Advertisement

ಕೇಂದ್ರ ಸರ್ಕಾರದ ವಿರುದ್ದ ಜೆಡಿಎಸ್‌ ಪ್ರತಿಭಟನೆ

05:17 PM Apr 02, 2022 | Shwetha M |

ಸಿಂದಗಿ: ಪೆಟ್ರೋಲ್‌, ಡೀಸೆಲ್‌, ಅಡಿಗೆ ಅನಿಲ ಮತ್ತು ದಿನನಿತ್ಯ ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಶುಕ್ರವಾರ ತಾಲೂಕು ಜೆಡಿಎಸ್‌ ಘಟಕದ ವತಿಯಿಂದ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್‌ ನಿಂಗಣ್ಣ ಬಿರಾದಾರ ಅವರಿಗೆ ಮನವಿ ಸಲ್ಲಿಸಲಾಯಿತು.

Advertisement

ಪ್ರತಿಭಟನೆ ನೇತೃತ್ವ ವಹಿಸಿದ್ದ ಜೆಡಿಎಸ್‌ ಮುಖಂಡ ಎಂ.ಎನ್‌. ಪಾಟೀಲ ಮಾತನಾಡಿ, ಕೊರೊನಾ ಬಳಿಕ ಪುನಶ್ಚೇತನದ ಹಾದಿ ತುಳಿದಿರುವ ಸಾಮಾನ್ಯರ ಜೀವನ ಹಾಗೂ ಆರ್ಥಿಕ ಸ್ಥಿತಿಗತಿಯ ಮೇಲೆ ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸೇರಿದಂತೆ ನಿತ್ಯ ಅಗತ್ಯ ಬಳಕೆ ವಸ್ತುಗಳ ಬೆಲೆ ಏರಿಕೆ ಬರೆ ಎಳೆದಂತಾಗಿದೆ. ಗ್ಯಾಸ್‌ ಸಿಲಿಂಡರ್‌, ಅಗತ್ಯ ವಸ್ತುಗಳ ದರ ಹೆಚ್ಚಳದಿಂದ ಜನರು ತತ್ತರಿಸಿ ಹೋಗಿದ್ದಾರೆ. ಜೊತೆಗೆ, ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆಯೂ ಹೆಚ್ಚಾಗಿರುವುದು ಜೀವನ ನಿರ್ವಹಣೆಗೆ ಕಠಿಣ ಸವಾಲು ಹಾಕಿದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇಶದ ಜನತೆಯ ಶೇ. 70 ಭಾಗ ಗ್ರಾಮೀಣ ಹಾಗೂ ಬಡ ವರ್ಗದ ಜನರಿದ್ದಾರೆ. ದುಡಿಯುವ ಬಹುಪಾಲು ಮೊತ್ತ ಮಕ್ಕಳ ವಿದ್ಯಾಭಾಸಕ್ಕೆ ಖರ್ಚಾಗುತ್ತದೆ. ಈ ನಡುವೆ, ಕೊರೊನಾ ಮತ್ತು ಲಾಕ್‌ಡೌನ್‌ ಪರಿಣಾಮ ಜನರನ್ನು ಹಲವು ಕಷ್ಟ ಎದುರಿಸುವಂತೆ ಮಾಡಿದೆ. ಪೆಟ್ರೋಲ್‌ ಬೆಲೆ ಏರಿಕೆ, ದಿನಬಳಕೆ ವಸ್ತುಗಳು ತುಟ್ಟಿಯಾಗಿರುವುದು ಜನಸಾಮಾನ್ಯರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಸರ್ಕಾರಿ ನೌಕರನೂ ಸಂಸಾರ ಸರಿದೂಗಿಸುವುದು ಕಷ್ಟ ಎಂಬಂತಾಗಿದೆ. ಸರ್ಕಾರಕ್ಕೆ ಜನಸಾಮಾನ್ಯನ ಜೀವನ ಕಾಣಿಸುತ್ತಿಲ್ಲ. ಶೀಘ್ರದಲ್ಲಿ ಬೆಲೆ ಇಳಿಕೆ ಮಾಡದಿದ್ದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಜೆಡಿಎಸ್‌ ಪಕ್ಷದ ಮುಖಂಡರಾದ ಗೊಲ್ಲಾಳಪ್ಪಗೌಡ ಪಾಟೀಲ, ಪ್ರಕಾಶ ಹಿರೇಕುರಬರ, ದಾದಾಪೀರ ಅಂಗಡಿ ಗಣಿಹಾರ, ನವಾಬ್‌ ಬಳಗಾನೂರ, ಮಹಿಬೂಬ್‌ ಗಿರಣಿ, ಅಬ್ದುಲ್‌ಗ‌ಪೂರ್‌ ಬಳಗಾನೂರ, ಆಸಿಫ್‌ ಅಂದೆಲಿ, ಮೊಮ್ಮದ್‌ಹುಸೇನ್‌ ಪಟೇಲ್‌, ಗುಲಾಬ್‌ ಜಮಾದಾರ, ಜಾಕಿರ್‌ ತಾಳಿಕೋಟಿ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next