ದಾವಣಗೆರೆ: ಅಶೋಕ ಚಿತ್ರಮಂದಿರದ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಒತ್ತಾಯಿಸಿ ಜಿಲ್ಲಾ ಯುವ ಜಾತ್ಯತೀತ ಜನತಾದಳದ ಕಾರ್ಯಕರ್ತರು 16 ದಿನದಿಂದ ನಡೆಸುತ್ತಿದ್ದ ಅಹೋರಾತ್ರಿ ಧರಣಿ ಮಂಗಳವಾರ ಮುಕ್ತಾಯಗೊಂಡಿತು. ರೈಲ್ವೆ ಮೇಲ್ಸೇತುವೆ ನಿರ್ಮಾಣ ಕುರಿತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಿದ್ದು, ಜಿಲ್ಲಾಡಳಿತಕ್ಕೆ ಪತ್ರ ಬರೆಯುವ ಮುಖೇನ ಒತ್ತಡ ಹೇರಿದ್ದಾರೆ.
ಜಿಲ್ಲಾಡಳಿತ ರೈಲ್ವೆ ಮೇಲ್ಸೇತುವೆ ಇತರೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿದ್ದರ ಹಿನ್ನೆಲೆಯಲ್ಲಿ ಅಹೋರಾತ್ರಿ ಧರಣಿ ಯನ್ನು ಮೊಟಕುಗೊಳಿಸಲಾಗುತ್ತಿದೆ ಎಂದು ಯುವ ಜೆಡಿಎಸ್ ಜಿಲ್ಲಾಧ್ಯಕ್ಷ ಜೆ. ಅಮಾನುಲ್ಲಾಖಾನ್ ಘೋಷಿಸಿದರು. ಇದಕ್ಕೂ ಮುನ್ನ ಧರಣಿನಿರತರನ್ನುದ್ದೇಶಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯ ರಮೇಶ್ ಬಾಬು, ತಾವು ದಾವಣಗೆರೆಗೆ ಹಲವಾರು ಬಾರಿ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಶೋಕ ಚಿತ್ರಮಂದಿರ ರೈಲ್ವೆ ಗೇಟ್‌ನ ಸಮಸ್ಯೆಯ ಬಗ್ಗೆ ಅಷ್ಟಾಗಿ ಗಮನಕ್ಕೆ ಬಂದಿರಲಿಲ್ಲ.
ಯುವ ಜನತಾದಳ ಕಾರ್ಯಕರ್ತರು ಅಹೋರಾತ್ರಿ ಧರಣಿ ಕೈಗೊಂಡ ನಂತರ ಇಲ್ಲಿನ ಸಮಸ್ಯೆಗಳು ತಿಳಿದವು. ಕಳೆದ 3-4 ದಶಕದಿಂದ ನನೆಗುದಿಗೆ ಬಿದ್ದಿರುವ, ಸುಗಮ ಸಂಚಾರಕ್ಕೆ ತೀರಾ ತುರ್ತಾಗಿರುವ ಮೇಲ್ಸೇತುವೆ ಇಲ್ಲವೇ ಪರ್ಯಾಯ ವ್ಯವಸ್ಥೆ ಆಗಲೇಬೇಕು ಎಂದರು. ಅತಿ ಪ್ರಮುಖ ಸ್ಥಳದಲ್ಲಿ ರೈಲ್ವೆ ಗೇಟ್ ಇದೆ. ಪ್ರತಿ ದಿನ 40ಕ್ಕೂ ಅಧಿಕ ರೈಲುಗಳು ಸಂಚರಿಸುತ್ತಿವೆ. ಪ್ರತಿ ಬಾರಿ ಗೇಟ್ ಹಾಕಿದಾಗ ಬಿಸಿಲು, ಮಳೆ ಎನ್ನದೆ ಸಾರ್ವಜನಿಕರು ಕಾಯಲೇಬೇಕಾಗುತ್ತದೆ.
ತೀರಾ ತುರ್ತು ಪರಿಸ್ಥಿತಿಯಲ್ಲಿದ್ದವರಂತೂ ಇನ್ನೂ ಸಮಸ್ಯೆ ಅನುಭವಿಸಬೇಕಾಗುತ್ತದೆ. ಮೇಲ್ಸೇತುವೆ ನಿರ್ಮಾಣಕ್ಕೆ ಕಳೆದ 3 ವರ್ಷದ ಹಿಂದೆಯೇ 35 ಕೋಟಿ ಅನುದಾನ ಮಂಜೂರಾಗಿದ್ದರೂ ಕೆಲಸ ಯಾವ ಕಾರಣಕ್ಕೆ ಪ್ರಾರಂಭವಾಗಿಲ್ಲ ಎಂಬುದು ಗೊತ್ತಾಗದ ಕಾರಣ ಯುವ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡ ಅಹೋರಾತ್ರಿ ಹೋರಾಟಕ್ಕೆ ಸಾರ್ವಜನಿಕರು ಸ್ಪಂದಿಸಿದರು. 60 ಸಾವಿರ ಜನರು ಮೇಲ್ಸೆತುವೆ ಆಗಬೇಕು ಎಂದು ಸಹಿ ಸಹ ಮಾಡಿದ್ದಾರೆ.
ಅಂತಿಮವಾಗಿ ಸಂಬಂಧಿತ ಸಚಿವರು, ಜಿಲ್ಲಾಡಳಿತ ಸ್ಪಂದಿಸಿದೆ ಎಂದು ತಿಳಿಸಿದರು. ಯುವ ಜೆಡಿಎಸ್ ಕಾರ್ಯಕರ್ತರು ಹಮ್ಮಿಕೊಂಡ ಅಹೋರಾತ್ರಿ ಹೋರಾಟದ ಸ್ಥಳಕ್ಕೆ ಖುದ್ದು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಮಾ. 31 ರಂದು ಭೇಟಿ ನೀಡಿದ್ದಲ್ಲದೆ ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಜಿಲ್ಲಾಡಳಿತಕ್ಕೆ ಖುದ್ದು ಪತ್ರವನ್ನೂ ಬರೆದಿದ್ದನ್ನು ತಾವೇ ಇಂದು ಜಿಲ್ಲಾಡಳಿತಕ್ಕೆ ಸಲ್ಲಿಸಿದ್ದೇನೆ.
ರಾಜ್ಯ ಸರ್ಕಾರ, ಜಿಲ್ಲಾ ಸಚಿವರು, ಜಿಲ್ಲಾಡಳಿತ ಹೋರಾಟಕ್ಕೆ ಸ್ಪಂದಿಸಿ, ರೈಲ್ವೆ ಮೇಲ್ಸೇತುವೆ ಇತರೆ ಪರ್ಯಾಯ ವ್ಯವಸ್ಥೆಯ ಭರವಸೆ ನೀಡಿರುವುದು ಹೋರಾಟಕ್ಕೆ ಸಂದ ಜಯ ಎಂದು ಹೇಳಿದರು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರು, ರಾಜ್ಯ ಅಧ್ಯಕ್ಷ ಕುಮಾರಸ್ವಾಮಿ ಮನವಿ ಹಾಗೂ ಸರ್ಕಾರದ ಭರವಸೆ ಹಿನ್ನೆಲೆಯಲ್ಲಿ ಹೋರಾಟ ನಿಲ್ಲಿಸಲಾಗುತ್ತಿದೆ. ಒಂದೊಮ್ಮೆ ರೈಲ್ವೆ ಮೇಲ್ಸೇತುವೆ ಇತರೆ ಪರ್ಯಾಯ ವ್ಯವಸ್ಥೆ ಆದಷ್ಟು ಬೇಗ ಆಗದೇ ಹೋದಲ್ಲಿ ಮತ್ತೆ ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ಪಕ್ಷದ ರಾಜ್ಯ ಹಿರಿಯ ಉಪಾಧ್ಯಕ್ಷ ಮಹಮ್ಮದ್ ಗೌಸ್, ಎಚ್.ಸಿ. ಗುಡ್ಡಪ್ಪ, ಅನೀಸ್ ಪಾಷಾ, ಟಿ. ಗಣೇಶ್, ಕೆ. ಮಂಜುಳಾ, ಟಿ. ಅಜರ್, ಖಾದರ್ ಬಾಷಾ, ಶ್ರೀನಿವಾಸ್, ಸೈಯದ್ ರಸೂಲ್‌ಸಾಬ್, ದಾದಾಪೀರ್, ಕಡತಿ ಅಂಜಿನಪ್ಪ, ಗೋಣಿವಾಡ ಮಂಜುನಾಥ್, ಶಬೀºರ್‌ಸಾಬ್, ಜಿಕ್ರಿಯಾಸಾಬ್, ಬಾತಿ ಶಂಕರ್, ಬಾಷಾಸಾಬ್, ಸುಲೇಮಾನ್ ಇದ್ದರು.