Advertisement

ನಿಮ್ಮ ಖಾತೆಯನ್ನೇ ಡಿಲೀಟ್ ಮಾಡಬೇಕು: ತೇಜಸ್ವಿ ಸೂರ್ಯ ಟ್ವೀಟ್ ಗೆ ಜೆಡಿಎಸ್ ತಿರುಗೇಟು

02:13 PM May 13, 2021 | Team Udayavani |

ಬೆಂಗಳೂರು: ರಾಜ್ಯಕ್ಕೆ ಸರಿಯಾದ ಪ್ರಮಾಣದ ಆಕ್ಸಿಜನ್ ನೀಡದೇ ಇರುವ ಕುರಿತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾಡಿದ ಟ್ವೀಟ್ ಗೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು ನೀಡಿದ್ದು, ಇದಕ್ಕೆ ಜೆಡಿಎಸ್ ಮರು ಟ್ವೀಟ್ ಮಾಡಿದೆ.

Advertisement

ಕನ್ನಡಿಗರಿಗೆ ಆಗುತ್ತಿರುವ ತಾರತಮ್ಯವನ್ನು ಪ್ರಶ್ನೆ ಮಾಡಿ ಎಚ್ ಡಿ ಕುಮಾರಸ್ವಾಮಿ ಮಾಡಿದ ಟ್ವೀಟ್‌ಅನ್ನು ಸುಳ್ಳು ಎಂದಿರುವ ಬೆಂ.ದಕ್ಷಿಣದ ಬಿಜೆಪಿ ಸಂಸದರು ಆ ಟ್ವೀಟ್‌ಗಳನ್ನು ಡಿಲಿಟ್‌ ಮಾಡಬೇಕು ಎಂದಿದ್ದಾರೆ. ಸಂಸದರೇ, ಹಾಗೊಂದು ವೇಳೆ ಸುಳ್ಳಿನ ಟ್ವೀಟ್‌ ಡಿಲಿಟ್‌ ಮಾಡುವುದಿದ್ದರೆ ನಿಮ್ಮ ಇಡೀ ಟ್ವಿಟರ್‌ ಖಾತೆಯನ್ನೇ ಡಿಲೀಟ್ ಮಾಡಬೇಕು ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಚುನಾವಣೆಗಳಲ್ಲಿ ನೀವು ಹೇಳಿದ ಸುಳ್ಳುಗಳು, ಕೊಟ್ಟ ಆಶ್ವಾಸನೆ, ಆತ್ಮರತಿ, ಕೋಮು ಭಾವನೆ ಕೆರಳಿಸಲು ನೀವು ಆಡಿದ ಮಾತುಗಳು, ತಿರುಚಿದ ಇತಿಹಾಸಗಳು ಒಂದೇ ಎರಡೇ?  ಬೆಂ. ದಕ್ಷಿಣದ ಬಿಜೆಪಿ ಸಂಸದರೇ, ನಿಮ್ಮ ಇಡೀ ಟ್ವಿಟರ್‌ ಖಾತೆ ಇಂಥ ಸುಳ್ಳುಗಳಿಂದ ತುಂಬಿದೆ. ಹಾಗಾದರೆ ಡಿಲೀಟ್‌ ಆಗಬೇಕಾದ್ದು ನಿಮ್ಮ ಟ್ವೀಟ್‌ಗಳೋ ಕುಮಾರಸ್ವಾಮಿ ಅವರದ್ದೋ ಎಂದು ಟ್ವೀಟ್ ಮಾಡಿದೆ.

ಇದನ್ನೂ ಓದಿ:ನಿಮ್ಮ ಈ ವ್ಯವಸ್ಥೆ ಯಡಿಯೂರಪ್ಪರನ್ನು ಖಳನಾಯಕರಾಗಿಸಲೋ? ಕೇಂದ್ರದ ವಿರುದ್ಧ ಕುಮಾರಸ್ವಾಮಿ ಕಿಡಿ

ಬೆಡ್‌ ಬ್ಲಾಕಿಂಗ್‌ ದಂಧೆಯನ್ನು ಬಯಲಿಗೆಳೆದ ನಾಟಕವಾಡುವಾಗ ನೀವು ಅಪರಾಧಿಯನ್ನೇ ಪಕ್ಕದಲ್ಲಿ ಇಟ್ಟುಕೊಂಡಿರಲಿಲ್ಲವೇ? ಪಟ್ಟಿಯಲ್ಲಿರುವ ಸಿಬ್ಬಂದಿಯ ಹೆಸರುಗಳನ್ನು ಮರೆ ಮಾಚಿ ಮಾತನಾಡಲಿಲ್ಲವೇ? ಅಡಿಗಡಿಗೂ ಸುಳ್ಳು ನುಡಿಯುವ, ಅಪದ್ಧ ಮಾತಾಡುವ ನಿಮ್ಮಿಂದ ಕುಮಾರಸ್ವಾಮಿ ಅವರು ಸತ್ಯ-ಸುಳ್ಳುಗಳ ಪಾಠ ಕಲಿಯಬೇಕೆ ಬೆಂ.ದಕ್ಷಿಣದ ಬಿಜೆಪಿ ಸಂಸದರೇ ಎಂದು ಜೆಡಿಎಸ್ ಪ್ರಶ್ನಿಸಿದೆ.

Advertisement

ಕುಮಾರಸ್ವಾಮಿ ಅವರು ಇಂದು ಮಾಡಿರುವ ಟ್ವೀಟ್‌ಗೆ ವಾರ್ತಾ ಇಲಾಖೆ  ನೀಡಿದ ಮಾಹಿತಿಯೇ ಆಧಾರ. ಅಲ್ಲಿರುವ ಅಂಶಗಳನ್ನು ಬಿಟ್ಟು ಒಂದಿನಿತೂ ಬೇರೆ ಅಂಶಗಳನ್ನು ಕುಮಾರಸ್ವಾಮಿ ಅವರು ಪ್ರಸ್ತಾಪಿಸಿಲ್ಲ. ಅಲ್ಲದೆ, ಇಂದು ನೀವು ನೀಡಿರುವ ಮಾಹಿತಿ ಅಸ್ಪಷ್ಟವಾಗಿದೆ. ನಿಮ್ಮ ಟ್ವೀಟ್‌ನಲ್ಲಿರುವ ಅಂಕಿ ಅಂಶಗಳನ್ನು ಕನ್ನಡಿಗರಿಗೆ ಕನ್ನಡದಲ್ಲಿ ವಿವರಿಸಿ ಹೇಳಿ ಎಂದು ಸವಾಲೆಸೆದಿದೆ.

ಬಿಜೆಪಿಯ ಮರ್ಜಿಯಿಂದ ನೀವೂ ಜನಪ್ರತಿನಿಧಿಯಾಗಿ ಆಯ್ಕೆಯಾಗಿದ್ದು ಗೊತ್ತಿರುವ ವಿಚಾರ. ಪಕ್ಷಕ್ಕೆ ಋಣ ಸಂದಾಯ ಮಾಡುವುದಕ್ಕಾಗಿ ಕನ್ನಡಿಗರನ್ನೇ ಮರೆಯುವುದು ಸರಿಯಲ್ಲ ಸಂಸದರೇ. ನೀವು ಬಿಜೆಪಿ ಸಂಸದರಾಗುವುದಕ್ಕೂ ಮೊದಲು ಕನ್ನಡಿಗ. ಅದನ್ನು ಮರೆಯಬೇಡಿ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಮಾತಾಡಿ. ನಿಜವಾದ ಕನ್ನಡಿಗ ಎನಿಸಿಕೊಳ್ಳಿ ಎಂದು ಜೆಡಿಎಸ್ ಸಂಸದ ತೇಜಸ್ವಿ ಸೂರ್ಯ ಟ್ವೀಟ್ ಗೆ ತಿರುಗೇಟು ನೀಡಿದೆ

Advertisement

Udayavani is now on Telegram. Click here to join our channel and stay updated with the latest news.

Next