Advertisement

ತಳಮಟ್ಟದಿಂದ ಜೆಡಿಎಸ್‌ ಪುನಶ್ಚೇತನ

12:14 PM Jul 06, 2019 | Sriram |

ಲೋಕಸಭೆ ಚುನಾವಣೆ ಸೋಲು, ಮೈತ್ರಿ ಅಪಸ್ವರ, ಎಚ್.ವಿಶ್ವನಾಥ್‌ ರಾಜೀನಾಮೆ ಹಿನ್ನೆಲೆಯಲ್ಲಿ ತಳಮಟ್ಟದಿಂದ ಪಕ್ಷ ಪುನಶ್ಚೇತನಕ್ಕೆ ಮುಂದಾಗಿರುವ ರಾಜ್ಯ ಜೆಡಿಎಸ್‌ಗೆ ದಲಿತ ಸಮುದಾಯದ ಎಚ್.ಕೆ.ಕುಮಾರಸ್ವಾಮಿ ನೂತನ ಸಾರಥಿಯಾಗಿದ್ದಾರೆ. ಇವರಿಗೆ ಜತೆಯಾಗಿ ದೇವೇಗೌಡರ ಕುಟುಂಬದ ಮೂರನೇ ತಲೆಮಾರು ನಿಖೀಲ್ ಕುಮಾರಸ್ವಾಮಿಗೆ ಯುವ ಘಟಕದ ಹೊಣೆಗಾರಿಕೆಯೂ ದೊರೆತಿದೆ. ಈ ಸಂದರ್ಭದಲ್ಲಿ ‘ಉದಯವಾಣಿ’ ನೂತನ ರಾಜ್ಯಾಧ್ಯಕ್ಷ ಹಾಗೂ ಯುವ ಘಟಕದ ಅಧ್ಯಕ್ಷರ ಜತೆ ನಡೆಸಿದ ಸಂದರ್ಶನ ಇಲ್ಲಿದೆ.

Advertisement

ಸಚಿವ ಸಂಪುಟದಲ್ಲಿ ಸ್ಥಾನ ಕೊಟ್ಟರೂ ನಿಭಾಯಿಸುತ್ತೇನೆ: ಎಚ್‌.ಕೆ.ಕುಮಾರಸ್ವಾಮಿ

ಪಕ್ಷದ ರಾಜ್ಯಾಧ್ಯಕ್ಷ ಸ್ಥಾನ ನಿಮಗೆ ನಿರೀಕ್ಷೆ ಇತ್ತೇ?
ನನಗೆ ನಿರೀಕ್ಷೆ ಇರಲಿಲ್ಲ. ಎಚ್‌.ಡಿ.ದೇವೇಗೌಡರು ನಂಬಿಕೆಯಿಂದ ಹೊಣೆಗಾರಿಕೆ ನೀಡಿದ್ದಾರೆ. ಸಮರ್ಥವಾಗಿ ನಿಭಾಯಿಸುತ್ತೇನೆ.

ನೀವು ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದೀರಾ?
ಹೌದು, ಸಹಜವಾಗಿ ಆರು ಬಾರಿ ಶಾಸಕನಾಗಿ ಹಿರಿಯನಿದ್ದೆ. ಸಚಿವ ಸ್ಥಾನ ಸಿಗದ ಕಾರಣ ಬೇಸರವಾಗಿತ್ತು. ಆದರೆ, ಮೈತ್ರಿ ಸರ್ಕಾರ, ಅಸಮಾಧಾನಿತರಿಗೆ ಅವಕಾಶ ಕೊಡುವ ಅನಿವಾರ್ಯತೆಯಿಂದ ತ್ಯಾಗ ಮಾಡಿದೆ. ಪಕ್ಷದ ಅಧ್ಯಕ್ಷ ಸ್ಥಾನವೂ ದೊಡ್ಡ ಹುದ್ದೆ. ರಾಜ್ಯಾಧ್ಯಕ್ಷ ಸ್ಥಾನ ನನಗೆ ತೃಪ್ತಿ ತಂದಿದ್ದು ನಿಭಾಯಿಸಲಿದ್ದೇನೆ, ಮುಂದೆ ಸಚಿವ ಸ್ಥಾನ ಕೊಟ್ಟರೂ ನಿರ್ವಹಿಸುತ್ತೇನೆ.

ಸಂಕಷ್ಟ ಸಮಯದಲ್ಲಿ ರಾಜ್ಯಾಧ್ಯಕ್ಷರಾಗಿದ್ದೀರಿ ಅನಿಸುವುದಿಲ್ಲವಾ?
ನಮಗೆಲ್ಲ ಪಕ್ಷ ಮುಖ್ಯ.ಪಕ್ಷದ ಹಿತಕ್ಕಾಗಿ ನಾನು ಹೊಸ ಜವಾಬ್ದಾರಿ ಒಪ್ಪಿಕೊಂಡಿ ದ್ದೇನೆ.ಒಂದು ಪಕ್ಷ ಕಟ್ಟಿ ಬೆಳೆಸಲು ಅನುಭವವುಳ್ಳವರು ಬೇಕು,ಹೊಸ ಆಲೋಚನೆವುಳ್ಳವರೂ ಬೇಕು. ಎಲ್ಲರನ್ನೂ ಒಗ್ಗೂಡಿಸಿಕೊಂಡು ಪಕ್ಷ ಕಟ್ಟುವೆ. ಪಕ್ಷ ಮತ್ತು ಸರ್ಕಾರ ಒಂದೇ ನಾಣ್ಯದ ಎರಡು ಮುಖ. ನಮ್ಮದೇ ಸರ್ಕಾರ ಇದೆ, ಮುಖ್ಯಮಂತ್ರಿ ಕುಮಾರಸ್ವಾಮಿ ಯವರು ಉತ್ತಮ ಕಾರ್ಯಕ್ರಮ ನೀಡಿದ್ದಾರೆ.ಸಮನ್ವಯತೆ ಸಾಧಿಸಿ ಪಕ್ಷ ಸಂಘಟನೆ ಮಾಡುತ್ತೇನೆ.

Advertisement

ನಿಮ್ಮ ಪ್ರಕಾರ ಲೋಕಸಭೆ ಚುನಾವಣೆಯಲ್ಲಿ ಸೋಲಿಗೆ ಕಾರಣ ಏನಿರಬಹುದು?
ಪ್ರತಿ ಸೋಲಿಗೂ ನಾನಾ ಕಾರಣಗಳಿರುತ್ತವೆ. ಹಾಗೆಯೇ ಗೆಲುವಿಗೆ ಹಲವು ಕಾರಣಗಳಿರುತ್ತವೆ. ಇದೀಗ ಅದು ಮುಗಿದ ಅಧ್ಯಾಯ. ಸೋಲಿನಿಂದ ಹತಾಶೆ ಅಥವಾ ಎದೆಗುಂದುವ ಅಗತ್ಯವಿಲ್ಲ. ಸೋಲು ಶಾಶ್ವತವೂ ಅಲ್ಲ. ಪಕ್ಷ ಕಟ್ಟುವುದೇ ನಮ್ಮ ಮುಂದಿನ ಗುರಿ

ಜೆಡಿಎಸ್‌ ಒಂದು ಪ್ರದೇಶ, ವರ್ಗಕ್ಕೆ ಸೀಮಿತ ಎಂಬ ಮಾತಿದೆಯಲ್ಲಾ?
ಅದು ಸುಳ್ಳು. ಜೆಡಿಎಸ್‌ ರಾಜ್ಯವ್ಯಾಪಿ ಇರುವ ಪ್ರಾದೇಶಿಕ ಪಕ್ಷ. ಉತ್ತರ ಕರ್ನಾಟಕ ಭಾಗದಲ್ಲೂ ನಮ್ಮ ಶಾಸಕರು ಇದ್ದಾರೆ, ನಮ್ಮ ಸಂಘಟನೆ ಇದೆ. ಜೆಡಿಎಸ್‌ ಸಾಮಾಜಿಕ ನ್ಯಾಯದಲ್ಲಿ ನಂಬಿಕೆ ಇಟ್ಟ ಪಕ್ಷ. ನನ್ನಂತ ಅನೇಕರಿಗೆ ಅವಕಾಶ ಕೊಟ್ಟಿರುವುದೇ ಸಾಕ್ಷಿ.1989 ರಲ್ಲಿ ನಮ್ಮ ಪಕ್ಷ ಎರಡು ಸ್ಥಾನ ಗಳಿಸಿತ್ತು. ಸೋತೆವು ಎಂದು ಮನೆಯಲ್ಲಿ ಕುಳಿತಿದ್ದರೆ 1994 ರಲ್ಲಿ 116 ಸೀಟು ಬರುತ್ತಿರಲಿಲ್ಲ. ಆದೇ ರೀತಿ 2004 ರಲ್ಲಿ ಪಕ್ಷ ಮರುಹುಟ್ಟು ಪಡೆಯುತ್ತಿರಲಿಲ್ಲ.

ಸಮನ್ವಯ ಸಮಿತಿಯಲ್ಲಿ ಜೆಡಿಎಸ್‌ ರಾಜ್ಯಾಧ್ಯಕ್ಷರು ಇರಬೇಕು, ಅದೇ ರೀತಿ ಕೆಪಿಸಿಸಿ ಅಧ್ಯಕ್ಷರೂ ಇರಬೇಕು, ನನ್ನನ್ನೂ ಸೇರಿಸಿದರೆ ಒಳ್ಳೆಯರು. ಆದರೆ,ಅದು ಹಿರಿಯರಿಗೆ ಬಿಟ್ಟ ವಿಚಾರ.ನಾನು ಪಕ್ಷದ ಶಿಸ್ತಿನ ಸಿಪಾಯಿಯಾಗಿ ನನಗೆ ವಹಿಸಿರುವ ಕೆಲಸ ಮಾಡುವೆ.
– ಎಚ್‌.ಕೆ.ಕುಮಾರಸ್ವಾಮಿ,
ಜೆಡಿಎಸ್‌ ನೂತನ ರಾಜ್ಯಾಧ್ಯಕ್ಷ

ವರ್ಷದಲ್ಲಿ ಪಕ್ಷ ಬಲಿಷ್ಠ:ಮಧು
ನಿಮಗೆ ರಾಜ್ಯಾಧ್ಯಕ್ಷ ಸ್ಥಾನದ ನಿರೀಕ್ಷೆಯಿತ್ತೋ, ಕಾರ್ಯಾಧ್ಯಕ್ಷ ಸ್ಥಾನಧ್ದೋ?
ನನಗೆ ಪಕ್ಷದ ಜವಾಬ್ದಾರಿ ತೆಗೆದುಕೊಳ್ಳಬೇಕು. ಈ ಪಕ್ಷವನ್ನು ಬಲಿಷ್ಠವಾಗಿ ಕಟ್ಟಬೇಕೆಂಬ ನಿರೀಕ್ಷೆಯಿತ್ತು. ದಲಿತ ಸಮುದಾಯದ ಎಚ್.ಕೆ.ಕುಮಾರಸ್ವಾಮಿ ಅವರು ರಾಜ್ಯಾಧ್ಯಕ್ಷರಾಗಿರುವುದು ನನಗೆ ಹೆಚ್ಚು ಸಂತೋಷ ತಂದಿದೆ. ಅನುಭವಿ ಹಾಗೂ ಸರಳ-ಸಜ್ಜನರಾಗಿರುವ ಅವರ ಜತೆ ಕಾರ್ಯಾಧ್ಯಕ್ಷರಾಗಿ ಕೆಲಸ ಮಾಡುವ ಅವಕಾಶ ಒದಗಿರುವುದು ನನಗೆ ಸುವರ್ಣ ಅವಕಾಶ ಎಂದುಕೊಂಡಿದ್ದೇನೆ.

ಪ್ರಸ್ತುತ ಸಂದರ್ಭದಲ್ಲಿ ಕಾರ್ಯಾಧ್ಯಕ್ಷರಾಗಿ ಹೊಣೆಗಾರಿಕೆ ಕಷ್ಟ ಎನಿಸುವುದಿಲ್ಲವಾ?
ಖಂಡಿತ ಇಲ್ಲ. ಪಕ್ಷ ಕಟ್ಟುವುದು ನನಗೆ ಹೊಸದಲ್ಲ. ನಾನು ಬಂಗಾರಪ್ಪ ಅವರ ಪುತ್ರ. ನನಗೆ ಪಕ್ಷ ಕಟ್ಟುವುದೇ ಇಷ್ಟ ಸಹ. ನನಗೆ ವಹಿಸಿರುವ ಜವಾಬ್ದಾರಿಯ ಮಹತ್ವ ನನಗೆ ಗೊತ್ತಿದೆ. ದೇವೇಗೌಡರು ಹಾಗೂ ಕುಮಾರಣ್ಣ ಮಾರ್ಗ ದರ್ಶನದಲ್ಲಿ ಎಚ್.ಕೆ.ಕುಮಾರಸ್ವಾಮಿ ನೇತೃತ್ವದಲ್ಲಿ ಕೆಲಸ ಮಾಡಲಿದ್ದೇನೆ.

ಕಾರ್ಯಾಧ್ಯಕ್ಷರಾಗಿ ಪಕ್ಷ ಸಂಘಟನೆ ವಿಚಾರದಲ್ಲಿ ನಿಮ್ಮ ಕಾರ್ಯಯೋಜನೆಗಳೇನು?
ಸದಸ್ಯತ್ವ ಅಭಿಯಾನ, ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆ, ಗ್ರಾಮೀಣ ಭಾಗದಿಂದ ನಗರ ಪ್ರದೇಶದವರೆಗೆ ಪ್ರತಿ ಬೂತ್‌ನಲ್ಲೂ ಯುವ ನಾಯಕತ್ವ ಗುರುತಿಸುವಿಕೆ, ಬ್ಲಾಕ್‌, ತಾಲೂಕು, ಜಿಲ್ಲಾ ಘಟಕಗಳಲ್ಲಿ ಎಲ್ಲ ವರ್ಗದವರಿಗೆ ಹಾಗೂ ಕೆಲಸ ಮಾಡುವವರಿಗೆ ಮಾತ್ರ ಅವಕಾಶ ಸೇರಿದಂತೆ ಹತ್ತು ಹಲವಾರು ಯೋಜನೆಗಳಿವೆ.

ನಿಖೀಲ್‌ಗೆ ಯುವ ಘಟಕದ ಅಧ್ಯಕ್ಷ ಸ್ಥಾನ ನೀಡಿರುವುದರಿಂದ ಬೇರೆ ರೀತಿಯ ಸಂದೇಶ ರವಾನೆಯಾಗುವುದಿಲ್ಲವೇ?
ಎಂತದ್ದೂ ಇಲ್ಲ. ಸೋತಿದ್ದಾರೆ ಎಂದು ಅವರನ್ನು ಮನೆಯಲ್ಲಿ ಕೂರಿಸಲು ಸಾಧ್ಯವೇ? ನಾನೂ ಮೂರು ಚುನಾವಣೆ ಸೋತಿಲ್ಲವೇ? ಹಾಗೆಂದು ಪಕ್ಷ ಕಟ್ಟುವುದು ಬೇಡವೇ? ನಿಖೀಲ್‌ಗೆ ಯುವ ಘಟಕದ ಅಧ್ಯಕ್ಷ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದು ನಾನೇ. ಅಮೆರಿಕದಲ್ಲಿದ್ದ ಕುಮಾರಸ್ವಾಮಿಯವರೂ ಒಪ್ಪಿರಲಿಲ್ಲ, ದೇವೇಗೌಡರೂ ಅಪವಾದ ಬರಬಹುದು ಎಂದು ಭಯ ಬಿದ್ದಿ ದ್ದರು. ನಾನು ಒಪ್ಪಿಸಿದ್ದೇನೆ. ಪಕ್ಷಕ್ಕೆ ವರ್ಚಸ್ಸು ಬೇಕು, ಯುವ ಸಮೂಹ ಜತೆ ಗೂಡಬೇಕು ಎಂದರೆ ಫೇಸ್‌ ವ್ಯಾಲ್ಯೂ ಬೇಕು. ಹೀಗಾಗಿ, ಇದರ ಅಗತ್ಯತೆ ಇತ್ತು.

ದೇವೇಗೌಡರ ಕ್ಯಾಂಬಿನೇಷನ್‌ ವರ್ಕ್‌ ಔಟ್ ಆಗುತ್ತಾ?
ಆಗಬೇಕು, ಅದಕ್ಕೆ ನಾವು ಸಜ್ಜಾಗಿದ್ದೇವೆ. ದಲಿತ, ಹಿಂದುಳಿದ, ಒಕ್ಕಲಿಗ, ಲಿಂಗಾಯತ, ಮುಸ್ಲಿಂ, ಬ್ರಾಹ್ಮಣ ಹೀಗೆ ಎಲ್ಲ ವರ್ಗದವರೂ ಇರುವ ತಂಡ ಬೇಕು ಎಂದು ಬೇಡಿಕೆ ಇಟ್ಟಿದ್ದೆ, ಅದಕ್ಕೆ ದೇವೇಗೌಡರು ಒಪ್ಪಿ ನೇಮಕ ಮಾಡಿದ್ದಾರೆ. ಸಾಮಾಜಿಕ ನ್ಯಾಯದ ಪರಿಕಲ್ಪನೆ ಜೆಡಿಎಸ್‌ನ ಮೂಲ ತತ್ವ. ಇನ್ನೇನಿದ್ದರೂ ಪಕ್ಷ ಕಟ್ಟುವುದಷ್ಟೇ ನಮ್ಮ ಕೆಲಸ. ಒಂದು ವರ್ಷದಲ್ಲಿ ಪಕ್ಷದ ಸ್ವರೂಪ ಹೇಗಿರಲಿದೆ ಎಂಬುದು ನಿಮಗೇ ಗೊತ್ತಾಗಲಿದೆ.

ಹಿರಿಯರ ಮಾರ್ಗದರ್ಶನದಲ್ಲಿ ಪಕ್ಷ ಕಟ್ಟುತ್ತೇನೆ: ನಿಖೀಲ್‌ ಕುಮಾರಸ್ವಾಮಿ
ನಿಮಗೆ ಈ ಸ್ಥಾನ ನಿರೀಕ್ಷೆಯಿತ್ತಾ?
ಖಂಡಿತವಾಗಿಯೂ ಇರಲಿಲ್ಲ. ನಾನು ಆಕಾಂಕ್ಷಿಯೂ ಆಗಿರಲಿಲ್ಲ. ಇದನ್ನು ನಾನು ಬಹಳ ಸ್ಪಷ್ಟವಾಗಿ ಹೇಳಲು ಬಯಸುತ್ತೇನೆ. ಶರಣ್‌ಗೌಡ ಕುಂದಕೂರ್‌ ಅವರನ್ನು ಯುವ ಘಟಕದ ಅಧ್ಯಕ್ಷರನ್ನಾಗಿ ಮಾಡುವ ಚಿಂತನೆ ಯಿತ್ತು. ಅವರೂ ಸೇರಿ ಇತರೆ ಯುವ ಮುಖಂ ಡರು ನನ್ನ ಮೇಲೆ ವಿಶ್ವಾಸವಿಟ್ಟು ನನ್ನನ್ನೇ ನೇಮಿ ಸಲು ಹೇಳಿದ್ದರಂತೆ. ಹೀಗಾಗಿ, ಮಧು ಬಂಗಾ ರಪ್ಪ, ವಿಶ್ವನಾಥ್‌ ಅಣ್ಣ, ಬಸವರಾಜ ಹೊರಟ್ಟಿ ಸರ್‌ ಸೇರಿ ಎಲ್ಲ ನಾಯಕರು ಒತ್ತಾಯಿಸಿ ಒಪ್ಪಿಸಿ ದರು. ಅಲ್ಲಿಯವರೆಗೂ ನನಗೆ ಗೊತ್ತಿರಲಿಲ್ಲ. ಬೆಳಗ್ಗೆ 11 ಗಂಟೆಗೆ ವರಿಷ್ಠರಾದ ದೇವೇಗೌಡರು ದೂರವಾಣಿ ಕರೆ ಮಾಡಿ ಹೇಳಿದರು.

ಪಕ್ಷ ಕಟ್ಟುವ ನಿಟ್ಟಿನಲ್ಲಿ ನಿಮ್ಮ ಕಾರ್ಯಕ್ರಮಗಳೇನು?
ಇಷ್ಟು ಬೇಗ ಈ ಜವಾಬ್ದಾರಿ ನನಗೆ ಬೇಕಿತ್ತಾ ಎಂದು ಅನಿಸಿದ್ದೂ ಇದೆ. ಆದರೆ, ಪಕ್ಷದ ನಾಯಕರು ಸೂಚಿಸಿದ್ದರಿಂದ ಕಣ್ಣಿಗೆ ಒತ್ತಿಕೊಂಡು ಪಕ್ಷದ ನಿಷ್ಠಾವಂತನಾಗಿ ಒಪ್ಪಿಕೊಂಡಿದ್ದೇನೆ. ನನಗೆ ಅತ್ಯಂತ ಜವಾಬ್ದಾರಿಯುತ ಸ್ಥಾನ ನೀಡಲಾಗಿದೆ. ನಾನು ಯುವ ಘಟಕದ ಅಧ್ಯಕ್ಷ ಎಂದು ಕೆಲಸ ಮಾಡುವುದಿಲ್ಲ. ಪಕ್ಷದ ಸಾಮಾನ್ಯ ಕಾರ್ಯ ಕರ್ತನಂತೆ ಕೆಲಸ ಮಾಡಿ ಪಕ್ಷ ಕಟ್ಟುತ್ತೇನೆ.

ನೀವು ಮುಖ್ಯಮಂತ್ರಿಯವರ ಪುತ್ರ ಸಹ ಹೌದು, ಕಾರ್ಯಕರ್ತರಿಗೆ ಯಾವ ರೀತಿ ಸ್ಪಂದಿಸುತ್ತೀರಿ?
ಸರ್ಕಾರದ ಜವಾಬ್ದಾರಿ ತಂದೆಯವರು ನಿಭಾಯಿಸಲಿದ್ದಾರೆ. ಪಕ್ಷದ ಹೊಣೆಗಾರಿಕೆ ಎಚ್.ಕೆ.ಕುಮಾರಸ್ವಾಮಿ, ಮಧು ಬಂಗಾರಪ್ಪ , ಸಿ.ಬಿ.ಸುರೇಶ್‌ಬಾಬು ಅವರಂತಹ ಹಿರಿಯರ ಮಾರ್ಗದರ್ಶನದಲ್ಲಿ ಶರಣ್‌ಗೌಡ ಕುಂದಕೂರ್‌, ನೂರ್‌ ಅಹ್ಮದ್‌ ಸೇರಿ ಉತ್ಸಾಹಿ ಯುವ ಪಡೆ ಜತೆಗೂಡಿ ಕೆಲಸ ಮಾಡುತ್ತೇನೆ. ನಾನು ಮುಖ್ಯಮಂತ್ರಿಯವರ ಮಗ ಅಥವಾ ಮಾಜಿ ಪ್ರಧಾನಿಯವರ ಮೊಮ್ಮಗ ಎನ್ನುವುದಕ್ಕಿಂತ ಪಕ್ಷದ ಸಾಮಾನ್ಯ ಕಾರ್ಯಕರ್ತರಲ್ಲಿ ನಾನೂ ಒಬ್ಬ ಅಷ್ಟೇ.

ಮಂಡ್ಯದ ಸೋಲಿನ ಬಗ್ಗೆ ಏನು ಹೇಳುತ್ತೀರಿ?
ರಾಜಕಾರಣದಲ್ಲಿ ಸೋಲು-ಗೆಲುವು ಇದ್ದದ್ದೇ. ನಮ್ಮ ಕುಟುಂಬಕ್ಕೆ ಅದು ಹೊಸದೂ ಅಲ್ಲ. ಏಳು ಬೀಳು ಇದ್ದದ್ದೇ. ಐದೂ ಮುಕ್ಕಾಲು ಲಕ್ಷ ಜನ ನನಗೆ ಆಶೀರ್ವಾದ ಮಾಡಿದ್ದಾರೆ. ಇಟ್ ಈಸ್‌ ನಾಟ್ ಎ ಜೋಕ್‌. ಏಳು ಲಕ್ಷ ಜನ ನನಗೆ ವಿರುದ್ಧವಾಗಿ ಮತ ಹಾಕಿದ್ದು, ಮುಂದಿನ ದಿನಗಳಲ್ಲಿ ಅವರ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕೆಲಸ ಮಾಡಲಿದ್ದೇನೆ. ಮಂಡ್ಯ ಜಿಲ್ಲೆಯೇ ನನ್ನ ಕರ್ಮಭೂಮಿ.

ರಾಜ್ಯದಲ್ಲಿ ಜೆಡಿಎಸ್‌ ಶಕ್ತಿ ಸೀಮಿತವಾ?
ಹಾಗೇನಿಲ್ಲ, ರಾಜ್ಯದಲ್ಲಿ ಜನತಾಪರಿವಾರಕ್ಕೆ ದೊಡ್ಡ ಹಿನ್ನೆಲೆಯಿದೆ. ಈ ಪಕ್ಷ ಹಲವು ನಾಯಕರನ್ನು ಹುಟ್ಟುಹಾಕಿದೆ. ದೇವೇಗೌಡರ ಶ್ರಮದಿಂದ ಪಕ್ಷ ಉಳಿದಿದೆ. ಎಲ್ಲರ ಮಾರ್ಗದರ್ಶನದಲ್ಲಿ ತಳಮಟ್ಟದಿಂದ ಪಕ್ಷ ಕಟ್ಟುತ್ತೇನೆ. ಸಾಮಾಜಿಕ ಜಾಲತಾಣ ವಿಭಾಗವನ್ನೂ ಬಲಪಡಿಸಿ ಹೊಸ ಕಾರ್ಯಕರ್ತರ ತಂಡ ಕಟ್ಟುತ್ತೇನೆ. ಅದು ಹೇಗೆ ಎಂಬುದು ಮುಂದೆ ನೀವೇ ಕಾದು ನೋಡಿ.

ಸಂದರ್ಶನ: ಎಸ್‌. ಲಕ್ಷ್ಮೀನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next