Advertisement

ಬಜೆಟ್‌ ಅತೃಪ್ತಿಗೆ ಶ್ವೇತ್ರಪತ್ರ ಉತ್ತರ

06:00 AM Jul 16, 2018 | |

ಹುಬ್ಬಳ್ಳಿ: ರಾಜ್ಯದಲ್ಲಿ 1956ರಿಂದ ಇಲ್ಲಿವರೆಗಿನ ಮುಖ್ಯಮಂತ್ರಿಗಳಲ್ಲಿ ಯಾರ ಅವಧಿಯಲ್ಲಿ ಎಷ್ಟು ಹಣ ಉತ್ತರ ಕರ್ನಾಟಕಕ್ಕೆ ಬಿಡುಗಡೆಯಾಗಿದೆ ಎಂಬುದರ ಬಗ್ಗೆ ಶ್ವೇತ್ರಪತ್ರ ಹೊರಡಿಸುವಂತೆ ಕುಮಾರಸ್ವಾಮಿಗೆ ಹೇಳುತ್ತೇನೆ. ಆಗಲಾದರೂ ಸತ್ಯ ಏನೆಂಬುದು ಹೊರಬರಲಿ ಎಂದು ಮಾಜಿ ಪ್ರಧಾನಿ ಎಚ್‌.ಡಿ. ದೇವೇಗೌಡ ಪರೋಕ್ಷವಾಗಿ ಕಾಂಗ್ರೆಸ್‌ ನಾಯಕರಿಗೆ ತಿರುಗೇಟು ನೀಡಿದ್ದಾರೆ.

Advertisement

ಸಮ್ಮಿಶ್ರ ಸರ್ಕಾರದ ಬಜೆಟ್‌ನಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸುವವರು, ಗದಗ ಜಿಲ್ಲೆಗೆ ಎಷ್ಟು ಅನುದಾನ ತಂದಿದ್ದಾರೆ. ಏನು ಅಭಿವೃದ್ಧಿ ಪಡಿಸಿದ್ದಾರೆಂಬುದನ್ನು ಬಹಿರಂಗ ಪಡಿಸಲಿ ಎಂದು ಮಾಜಿ ಸಚಿವ ಎಚ್‌.ಕೆ. ಪಾಟೀಲ ಹೆಸರು ಹೇಳದೆ ಟೀಕಿಸಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಲ್ಲಿವರೆಗೆ ಎಷ್ಟು ಜನ ಲಿಂಗಾಯತ ಮುಖ್ಯಮಂತ್ರಿಗಳಾಗಿದ್ದಾರೆ, ಎಷ್ಟು ಜನ ಒಕ್ಕಲಿಗರು, ಇತರೆ ಸಮಾಜದವರು ಎಷ್ಟು ಜನ ಮುಖ್ಯಮಂತ್ರಿಯಾಗಿದ್ದಾರೆ. ಯಾರ ಅವಧಿಯಲ್ಲಿ ಉತ್ತರ ಕರ್ನಾಟಕಕ್ಕೆ ಎಷ್ಟು ಅನುದಾನ ನೀಡಲಾಗಿದೆ ಎಂಬುದು ಹಾಗೂ ನಂಜುಂಡಪ್ಪ ವರದಿ ಸೇರಿ ವಿಧಾನಮಂಡಲದಲ್ಲಿ 2-3 ದಿನ ಚರ್ಚೆ ನಡೆಸುವಂತೆಯೂ ಮುಖ್ಯಮಂತ್ರಿ ಕುಮಾರಸ್ವಾಮಿಗೆ ತಿಳಿಸುವೆ ಎಂದರು.

ನಾನೂ ಉತ್ತರ ಕರ್ನಾಟಕ ಹಾಗೂ ಲಿಂಗಾಯತ ವಿರೋಧಿ ಎಂದು ವ್ಯವಸ್ಥಿತ ಅಪಪ್ರಚಾರ ಮಾಡಲಾಗಿದೆ. ಸುಮಾರು 25 ವರ್ಷಗಳವರೆಗೆ ನಿಜಲಿಂಗಪ್ಪ, ವೀರೇಂದ್ರ ಪಾಟೀಲ, ಎಸ್‌.ಆರ್‌. ಬೊಮ್ಮಾಯಿ, ಜೆ.ಎಚ್‌. ಪಟೇಲ್‌, ಜಗದೀಶ ಶೆಟ್ಟರ್‌ ಸೇರಿ ಅನೇಕ ಲಿಂಗಾಯತ ನಾಯಕರು ಮುಖ್ಯಮಂತ್ರಿ ಆಗಿದ್ದಾರೆ. ಎಸ್‌.ಎಂ. ಕೃಷ್ಣ ಐದು ವರ್ಷ ಮುಖ್ಯಮಂತ್ರಿ ಆಗಿದ್ದು ಬಿಟ್ಟರೆ ನಾನು 16 ತಿಂಗಳು, ನನ್ನ ಮಗ ಕುಮಾರಸ್ವಾಮಿ 20 ತಿಂಗಳು ಸೇರಿ ಕೆಲವೇ ಕೆಲವರು ಮುಖ್ಯಮಂತ್ರಿಯಾದ ಒಕ್ಕಲಿಗರು. ಅಲ್ಲದೆ ಡಿ. ದೇವರಾಜ ಅರಸು, ರಾಮಕೃಷ್ಣ ಹೆಗಡೆ, ಧರ ಸಿಂಗ್‌, ಸಿದ್ದರಾಮಯ್ಯ ಇತರೆ ಸಮಾಜದವರು ಮುಖ್ಯಮಂತ್ರಿಯಾಗಿದ್ದಾರೆ. ಯಾರ ಅವಧಿಯಲ್ಲಿ ಎಷ್ಟು ಅನುದಾನವನ್ನು ಉತ್ತರ ಕರ್ನಾಟಕಕ್ಕೆ ಕೊಡಲಾಗಿದೆ ಎಂಬ ಸತ್ಯ ಹೊರಬರಲಿ. ಆಗಲಾದರೂ ನನ್ನ ಮೇಲಿನ ಕಳಂಕ ತಪ್ಪಬಹುದು ಎಂದರು.

ಲೋಕಸಭೆ ಚುನಾವಣೆಗೆ ರಾಜ್ಯದಲ್ಲಿ ಕಾಂಗ್ರೆಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲಾಗುವುದು. ಆದರೆ, ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಮೈತ್ರಿ ಸಾಧ್ಯವಾಗಲಿಕ್ಕಿಲ್ಲ. ರಾಹುಲ್‌ ಗಾಂಧಿಯವರು ಪ್ರಧಾನಿ ಅಭ್ಯರ್ಥಿಯಾಗಲು ನಮ್ಮಿಂದ ಯಾವುದೇ ಆಕ್ಷೇಪವಿಲ್ಲ. ಕಾಂಗ್ರೆಸ್‌ ರಾಷ್ಟ್ರೀಯ ಪಕ್ಷವಾಗಿದ್ದು, ಅದರ ಅಧ್ಯಕ್ಷರು ಪ್ರಧಾನಿ ಅಭ್ಯರ್ಥಿಯಾಗುವುದರಲ್ಲಿ ತಪ್ಪೇನಿದೆ?
– ಎಚ್‌.ಡಿ.ದೇವೇಗೌಡ, ಮಾಜಿ ಪ್ರಧಾನಿ

Advertisement

ಸಿಎಂ ಗ್ರಾಮ ವಾಸ್ತವ್ಯ ಬೇಡ ಎಂದಿದ್ದೇನೆ
ಕುಮಾರಸ್ವಾಮಿ ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಗ್ರಾಮ ವಾಸ್ತವ್ಯ ಮಾಡಿದ್ದರು. ಆದರೆ, ಈ ಬಾರಿ ಅವರು ಗ್ರಾಮ ವಾಸ್ತವ್ಯ ಮಾಡುವುದಕ್ಕೆ  ಸಾಧ್ಯವಾಗದ ಸ್ಥಿತಿ ಇದೆ. ಸಮ್ಮಿಶ್ರ ಸರಕಾರದಲ್ಲಿ ಆಡಳಿತ ಸರಿದೂಗಿಸುವುದು, ರೈತರ ಸಾಲ ಮನ್ನಾದಿಂದಾಗಿ ಆರ್ಥಿಕತೆ ಸರಿದೂಗಿಸುವುದು ಹಾಗೂ ಇದೇ ಮೊದಲ ಬಾರಿಗೆ ವಿಪಕ್ಷ 104 ಸ್ಥಾನ ಗಳಿಸಿ ಪ್ರಬಲವಾಗಿದ್ದು, ಅದನ್ನು ಎದುರಿಸಬೇಕಾಗಿರುವುದರಿಂದ ಗ್ರಾಮ ವಾಸ್ತವ್ಯಕ್ಕೆ ಮುಂದಾಗುವುದು ಬೇಡ ಎಂದು ಸಲಹೆ ನೀಡಿದ್ದೇನೆ ಎಂದು ದೇವೇಗೌಡ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next