ಬೆಂಗಳೂರು: ಮುಖ್ಯಮಂತ್ರಿ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಬಗ್ಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ಮುಖ್ಯಮಂತ್ರಿ ಕುಮಾರಸ್ವಾಮಿ ಗಂಭೀರ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ವಿಶ್ವಾಸ ಮತಯಾಚನೆಯಲ್ಲಿ ಜಯ ಸಾಧಿಸಿ, ಸರ್ಕಾರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕುಮಾರಸ್ವಾಮಿ ಭಾನುವಾರವೂ ಕಾಂಗ್ರೆಸ್ ನಾಯಕರ ಜತೆ ಸಮಾಲೋಚನೆ ನಡೆಸಿದರು.
ಅತೃಪ್ತರನ್ನು ವಾಪಸ್ ಕರೆಸುವುದು, ಬೇರೆ ಯಾರೂ ಹೋಗದಂತೆ ತಡೆಯುವುದು ಸೇರಿ ಮುಂದಿನ ಕಾರ್ಯತಂತ್ರಗಳ ಬಗ್ಗೆ ಚರ್ಚೆ ಮಾಡಿದರು. ನಂತರ, ದೇವೇಗೌಡರ ನಿವಾಸಕ್ಕೆ ಭೇಟಿ ನೀಡಿ, ಚರ್ಚೆ ನಡೆಸಿದರು. ಈ ವೇಳೆ, ಮುಖ್ಯಮಂತ್ರಿ ಹುದ್ದೆಯನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡುವ ಮೂಲಕ ಸರ್ಕಾರವನ್ನು ಉಳಿಸಿಕೊಳ್ಳುವ ಬಗ್ಗೆಯೂ ಮಾತುಕತೆ ನಡೆದಿದೆ ಎನ್ನಲಾಗಿದೆ.
ಮುಖ್ಯಮಂತ್ರಿ ಹುದ್ದೆಯನ್ನು ನೀವೇ ವಹಿಸಿಕೊಳ್ಳಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿಯವರು ನೀಡಿರುವ ಸಂದೇಶವನ್ನು ಸಚಿವರಾದ ಜಿ.ಟಿ.ದೇವೇಗೌಡ, ಸಾ.ರಾ.ಮಹೇಶ್ ಹಾಗೂ ಪುಟ್ಟರಾಜು ಅವರು ಸಿದ್ದರಾಮಯ್ಯ ಅವರಿಗೆ ತಲುಪಿಸಿದರು. ಈ ಹಂತದಲ್ಲಿ ನಾನು ಮುಖ್ಯಮಂತ್ರಿ ಸಾಧ್ಯವೇ ಇಲ್ಲ ಎಂದು ಮುಖ್ಯಮಂತ್ರಿ ಹುದ್ದೆ ತಿರಸ್ಕರಿಸಿ ಸರ್ಕಾರ ಉಳಿಸಿಕೊಳ್ಳುವುದು ಈಗ ಮುಖ್ಯ ಎಂದು ಸಿದ್ದರಾಮಯ್ಯ ಹೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕಾಂಗ್ರೆಸ್ ಪಕ್ಷಕ್ಕೆ ಸಿಎಂ ಸ್ಥಾನ ಬಿಟ್ಟು ಕೊಡುವುದಾಗಿ ಜೆಡಿಎಸ್‌ನವರು ಮುಕ್ತವಾಗಿ ಹೇಳಿದ್ದಾರೆ. ಸರ್ಕಾರ ಉಳಿಯಬೇಕು. ಅದಕ್ಕಾಗಿ ನಾವು ತ್ಯಾಗ ಮಾಡಲು ಸಿದ್ಧ ಎಂದಿದ್ದಾರೆ. ಸಿದ್ದರಾಮಯ್ಯ, ಪರಮೇಶ್ವರ್ ಅಥವಾ ನಾನು ಯಾರಾದರೂ ಸಿಎಂ ಆಗಿ ಅಂತ ಹೇಳಿದ್ದಾರೆ. ಈ ವಿಚಾರವಾಗಿ ನಮ್ಮ ಹೈಕಮಾಂಡ್ ಜೊತೆಗೂ ಅವರು ಮಾತನಾಡಿದ್ದಾರೆ.
-ಡಿ.ಕೆ.ಶಿವಕುಮಾರ್, ಸಚಿವ