊಮ್ಮೆ ಕಾಂಗ್ರೆಸ್‌ನಿಂದ ಅಧಿಕೃತ ಅಭ್ಯರ್ಥಿ ಕಣಕ್ಕಿಳಿಯದಿದ್ದರೆ, ಸ್ವಾಭಿಮಾನಿ ಕಾಂಗ್ರೆಸ್ಸಿಗರ ಪರವಾಗಿ ತಾವು ಸ್ಪರ್ಧಿಸುವುದಾಗಿ ಹಲವಾರು ಬಾರಿ ಹೇಳಿಕೆ ಕೊಟ್ಟಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನಲ್ಲಿ ಬಂಡಾಯದ ಬಾವುಟ ಹಾರುವುದೇ ಎಂಬುದು ಕುತೂಹಲಕಾರಿ ಅಂಶ.

ಇನ್ನು, ಬಿಜೆಪಿಯಿಂದ “ಗೆಲ್ಲುವ ಅಭ್ಯರ್ಥಿ” ಕಣಕ್ಕಿಳಿಯಲಿದ್ದಾರೆ ಎಂದು ಆ ಪಕ್ಷದ ನಾಯಕರು ಹೇಳಿಕೊಂಡಿದ್ದಾರೆ. ಬಿಜೆಪಿಯಿಂದ ಕಂಠೀರವ ಸ್ಟುಡಿಯೋದ ಮಾಜಿ ಅಧ್ಯಕ್ಷ ಎಂ.ರುದ್ರೇಶ್‌ ಮತ್ತು ಚನ್ನಪಟ್ಟಣದ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್‌ ಹೆಸರು ಮುಂಚೂಣಿಯಲ್ಲಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next