ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಬಗ್ಗೆ ಅತ್ಯಂತ ಕೀಳುಮಟ್ಟದ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ ಹಾಗೂ ಶಾಸಕ ಸಿಟಿ ರವಿ ವಿರುದ್ಧ ಜೆಡಿಎಸ್ ಮುಖಂಡರು, ಕಾರ್ಯಕರ್ತರು ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಬೆಂಗಳೂರಿನ ಮೌರ್ಯ ಹೋಟೆಲ್ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಸಿಟಿ ರವಿ ಪ್ರತಿಕೃತಿ ದಹನ ಮಾಡಿ ಅಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರು ನಮ್ಮ ಪಕ್ಷದ ಸರ್ವೋಚ್ಚ ನಾಯಕರು. ಇಡೀ ರಾಜ್ಯದ ಜನರು ಅಪಾರ ಗೌರವ ಪ್ರೀತಿ ಇಟ್ಟುಕೊಂಡಿರುವ ಮೇರು ನಾಯಕ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರೇ ಅತ್ಯಂತ ಗೌರವದಿಂದ ಕಾಣುವ ನಾಯಕರು ದೇವೇಗೌಡರು. ಅಂತಹವರ ಬಗ್ಗೆ ಸಿಟಿ ರವಿ ಕೀಳಾಗಿ ಮಾತನಾಡುವುದು ಖಂಡನೀಯ ಎಂದು ರಮೇಶ್ ಗೌಡ ಅವರು ಕಿಡಿಕಾರಿದರು.
ದೇಶದ ಪ್ರಧಾನಿ ಹುದ್ದೆ ಅಲಂಕರಿಸಿದ್ದ ಏಕೈಕ ಕನ್ನಡಿಗರು ದೇವೇಗೌಡರು. ಅವರನ್ನು ಅಪಮಾನಿಸುವುದು ಎಂದರೆ ಸಮಸ್ತ ಕನ್ನಡಿಗರನ್ನು ಅಪಮಾನಿಸುವುದೇ ಆಗಿದೆ ಎಂದ ಅವರು, ಸಿಟಿ ರವಿ ಬೇಷರತ್ತಾಗಿ ದೇವೆಗೌಡರ ಕ್ಷಮೆ ಕೇಳಬೇಕು. ಇಲ್ಲವಾದರೆ ಜೆಡಿಎಸ್ ಪಕ್ಷದಿಂದ ಉಗ್ರ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ಕಷ್ಟ ಬಂದಾಗ ಕುಮಾರಸ್ವಾಮಿ ಅವರ ಮುಂದೆ ಕೈಕಟ್ಟಿಕೊಂಡು ನಿಂತಿದ್ದ ವ್ಯಕ್ತಿಯೊಬ್ಬ ಅಧಿಕಾರ ಸಿಕ್ಕ ಕೂಡಲೇ ಆ ಕುಟುಂಬದ ಬಗ್ಗೆ ಕೆಟ್ಟದ್ದಾಗಿ ಮಾತನಾಡುವುದು ಅವರ ಕೊಳಕು ಸಂಸ್ಕಾರವನ್ನು ತೋರಿಸುತ್ತದೆ. ಇನ್ನಾದರೂ ಸಿಟಿ ರವಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ. ಇಲ್ಲವಾದರೆ ತಕ್ಕ ಪಾಠ ಕಳಿಸಲಾಗುವುದು ಎಂದರು.