ಬೆಂಗಳೂರು: ಸಚಿವ ಸ್ಥಾನಕ್ಕಾಗಿ, ಖಾತೆಗಾಗಿ ಲಾಭಿ ಮಾಡುವ ರಾಜಕಾರಣಿಗಳಿಗೆ ವಿಧಾನಸಭೆಯಲ್ಲಿ ಜೆಡಿಎಸ್ ಹಿರಿಯ ಶಾಸಕ ಎ.ಟಿ.ರಾಮಸ್ವಾಮಿ ಅವರು ಬುದ್ಧಿವಾದ ಹೇಳಿದ ಸ್ವಾರಸ್ಯಕರ ಘಟನೆ ಮಂಗಳವಾರ ವಿಧಾನಸಭಾ ಅಧಿವೇಶನದಲ್ಲಿ ನಡೆಯಿತು.
ಅರಕಲಗೂಡಿನ 67 ರ ಹರೆಯದ ಶಾಸಕ ಎ.ಟಿ.ರಾಮಸ್ವಾಮಿ ಅವರು ತಮ್ಮದೇ ಪಕ್ಷದ ಸದಸ್ಯರ ವಿರುದ್ಧವೂ ಬಹಿರಂಗ ಅಸಮಾಧಾನ ಹೊರಹಾಕಿ ಜನರ ಆಶೀರ್ವಾದವನ್ನು, ಆದೇಶವನ್ನು ಕಿಂಚಿತ್ತೂ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಕಾಲಹರಣ ಮಾಡಿ, ಕಾಲು ಎಳೆದುಕೊಂಡು ಹೊದರೆ ನಿಮ್ಮ ಕಾಲ ಮೇಲೆ ನೀವೆ ಚಪ್ಪಡಿ ಹಾಕಿಕೊಂಡಂತೆ ಎಂದು ಕಿಡಿ ಕಾರಿದರು.
ಮೊದಲು ನಮಗೆ ಮಂತ್ರಿಗಿರಿ ಬೇಕು, ಆಮೇಲೆ ಇಂತದ್ದೇ ಖಾತೆ ಬೇಕು, ಇಂತದ್ದೇ ಕೊಠಡಿ ಬೇಕು, ಅದೇ ಮನೆ ಬೇಕು, ಅದೇ ಅಧಿಕಾರಿ ಬೇಕು ಎಂದು ಮುಂದಿನ ಸಾಲಿನಲ್ಲಿ ಕುಳಿತ ಸಚಿವರತ್ತ ಕೈ ತೋರಿಸಿ ನಿಮ್ದೂ ಇದೇ ಕತೆ ಎಂದರು.
ನಾವೆಲ್ಲಾ ಆತ್ಮಾವೊಲೋಕನ ಮಾಡಿಕೊಳ್ಳಬೇಕು. ಹೀಗೆ ಆದ್ರೆ ಜನರ ಕೆಲ್ಸ ಯಾವಾಗ ಮಾಡುವುದು? ಮುಖ್ಯಮಂತ್ರಿಗಳು ಜನರ ಪರವಾಗಿ ಕೆಲಸ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು.
ಮುಂದಿನ 2 ಸಾಲುಗಳಲ್ಲಿ ಕುಳಿತವರು ಮಾತ್ರ ಅರ್ಹರು, ಉಳಿದ ನಾವೆಲ್ಲಾ ಅನರ್ಹರೆ ಎಂದು ಪ್ರಶ್ನಿಸಿದರು.