ಬೆಂಗಳೂರು: ಕಾಂಗ್ರೆಸ್ ಪಟ್ಟಿ ಬಿಡುಗಡೆಯಾಗುತ್ತಿದ್ದಂತೆ ಪ್ರತಿಪಕ್ಷ ಜೆಡಿಎಸ್ ತನ್ನ ಅಭ್ಯರ್ಥಿಗಳ ಎರಡನೇ ಪಟ್ಟಿ ಸಿದ್ಧಪಡಿಸುವ ಕಾರ್ಯಕ್ಕೆ ಚಾಲನೆ ನೀಡಲು ನಿರ್ಧರಿಸಿದ್ದು, ಬಿಜೆಪಿಯ ಎರಡನೇ ಪಟ್ಟಿ ಹೊರಬೀಳುತ್ತಿದ್ದಂತೆ ಪಟ್ಟಿ ಅಂತಿಮಗೊಳಿಸಲು ಮುಂದಾಗಿದೆ.
ಪಕ್ಷದ ಅಭ್ಯರ್ಥಿಗಳ ಜತೆಗೆ ಕೆಲವು ಕ್ಷೇತ್ರಗಳಲ್ಲಿ ಎರಡೂ ಪಕ್ಷಗಳಲ್ಲಿ ಟಿಕೆಟ್ ಸಿಗದೆ ಅಸಮಾಧಾನಗೊಂಡವರನ್ನು ಪಕ್ಷಕ್ಕೆ ಆಹ್ವಾನಿಸಿ ಜೆಡಿಎಸ್ ಟಿಕೆಟ್ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದ್ದು, ಬಿಜೆಪಿ ಮೊದಲ ಪಟ್ಟಿಯಲ್ಲಿ ಟಿಕೆಟ್ ವಂಚಿತರಾದವರ ಏಳು ಆಕಾಂಕ್ಷಿಗಳ ಜತೆ ಈಗಾಗಲೇ ಸಂಪರ್ಕ ಇಟ್ಟುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಇದೀಗ ಕಾಂಗ್ರೆಸ್ ಪಟ್ಟಿಯಲ್ಲಿ ಟಿಕೆಟ್ ಸಿಗದೆ ನಿರಾಶೆಗೊಂಡಿರುವ 11 ಹಾಲಿ ಶಾಸಕರು ಸೇರಿದಂತೆ ಬೆಂಗಳೂರು ನಗರ ಜಿಲ್ಲೆ ಪುಲಿಕೇಶಿನಗರದ ಪ್ರಸನ್ನ ಕುಮಾರ್, ಸಿ.ವಿ.ರಾಮನ್‌ನಗರದ ಪಿ.ರಮೇಶ್ ಅವರಿಗೆ ಮಣೆ ಹಾಕುವ ಬಗ್ಗೆ ಪಕ್ಷ ಯೋಚಿಸುತ್ತಿದೆ.
ಬಿಜೆಪಿ ಎರಡನೇ ಪಟ್ಟಿ ಬಿಡುಗಡೆಯಾದ ಬಳಿಕ ಎರಡೂ ಪಕ್ಷದಲ್ಲಿ ಟಿಕೆಟ್ ವಂಚಿತ ಆಕಾಂಕ್ಷಿಗಳನ್ನು ಸಂಪರ್ಕಿಸಿ ನಂತರ ಜೆಡಿಎಸ್ ತನ್ನ ಎರಡನೇ ಪಟ್ಟಿ ಅಂತಿಮಗೊಳಿಸಲಿದೆ. ಜತೆಗೆ ಈಗಾಗಲೇ ಬಿಡುಗಡೆ ಮಾಡಿರುವ 125 ಮಂದಿಯ ಮೊದಲ ಪಟ್ಟಿಯಲ್ಲಿ ಕೆಲವೊಂದು ಮಾರ್ಪಾಟುಗಳನ್ನು ಮಾಡಲಿದೆ ಎಂದು ಮೂಲಗಳು ಹೇಳಿವೆ.
ಏ.17ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, 24ರಂದು ನಾಮಪತ್ರ ಸಲ್ಲಿಸಲು ಅಂತಿಮ ದಿನ. ಹೀಗಾಗಿ ಏ.20ರ ವೇಳೆಗೆ ಜೆಡಿಎಸ್ ತನ್ನ ಎರಡನೇ ಪಟ್ಟಿ ಬಿಡುಗಡೆ ಮಾಡಲಿದೆ ಎಂದು ತಿಳಿದು ಬಂದಿದೆ. ಒಟ್ಟು 224 ಕ್ಷೇತ್ರಗಳ ಪೈಕಿ 20 ಕ್ಷೇತ್ರಗಳನ್ನು ಬಿಎಸ್‌ಪಿಗೆ ಬಿಟ್ಟುಕೊಟ್ಟಿರುವ ಜೆಡಿಎಸ್ ಈಗಾಗಲೇ ಪ್ರಕಟಿಸಿರುವ 125 ಕ್ಷೇತ್ರಗಳನ್ನು ಹೊರತುಪಡಿಸಿ ಇನ್ನುಳಿದ 99 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಬೇಕಿದೆ.