ಬೆಂಗಳೂರು: ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಗುರುವಾರದೊಳಗೆ ಬಿಡುಗಡೆ ಆಗಲಿದ್ದು ಹಾಸನದ ಅಭ್ಯರ್ಥಿ ಹೆಸರೂ ಇರಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿ, ಮಂಗಳವಾರ ಆಗಿರುವುದರಿಂದ ಪಟ್ಟಿ ಬಿಡುಗಡೆ ಆಗಿಲ್ಲ. ದೇವೇಗೌಡರು ನಾಳೆ ಸಂಜೆ ದಿಲ್ಲಿಯಿಂದ ವಾಪಸ್ ಆಗಲಿದ್ದು, ಬಳಿಕ ಪಟ್ಟಿ ಹೊರಬರಲಿದೆ ಎಂದರು.
ಹಾಸನವನ್ನೂ ಸೇರಿಸಿ ಪಟ್ಟಿ ಬಿಡುಗಡೆ ಮಾಡುತ್ತೇವೆ. ಅದನ್ನು ಬಿಟ್ಟು ಮಾಡಿದರೆ ಇನ್ನೊಂದು ಕಥೆ ಹುಟ್ಟಿಕೊಳ್ಳುತ್ತದೆ. ಮೊದಲ ಪಟ್ಟಿ ಬಿಡುಗಡೆ ಬಳಿಕ ಯಾವುದೇ ಸಮಸ್ಯೆ ಇರಲಿಲ್ಲ. ಎರಡನೇ ಪಟ್ಟಿ ವೇಳೆ ಹಾಸನದ್ದು ಹೆಚ್ಚು ಪ್ರಚಾರವಾಗಿದೆ. ಹಾಸನ ವಿಚಾರದಿಂದ ಜನತಾದಳಕ್ಕೂ ಹೆಚ್ಚು ಪ್ರಚಾರವಾಗಿದೆ.
ಇದರಿಂದ ರಾಜ್ಯದಲ್ಲಿ ಜೆಡಿಎಸ್ ಪಕ್ಷಕ್ಕೆ ಶೇ. 2ರಿಂದ 3ರಷ್ಟು ಮತ ಪ್ರಮಾಣ ಹೆಚ್ಚಾಗಲಿದೆ. ಹಾಸನ ವಿಚಾರ ಇಷ್ಟು ದೊಡ್ಡ ಮಟ್ಟಿಗೆ ಚರ್ಚೆ ಆಗಲು ಕಾರಣಕರ್ತರಾದವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಹೇಳಿದರು.
ನಾವು ಯಾವುದೇ ದುಡುಕಿನ ತೀರ್ಮಾನ ಮಾಡುವುದಿಲ್ಲ. ಕಾರ್ಯಕರ್ತರ ಅಪೇಕ್ಷೆ, ಗೆಲ್ಲುವ ಮಾನದಂಡದಲ್ಲೇ ಟಿಕೆಟ್ ಕೊಡುತ್ತೇವೆ. ನಮಗೆ ಅಭ್ಯರ್ಥಿಗಳ ಕೊರತೆ ಇರುವ ಕಡೆ ಬೇರೆ ಪಕ್ಷಗಳಿಂದ ಬರುವ ಸಮರ್ಥ ಹಾಗೂ ಸ್ವಂತ ಶಕ್ತಿ ಇರುವ ಅಭ್ಯರ್ಥಿಗಳಿಗೆ ಟಿಕೆಟ್ ನೀಡಲಾಗುವುದು. ಕಾಂಗ್ರೆಸ್ ಮತ್ತು ಬಿಜೆಪಿ ಸ್ಥಿತಿ ಏನಾಗಿದೆ ನನಗೆ ಗೊತ್ತಿದೆ ಎಂದು ತಿಳಿಸಿದರು.
ಸುಧಾಕರ್ ಮಾಡಿದ
ಅನಾಚಾರಗಳು ಗೊತ್ತಿವೆ
ಜೆಡಿಎಸ್ ಕುರಿತು ಸಚಿವ ಸುಧಾಕರ್ ಅನಗತ್ಯ ಹೇಳಿಕೆ ನೀಡಿದ್ದಾರೆ. ಅವರ ಅನಾಚಾರಗಳು ಜನರಿಗೆ ಗೊತ್ತಿವೆ. ರೆಫ್ರಿಜರೇಟರ್, ಸ್ಟವ್ ಎಲ್ಲ ಹಂಚುತ್ತಿದ್ದಾರೆ. ಅಭಿವೃದ್ಧಿ ಮಾಡಿದ್ದರೆ ಇದು ಬೇಕಾ? ಹೀಗಾಗಿ ಜನತೆ ಮನೇಲಿ ಕೂರಿಸಿಬಿಟ್ಟರೆ ಕಷ್ಟ. ಎಚ್ಚರಿಕೆಯಿಂದ ಇದ್ದರೆ ಉತ್ತಮ ಎಂದು ಹೇಳಿದರು.