ಬೆಂಗಳೂರು: ಗ್ರಾಮ ಪಂಚಾಯತ್ ಚುನಾವಣೆ ಹಿನ್ನೆಲೆ ಯಲ್ಲಿ ತಳಮಟ್ಟದಿಂದ ಪಕ್ಷದ ಬಲ ವರ್ಧನೆಗೆ ಜೆಡಿಎಸ್ ಮುಂದಾಗಿದೆ. ಬಿಜೆಪಿಯು “ಪಂಚರತ್ನ ಸಮಿತಿ’ ಹಾಗೂ “ಕುಟುಂಬ ಮಿಲನ’ ಮೂಲಕ ಪಂಚಾಯತ್ ಚುನಾವಣೆಗೆ ಸಜ್ಜಾಗು ತ್ತಿರುವ ಹಿನ್ನೆಲೆಯಲ್ಲಿ ಜೆಡಿಎಸ್ ಎಚ್ಚೆತ್ತುಕೊಂಡಿದೆ.
ದೀಪಾವಳಿ ಬಳಿಕ ಮೊದಲ ಹಂತ ದಲ್ಲಿ ತಾಲೂಕು ಹಾಗೂ ಜಿಲ್ಲಾವಾರು ಮುಖಂಡರ ಸಭೆ ನಡೆಸಿ ಜಿಲ್ಲಾ ಅಧ್ಯಕ್ಷರು, ಶಾಸಕರು, ಮಾಜಿ ಶಾಸಕರ ಅಭಿಪ್ರಾಯ ಪಡೆದು ಪ್ರತಿ ಗ್ರಾಮ ಪಂಚಾಯ್‌ಗೆ ಉಸ್ತುವಾರಿಗಳನ್ನು ನೇಮಿಸಲು ನಿರ್ಧರಿಸಲಾಗಿದೆ. ಈ ಉಸ್ತುವಾರಿಗಳು ಗ್ರಾ. ಪಂ.ಗಳಿಗೆ ಭೇಟಿ ನೀಡಿ ಬೂತ್ ಮಟ್ಟದಲ್ಲಿ ಸಕ್ರಿಯ ಕಾರ್ಯಕರ್ತರ ಸಮಿತಿ ರಚಿಸುವುದು ಮುಂತಾದ ಹೊಣೆ ಹೊರಬೇಕಾಗುತ್ತದೆ.
ಗ್ರಾ. ಪಂ. ಚುನಾವಣೆಗೆ ಸಿದ್ಧರಾಗು ವಂತೆ ಎಚ್. ಡಿ. ದೇವೇಗೌಡರು ಎಚ್.ಡಿ.ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಎಚ್.ಕೆ. ಕುಮಾರಸ್ವಾಮಿ ಅವರಿಗೆ ಸೂಚನೆ ನೀಡಿದ್ದು, ಉಪ ಚುನಾವಣೆ ಫಲಿತಾಂಶದ ಬಳಿಕ ಸರಣಿ ಸಭೆ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಯುವಪಡೆ ಯುವ ಸಮೂಹವನ್ನು ಸೆಳೆಯುವ ನಿಟ್ಟಿನಲ್ಲಿ ಯುವ ಘಟಕಾಧ್ಯಕ್ಷ ನಿಖೀಲ್ ಕುಮಾರಸ್ವಾಮಿ ಅವರು ಗ್ರಾ.ಪಂ. ಮಟ್ಟದಲ್ಲಿ ಯುವಪಡೆಯನ್ನು ರಚಿಸಲು ರೂಪುರೇಷೆ ಹಾಕಿಕೊಂಡಿದ್ದಾರೆ.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಹಳೆ ಮೈಸೂರು ಹಾಗೂ ಉತ್ತರ ಕರ್ನಾಟಕ ಭಾಗದಲ್ಲಿ ಜೆಡಿಎಸ್‌ನಲ್ಲಿರುವ ಪ್ರಭಾವಿ ಒಕ್ಕಲಿಗ ನಾಯಕರನ್ನು ಕಾಂಗ್ರೆಸ್‌ನತ್ತ ಸೆಳೆಯುವ ಕೆಲಸವಾಗುತ್ತಿದೆ. ಇದು ಗ್ರಾ.ಪಂ.ಮಟ್ಟಕ್ಕೂ ವ್ಯಾಪಿಸಬಹುದು ಎಂಬ ಆತಂಕವಿದೆ.
ಗ್ರಾ.ಪಂ. ಚುನಾವಣೆ ಬಳಿಕ ತಾಲೂಕು ಹಾಗೂ ಜಿ.ಪಂ. ಚುನಾವಣೆ ಎದುರಾಗುವುದರಿಂದ ಇಲ್ಲಿ ಗಟ್ಟಿಯಾಗಿ ನೆಲೆಗೊಂಡರೆ ಮುಂದಿನ ವಿಧಾನಸಭೆ ಚುನಾವಣೆಗೆ ಸಹಕಾರಿಯಾಗುತ್ತದೆ ಎಂಬ ಲೆಕ್ಕಾಚಾರ ಪಕ್ಷದ ನಾಯಕರದ್ದಾಗಿದೆ.
ನಗರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆಯಲ್ಲಿ ಹೆಚ್ಚು ಕಡೆಗಳಲ್ಲಿ ಅಧಿಕಾರ ಹಿಡಿಯಲು ಪ್ರಯತ್ನಿಸುವಂತೆ ಸೂಚನೆ ನೀಡಿದ್ದು, ಅದಕ್ಕೆ ಬೇಕಾದ ಹೊಂದಾಣಿಕೆ ಮಾಡಿಕೊಳ್ಳಲೂ ಸಲಹೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಹೀಗಾಗಿಯೇ ಕೆಲವೆಡೆ ಕಾಂಗ್ರೆಸ್ ಮತ್ತು ಬಿಜೆಪಿಯನ್ನು ಬೆಂಬಲಿಸಿ ಜೆಡಿಎಸ್ ಅಧಿಕಾರ ಪಡೆದಿದೆ. ಜೆಡಿಎಸ್ ಬಲ ಕುಗ್ಗಿಸುವ ಪ್ರಯತ್ನ ನಡೆಯುವ ಕಡೆ ಪಕ್ಷೇತರರಿಗೆ ಬೆಂಬಲ ಕೊಡಲಾಗಿದೆ.
ಗ್ರಾ. ಪಂ. ಚುನಾವಣೆಗೆ ಪಕ್ಷವನ್ನು ಸಿದ್ಧಗೊಳಿಸುವ ಸಂಬಂಧ ಸದ್ಯದಲ್ಲೇ ಜಿಲ್ಲಾವಾರು ಮುಖಂಡರ ಸಭೆ ನಡೆಸಲಾಗುವುದು. ರಾಜ್ಯಾಧ್ಯಕ್ಷರ ಜತೆ ಚರ್ಚಿಸಿ ಸಮಿತಿಗಳನ್ನು ರಚಿಸಲಾಗುವುದು. ಪಂಚಾಯತ್ ಚುನಾವಣೆಯು ಪಕ್ಷದ ಬಲವರ್ಧನೆಗೂ ಸಹಕಾರಿಯಾಗಲಿದೆ.
– ಎಚ್.ಡಿ. ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ