Advertisement
ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ನೇತೃತ್ವದಲ್ಲಿ ಪಕ್ಷದ ರಾಜ್ಯ ಕಚೇರಿಯಲ್ಲಿ ಬೆಳಗ್ಗೆ 11 ಗಂಟೆಗೆ ಸಭೆ ಆರಂಭವಾಗಲಿದೆ. ಮೊದಲ ಹಂತದಲ್ಲಿ ಟಿಕೆಟ್ ಘೋಷಣೆಯಾದ 92 ಅಭ್ಯರ್ಥಿಗಳು ಡಿಸೆಂಬರ್‌ನಿಂದ ಈವರೆಗೆ ಕ್ಷೇತ್ರದಲ್ಲಿ ಏನು ಮಾಡಿದ್ದಾರೆ, ಪಂಚರತ್ನ ಯಾತ್ರೆಯಲ್ಲಿ ಅವರ ಪಾತ್ರ ಮತ್ತು ಸಕ್ರಿಯತೆ ಹೇಗಿತ್ತು ಮುಂತಾದವುಗಳ ಜತೆಗೆ ಅಭ್ಯರ್ಥಿಗಳಿಗೆ ನೀಡಲಾಗಿದ್ದ ಚುನಾವಣ ಟಾಸ್ಕ್ನ “ರಿಪೋರ್ಟ್ ಕಾರ್ಡ್’ ಅನ್ನೂ ಪರಿಶೀಲಿಸಲಾಗುತ್ತದೆ.
ಎರಡು ಹಂತಗಳ ಪಂಚರತ್ನ ಯಾತ್ರೆ ಮುಗಿದ ಜಿಲ್ಲೆಗಳಲ್ಲಿ ಪಕ್ಷದ ವರ್ಚಸ್ಸು ಮತ್ತು ತಳಹದಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗಬೇಕು, ಈ ವೇಳೆ ಪಕ್ಷಕ್ಕೆ ಸಿಕ್ಕಿರುವ ಬೆಂಬಲವನ್ನು ಚುನಾವಣೆವರೆಗೆ ಹೇಗೆ ಹಿಡಿದಿಟ್ಟುಕೊಳ್ಳಬೇಕು ಹಾಗೂ ಫೆ.8ರಿಂದ ಆರಂಭವಾಗಲಿರುವ ಮೂರನೇ ಹಂತದ ಪಂಚರತ್ನ ಯಾತ್ರೆ ನಡೆಯುವ ಜಿಲ್ಲೆಗಳಲ್ಲಿ ಯಾವ ರೀತಿ ಸಿದ್ಧತೆ ಮಾಡಿಕೊಳ್ಳಲಾಗಿದೆ, ಮಾಡಬೇಕಿರುವ ಕೆಲಸಗಳೇನು ಎಂಬ ಬಗ್ಗೆ ಜಿಲ್ಲಾಧ್ಯಕ್ಷರಿಂದ ಮಾಹಿತಿ ಪಡೆದು ಸೂಚನೆಗಳನ್ನು ನೀಡಲಾಗುವುದು ಎಂದು ಹೇಳಲಾಗಿದೆ.