ಬೆಂಗಳೂರು: ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ಈಗ ಇಬ್ಬರ ಮೇಲೆ ಕೈಹಾಕಿಕೊಂಡು ಹೋಗುತ್ತಿದ್ದಾರೆ, ನಾಲ್ವರ ಮೇಲೆ ಹೋಗುವುದು ಹತ್ತಿರದಲ್ಲೇ ಇದೆ ಎಂದು ಕಾಂಗ್ರೆಸ್ ಮುಖಂಡ ಕೆ.ಎನ್.ರಾಜಣ್ಣ ಹೇಳಿಕೆಗೆ ಮಾಜಿ ಸಿಎಂ ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಕಿಡಿಕಾರಿದ್ದಾರೆ.
ಕೆ.ಎನ್.ರಾಜಣ್ಣ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಇಬ್ರಾಹಿಂ ಅವರು, ದೇವೇಗೌಡರು ಈ ರಾಜ್ಯದ ಪಿತಾಮಹ. ಕರ್ನಾಟಕದ ಆರೂವರೆ ಕೋಟಿ ಜನರ ತಂದೆ. ಆದರೆ, ದೇವೇಗೌಡರ ಹುಟ್ಟು, ಸಾವಿನ ಬಗ್ಗೆ ಮಾತನ್ನಾಡುತ್ತಾರೆ ರಾಜಣ್ಣ ನಿಮಗೆ ಅಪ್ಪ ಇಲ್ಲವಾ? ದೇವೇಗೌಡರು ಅಜರಾಮರರು. ದೇವೇಗೌಡರಿಗೆ ಸಾವಿಲ್ಲ ಸೂರ್ಯ, ಚಂದ್ರ ಇರುವವರೆಗೂ ಅವರ ಹೆಸರು ಶಾಶ್ವತವಾಗಿರುತ್ತದೆ. ಇವರು ಕೆಂಪು ಕೋಟೆ ಮೇಲೆ ಧ್ವಜ ಹಾರಿಸಿದವರು. ಕೂಡಲೇ ದೇವೇಗೌಡರ ಮನೆಗೆ ಬಂದು ಕ್ಷಮೆ ಯಾಚಿಸಬೇಕು ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡಿ, ದೇವೇಗೌಡರ ಬಗ್ಗೆ ರಾಜಣ್ಣ ಮಾತನ್ನಾಡಿದ್ದಾರೆ. ಅದು ಅವರ ಸಂಸ್ಕೃತಿ ತೋರಿಸುತ್ತದೆ. 2004ರಲ್ಲಿ ಅವರು ಜೆಡಿಎಸ್ ಅಭ್ಯರ್ಥಿಯಾಗಿದ್ದರು. ಕೊನೆಯ ದಿನ ದೇವೇಗೌಡರು ಹೋಗಿ ಪ್ರಚಾರ ಮಾಡಿದ್ದರು. ಆಗ ಆ ವ್ಯಕ್ತಿ ವಿಧಾನಸೌಧಕ್ಕೆ ಮೆಟ್ಟಿಲು ಹತ್ತಲು ಸಾಧ್ಯವಾಗಿತ್ತು. ಇಲ್ಲದಿದ್ದರೆ ಅವರನ್ನ ಯಾರು ಕೇಳುತ್ತಿದ್ದರು. ದೇವೇಗೌಡರ ಆರೋಗ್ಯವನ್ನೂ ಲೆಕ್ಕಿಸದೆ ಮಾತನಾಡಿದ್ದಾರೆ ಎಂದರು.
ಇದನ್ನೂ ಓದಿ:ಸರಕು ಸಾಗಣೆ ವಲಯದಲ್ಲಿ ಉದ್ಯೋಗಾವಕಾಶ; 3 ವಿವಿಗಳೊಂದಿಗೆ ಒಪ್ಪಂದಕ್ಕೆ ಸಹಿ
ಇಬ್ಬರು ಹೆಗಲಿಗೆ ಹೆಗಲು ಕೊಡುತ್ತಾರೆ. ದೇವಸ್ಥಾನದ ಆವರಣದಲ್ಲಿ ಪೂಜೆ ಸಲ್ಲಿಸುತ್ತೇವೆ, ದೇವರ ಮೆರವಣಿಗೆಗೂ ಭುಜ ಕೊಡಬೇಕು. ಭುಜ ಕೊಟ್ಟೇ ಮೆರವಣಿಗೆ ಮಾಡುವುದಲ್ಲವೇ? ಅವರ ಮಾತಿನ ದುರಹಂಕಾರ ಕೇಳಿದ್ದೇನೆ. ನೀನು ಬ್ರಹ್ಮ ಅಲ್ಲ, ನೀನು ಒಬ್ಬ ಹುಲು ಮಾನವ. ದೇವೇಗೌಡರು ಶತಾಯುಷಿಗಳಾಗಿ ನಾಡಿನಲ್ಲಿ ಬದುಕುತ್ತಾರೆ ಎಂದರು.
ದೇವೇಗೌಡರನ್ನು ಚುನಾವಣೆಗೆ ನಿಲ್ಲಿಸಿದರು, ತುಮಕೂರಿನಲ್ಲಿ ಸೋಲಿಸಿದರು. ಅವರನ್ನು ಸೋಲಿಸಲು ಕುತಂತ್ರ ನಡೆಸಿದ್ದು ರಾಜಣ್ಣ. ಇನ್ನೆರಡು ಮೂರು ತಿಂಗಳು ನೋಡಲಿ. ಅವರೇ ಸ್ವತಂತ್ರವಾಗಿ ಓಡಾಡುತ್ತಾರೆ ಎಂದರು.
ರಾಜಣ್ಣ ಕ್ಷಮೆ ಕೇಳಬೇಕೆಂದು ನಾನು ಹೇಳುವುದಿಲ್ಲ. ದೇವೇಗೌಡರ ಮಗ ನಾನಿದ್ದೇನೆ. ಮಧುಗಿರಿಗೆ ಬಂದು ತೋರಿಸುತ್ತೇನೆ. ಅಲ್ಲಿಗೆ ಬಂದು ತೋರಿಸುತ್ತೇನೆ. ಜನರಿಂದ ಉತ್ತರ ಕೊಡಿಸುತ್ತೇನೆ ಎಂದು ಎಚ್ ಡಿ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ.