Advertisement

ರೈತರ ಸಾಲಮನ್ನಾಕ್ಕೆ ಜೆಡಿಎಸ್‌ ಬೆಂಬಲಿಸಿ: ವೀರೇಂದ್ರ

05:16 PM Apr 14, 2018 | Team Udayavani |

ಚಿತ್ರದುರ್ಗ: ನಗರದ ಹೊರ ವಲಯದ ಮಠದಕುರುಬರಹಟ್ಟಿಯಲ್ಲಿ ಜೆಡಿಎಸ್‌ ವತಿಯಿಂದ ಮನೆ ಮನೆಗೆ ಕುಮಾರಣ್ಣ ಅಭಿಯಾನ ಶುಕ್ರವಾರ ನಡೆಯಿತು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಜೆಡಿಎಸ್‌.ಅಭ್ಯರ್ಥಿ ಕೆ.ಸಿ. ವೀರೇಂದ್ರ ಪಪ್ಪಿ, ರಾಜ್ಯದಲ್ಲಿ ಈ ಬಾರಿ ಜೆಡಿಎಸ್‌ ಅಧಿಕಾರಕ್ಕೆ ಬಂದರೆ ರೈತರ ಸಂಪೂರ್ಣ ಸಾಲಮನ್ನ ಮಾಡುವುದಾಗಿ ಪಕ್ಷದ ರಾಜ್ಯಾಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದಾರೆ. ಅದಕ್ಕಾಗಿ ಈ ಬಾರಿಯ ಚುನಾವಣೆಯಲ್ಲಿ ನನ್ನನ್ನು ಗೆಲ್ಲಿಸಿ ಆಶೀರ್ವದಿಸಿ ಎಂದು ಮತದಾರರಲ್ಲಿ ಮನವಿ ಮಾಡಿದರು.

ಜನಪರ ಮತ್ತು ರೈತ ಪರ ಕಾಳಜಿಯುಳ್ಳ ಎಚ್‌.ಡಿ.ಕುಮಾರಸ್ವಾಮಿ ಇಪ್ಪತ್ತು ತಿಂಗಳ ಕಾಲ ರಾಜ್ಯದ ಮುಖ್ಯಮಂತ್ರಿಯಾಗಿದ್ದಾಗ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ಉಳಿಯುವಂತ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದರಿಂದ ಕುಮಾರಣ್ಣ ಮುಖ್ಯಮಂತ್ರಿಯಾಗಬೇಕೆಂದು ರಾಜ್ಯದ ಜನ ಆಸೆ ಪಡುತ್ತಿದ್ದಾರೆ. ಕಾಂಗ್ರೆಸ್‌ ಮತ್ತು ಬಿಜೆಪಿಯನ್ನು ಕಿತ್ತೂಗೆದು ಜೆಡಿಎಸ್‌ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂದರು.

ಜೆಡಿಎಸ್‌ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕಾಂತರಾಜ್‌ ಮಾತನಾಡಿ, ಎಚ್‌.ಡಿ. ಕುಮಾರಸ್ವಾಮಿರವರು ನೀಡಿರುವ
ಭರವಸೆಯಂತೆ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ 24 ಗಂಟೆಯೊಳಗೆ ರೈತರ ಸಂಪೂರ್ಣ ಸಾಲಮನ್ನಾ ಮಾಡಿ ಅನ್ನದಾತ ರೈತ ಆತ್ಮಹತ್ಯೆ ಮಾಡಿಕೊಳ್ಳದಂತೆ ಶಕ್ತಿ ತುಂಬಲಾಗುವುದು ಎಂದರು. 

70 ವರ್ಷದ ವೃದ್ಧರಿಗೆ 5 ಸಾವಿರ ರೂ. ವೃದ್ಧಾಪ್ಯ ವೇತನ ಹೆಚ್ಚಿಸಿ ಕೊನೆಗಾಲದಲ್ಲಿ ವಯಸ್ಸಾದವರು ನೆಮ್ಮದಿಯಿಂದ ಜೀವಿಸುವಂತ ವಾತಾವರಣ ಸೃಷ್ಟಿಸುವುದು ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿದೆ. ವಿಧವೆಯರಿಗೆ, ಅಂಗವಿಕಲರಿಗೆ 2500 ರೂ.ಗಳ ಮಾಸಾಶನ ನೀಡಲಿದ್ದಾರೆ ಎಂದರು.
 
ಅಧಿಕಾರ ನಡೆಸಿದ ಬಿಜೆಪಿ ಮತ್ತು ಕಾಂಗ್ರೆಸ್‌ ಪಕ್ಷಗಳು ಸುಳ್ಳು ಭರವಸೆಗಳನ್ನು ಜನತೆಗೆ ನೀಡುವುದರಲ್ಲಿಯೇ ಕಾಲ ಕಳೆದಿವೆ. ಚಿತ್ರದುರ್ಗ ವಿಧಾನಸಭಾ ಕ್ಷೇತ್ರ ಮೂಲಸೌಕರ್ಯಗಳಿಂದ ವಂಚಿತವಾಗಿದೆ. ಐತಿಹಾಸಿಕ ಕೋಟೆಗೆ ಹೆಸರುವಾಸಿಯಾಗಿರುವ ಚಿತ್ರದುರ್ಗದಲ್ಲಿ ನಡೆದಾಡಲು ಯೋಗ್ಯವಾದ ಒಂದು ರಸ್ತೆಯೂ ಇಲ್ಲ. ಇದಕ್ಕೆ ಶಾಸಕರ ನಿರ್ಲಕ್ಷೆಯೇ ಕಾರಣ. ಈಗಲಾದರೂ ಜಾಗರೂಕತೆಯಿಂದ ಮತ ಚಲಾಯಿಸಿ ಎಂದು ಮನವಿ ಮಾಡಿದರು. 

Advertisement

ಜೆಡಿಎಸ್‌ ತಾಲೂಕು ಅಧ್ಯಕ್ಷ ತಿಮ್ಮಣ್ಣ, ವೀರಣ್ಣ, ಗ್ರಾಪಂ ಸದಸ್ಯ ಮೆಹಬೂಬ್‌ ಪಾಷ, ಮಾಜಿ ಸದಸ್ಯ ವಿಜಯಕುಮಾರ್‌, ಕೇಶವಮೂರ್ತಿ, ತಿಪ್ಪೇಸ್ವಾಮಿ, ಅಂಗಡಿ ರಾಜಪ್ಪ ಇತರರು ಇದ್ದರು.  

Advertisement

Udayavani is now on Telegram. Click here to join our channel and stay updated with the latest news.

Next