Advertisement

ಬಂಡಾಯ ಶಾಸಕರಿಂದ ರಾಜೀನಾಮೆ

06:15 AM Mar 25, 2018 | Team Udayavani |

ಬೆಂಗಳೂರು: ಎರಡು ವರ್ಷಗಳಿಂದ ತಾಂತ್ರಿಕವಾಗಿ ಜೆಡಿಎಸ್‌, ಮಾನಸಿಕವಾಗಿ ಕಾಂಗ್ರೆಸ್‌ನಲ್ಲಿದ್ದ ಏಳು ಬಂಡಾಯ ಶಾಸಕರು ಅಧಿಕೃತವಾಗಿ ಶಾಸಕ ಸ್ಥಾನಕ್ಕೆ ಗುಡ್‌ಬೈ ಹೇಳಿದ್ದಾರೆ.

Advertisement

ಭಾನುವಾರ ಮೈಸೂರಿನಲ್ಲಿ ನಡೆಯಲಿರುವ ಕಾಂಗ್ರೆಸ್‌ ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಸಮ್ಮುಖದಲ್ಲಿ ಕಾಂಗ್ರೆಸ್‌ ಸೇರಲಿದ್ದಾರೆ.

ಶನಿವಾರ ಸ್ಪೀಕರ್‌ ಕೆ.ಬಿ.ಕೋಳಿವಾಡ ಅವರನ್ನು ಭೇಟಿ ಮಾಡಿದ್ದ ಜಮೀರ್‌ ಅಹಮದ್‌, ಇಕ್ಬಾಲ್‌ ಅನ್ಸಾರಿ, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಭೀಮಾ ನಾಯ್ಕ, ಎಚ್‌.ಸಿ.ಬಾಲಕೃಷ್ಣ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ರಮೇಶ್‌ ಬಂಡಿಸಿದ್ದೇಗೌಡ ಶುಕ್ರವಾರ ರಾತ್ರಿಯೇ ರಾಜೀನಾಮೆ ಸಲ್ಲಿಸಿದ್ದರು. ಜೆಡಿಎಸ್‌ನಿಂದ ಆಯ್ಕೆಯಾಗಿದ್ದ ಏಳು ಶಾಸಕರ ರಾಜೀನಾಮೆ ಅಂಗೀಕರಿಸಿರುವುದಾಗಿ ಕೆ.ಬಿ.ಕೋಳಿವಾಡ ತಿಳಿಸಿದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಹಿನ್ನೆಲೆಯಲ್ಲಿ ಅನರ್ಹತೆ ದೂರು ಪ್ರಕರಣಕ್ಕೂ ರಾಜೀನಾಮೆಗೂ ಸಂಬಂಧವಿಲ್ಲ. ನಾನು ಆ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಪು ಕಾಯ್ದಿರಿಸಿದ್ದೇನೆ ಎಂದು ಹೇಳಿದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ನಂತರ ಮಾತನಾಡಿದ ಎಚ್‌.ಸಿ.ಬಾಲಕೃಷ್ಣ, ನಾವು ತುಂಬಾ ಸಂತೋಷದಿಂದ ಜೆಡಿಎಸ್‌ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ ಸೇರಲು ತೀರ್ಮಾನಿಸಿದ್ದೇವೆ. ನಮ್ಮ ಕ್ಷೇತ್ರದ ಜನರ ಆಶಯದಂತೆ  ಈ ನಿರ್ಧಾರ ಕೈಗೊಂಡಿದ್ದೇವೆ ಎಂದು ತಿಳಿಸಿದರು.

*ಕುಮಾರಸ್ವಾಮಿ ಪತ್ರ
ಈ ಮಧ್ಯೆ, ಏಳು ಶಾಸಕರ ರಾಜೀನಾಮೆ ಬಗ್ಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಪತ್ರ ರೂಪದ ಪತ್ರಿಕಾ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷದ ಚಿಹ್ನೆ, ಕಾರ್ಯಕರ್ತರ ನೆರವಿನಿಂದ ಗೆದ್ದು ಇನ್ನೊಂದು ಪಕ್ಷದ ಒತ್ತಾಸೆಯಾಗಿ ನಿಂತ ಏಳು ಶಾಸಕರು ಇಂದು ನಮ್ಮಿಂದ ಎಲ್ಲ ರೀತಿಯಲ್ಲೂ ಬಿಡುಗಡೆ ಹೊಂದಿದ್ದಾರೆ. ಅವರು ನಾನು ಶುಭ ಹಾರೈಸುತ್ತೇನೆ.

Advertisement

ಅವರು ಗೆದ್ದಿದ್ದು ನಮ್ಮ ಪಕ್ಷದಿಂದ. ನಾನೂ ಕೂಡ ಅವರ ಪರವಾಗಿ ಪ್ರಚಾರ ಮಾಡಿ ಗೆಲುವಿಗೆ ಶ್ರಮಿಸಿದ್ದೇನೆ. ಅದೆಲ್ಲಕ್ಕೂ ಮಿಗಿಲಾಗಿ ನಿಸ್ವಾರ್ಥ ಕಾರ್ಯಕರ್ತರು ಕೂಡ ಸ್ಥಳೀಯ ವಿರೋಧಿಗಳೊಂದಿಗೆ ಸೆಣಸಿ ಅವರನ್ನು ಗೆಲ್ಲಿಸಿದ್ದರು. ಪಕ್ಷದಿಂದ ಸಕಲವನ್ನೂ ಪಡೆದ ಅವರಿಂದ ನಾವು ಕನಿಷ್ಠ ಪಕ್ಷ ನಿಷ್ಠೆಯಷ್ಟೇ ಬಯಸಿದ್ದೆವು. ಆದರೆ, ಎರಡು ಚುನಾವಣೆಗಳಲ್ಲಿ ಆವರು ದ್ರೋಹ ಬಗೆದರು. ರಾಜಕಾರಣಿಗಳು ಪಕ್ಷವನ್ನು ತಾಯಿಯಂತೆ ಭಾವಿಸಬೇಕು. ಆದರೆ, ಇವರು ತಾಯಿಯನ್ನೇ ಕಡೆಗಣಿಸಿದರು. ಇವರ ನಡೆಯಿಂದ ಮುಂದೆ ರಾಜಕಾರಣ, ಶಾಸನಸಭೆಗೆ ಪ್ರವೇಶಿಸುವ ಯುವ ಪೀಳಿಗೆಗೆ ಸಿಕ್ಕ ಸಂದೇಶವಾದರೂ ಎಂಥದ್ದು ಎಂಬುದನ್ನು ಏಳು ಜನರೇ ತೀರ್ಮಾನಿಸಲಿದೆ.

ಇದೇ ಪ್ರಶ್ನೆಯನ್ನು ನಾನು ಕಾಂಗ್ರೆಸ್‌ ಪಕ್ಷಕ್ಕೂ ಕೇಳುತ್ತೇನೆ. ಪಕ್ಷ, ಧರ್ಮ ಒಡೆಯುತ್ತಾ ಸಾಗಿರುವ ನೀವು ಸಮಾಜಕ್ಕೆ ನೀಡುತ್ತಿರುವ ಸಂದೇಶವೇನು? ರಾಜ್ಯಸಭೆ ಚುನಾವಣೆ ಗೆಲ್ಲಲು ನೀವು ಹಾಕಿ ಕೊಟ್ಟ ಸೂತ್ರ ಮುಂದೊಂದು ದಿನ ನಿಮ್ಮ ಪಕ್ಷದ ಕೊರಳನ್ನೇ ಬಿಗಿಯಲಿದೆ. ಕಾಲ ಚಕ್ರ ತಿರುಗುವ ಸನ್ನಿವೇಶದಲ್ಲಿ ಇಂದು ಜೆಡಿಎಸ್‌ ಅನುಭವಿಸಿದ ಸೋಲು ನಿಮಗೂ ಅಪ್ಪಳಿಸಲಿದೆ. ನಮ್ಮ ಪಕ್ಷ ಒಡೆದವರು, ಒಡೆಯಲು ಯತ್ನಿಸಿದವರನ್ನು ನಾನು ಚುನಾವಣಾ ಕಣದಲ್ಲಿ ಎದುರಾಗುತ್ತೇನೆ.

Advertisement

Udayavani is now on Telegram. Click here to join our channel and stay updated with the latest news.

Next