ಶಿವಮೊಗ್ಗ: ಇತ್ತೀಚಿನ ದಿನಗಳಲ್ಲಿ ಸರ್ಕಾರದ ಕಾರ್ಯವೈಖರಿ ಭಯ ತರಿಸುತ್ತಿದೆ. ವಾಲ್ಮೀಕಿ ಅಭಿವೃದ್ಧಿ ನಿಗಮದ ಅಧೀಕ್ಷಕರು ಡೆತ್ ನೋಟ್ ಬರೆದಿಟ್ಟು ಸಾವನ್ನಪ್ಪಿದ್ದಾರೆ. ನಾನು ಹೆಡಿಯಲ್ಲ ಎಂದು ಸಹ ಅವರು ಬರೆದಿದ್ದಾರೆ. ಸೂಪರಿಂಟೆಂಡೆಂಟ್ ಪರಿಸ್ಥಿತಿ ಹೀಗಾದರೆ ಸಾಮಾನ್ಯ ಅಧಿಕಾರಿಗಳ ಪರಿಸ್ಥಿತಿ ಏನು? ಎಂದು ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಕೆ.ಬಿ ಪ್ರಸನ್ನ ಪ್ರಶ್ನಿಸಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಕೋಟ್ಯಾಂತರ ರೂಪಾಯಿ ಸಚಿವರ ಮೌಖಿಕ ಆದೇಶದ ಮೂಲಕ ಹಣ ವರ್ಗಾವಣೆ ಆಗಿದೆ. ಸರ್ಕಾರದ ಅಧಿಕಾರಿಗಳಿಗೆ ಈ ಪರಿಸ್ಥಿತಿ ಬರುತ್ತದೆ ಅಂದರೆ ನಾವು ಯಾವ ವಾತಾವರಣದಲ್ಲಿದ್ದೇವೆ. ಇಡೀ ಪ್ರಕರಣ ನೋಡಿದರೆ ಏನು ನಡೆದೆ ಇಲ್ಲ ಎಂಬಂತೆ ಸರ್ಕಾರ ಇದೆ. ಕುಟುಂಬಗಳು ಅನಾಥವಾಗುತ್ತಿದೆ. ಏನು ಆಗಿಲ್ಲ ಅನ್ನುವ ಥರ ಸರ್ಕಾರ ನಡೆದುಕೊಳ್ಳುತ್ತಿರೋದನ್ನು ಖಂಡಿಸುತ್ತೇವೆ ಎಂದರು.
ಈಶ್ವರಪ್ಪ ಕಮಿಷನ್ ಕೇಳಿದರು ಎಂದಾಗ ಮುಖ್ಯಮಂತ್ರಿಗಳು ಎಷ್ಟು ರಾಜೀನಾಮೆ ಕೇಳಿದ್ದರು. ಸಿಎಂ ಕೂಡಲೇ ತಮ್ಮ ಕ್ಯಾಬಿನೆಟ್ ಸಚಿವನನ್ನು ವಜಾಗೊಳಿಸಬೇಕು. ವಾಲ್ಮೀಕಿ ನಿಗಮದ ಮಂತ್ರಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಒತ್ತಾಯಿಸಿದರು.
ಈ ಘಟನೆಗಳನ್ನು ರಾಜ್ಯದ ಜನ ಗಮನಿಸುತ್ತಾರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ರೇವ್ ಪಾರ್ಟಿಗಳು ಕರ್ನಾಟಕದಲ್ಲಿ ನಡೆಯುತ್ತಿದೆ. ರಾಜ್ಯದಲ್ಲಿ ಗ್ಯಾಂಗ್ ವಾರ್ ಗಳು ನಡೆಯುತ್ತಿದೆ. ಗಾಂಜಾ,ಇಸ್ಪೀಟು ಹಾವಳಿ ಹೆಚ್ಚಾಗಿದೆ. ಮಹಿಳೆಯರು ಏಕಾಂಗಿಯಾಗಿ ಓಡಾಡುವ ಪರಿಸ್ಥಿತಿ ಇಲ್ಲದಂತಾಗಿದೆ. ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಯೋಚನೆ ಮಾಡುತ್ತಿಲ್ಲ. ಕೂಡಲೇ ಸಂಬಂಧ ಪಟ್ಟ ಮಂತ್ರಿಯ ರಾಜೀನಾಮೆ ಪಡೆಯಬೇಕು ಎಫ್ಐಆರ್ ನಲ್ಲಿ ಮಂತ್ರಿಯ ಹೆಸರು ಸೇರಿಸಬೇಕು. ಜನರಿಗೆ ಧೈರ್ಯ, ಅಧಿಕಾರಿಗಳಿಗೆ ಧೈರ್ಯ ಬರಬೇಕೆಂದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದರು.
ವಾಲ್ಮೀಕಿ ಅಭಿವೃದ್ಧಿ ನಿಗಮದ ಉಸ್ತುವಾರಿ ಸಚಿವರು ಕೂಡಲೇ ರಾಜೀನಾಮೆ ನೀಡಬೇಕು. ಸರ್ಕಾರಿ ನೌಕರನ ಸಾವಿಗೆ ಕಾರಣರಾದವರನ್ನು ಹೆಸರನ್ನು ಸಹ ಎಫ್ಐಆರ್ ನಲ್ಲಿ ಸೇರಿಸಬೇಕು ಅಧಿಕಾರಿಗಳು ಹೆದರಿಕೊಂಡು ಕೆಲಸ ಮಾಡುವ ಪರಿಸ್ಥಿತಿ ಬಂದಿದೆ. ಈಶ್ವರಪ್ಪ ಪ್ರಕರಣದಲ್ಲಿ ಸಿದ್ದರಾಮಯ್ಯ ನವರು ಎಷ್ಟು ಒತ್ತಡ ಹೇರಿದ್ದರು. ಈಗ ಯಾಕೇ ಸುಮ್ಮನಿದ್ದಾರೆ ಗೊತ್ತಾಗುತ್ತಿಲ್ಲ. ಸರ್ಕಾರದ ನಡೆ ಗಮನಿಸುತ್ತೇವೆ ನಂತರ ಏನು ಮಾಡಬೇಕು ತೀರ್ಮಾನ ಮಾಡುತ್ತೇವೆ. ಸರ್ಕಾರ ಚುನಾವಣೆ ಮಾಡುವಲ್ಲಿ ಮಗ್ನವಾಗಿದೆ. ಈ ಪ್ರಕರಣದ ನೇರಹೊಣೆ ಸಚಿವರದ್ದು. ಎರಡು ದಿನಾ ಆದರೂ ಸರ್ಕಾರ ಸುಮ್ಮನಿರೋದನ್ನು ನೋಡಿ ಅನುಮಾನ ಬರುತ್ತಿದೆ. ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಂಡು ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಎಂದು ಹೇಳಿದರು.