ಹಾಸನ/ಹೊಳೆನರಸೀಪುರ: ಮುಂಬರುವ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರಕ್ಕೆ ಹಾಲಿ ಸಂಸದ ಪ್ರಜ್ವಲ್ ರೇವಣ್ಣ ಅವರೇ ಜೆಡಿಎಸ್ ಅಭ್ಯರ್ಥಿ ಎಂದು ಪಕ್ಷದ ವರಿಷ್ಠ, ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಘೋಷಣೆ ಮಾಡಿದರು.
ಹೊಳೆನರಸೀಪುರ ತಾಲೂಕು ಶ್ರೀ ರಾಮದೇವರ ಕಟ್ಟೆಯ ಬಳಿ ಶುಕ್ರವಾರ ನಡೆದ ಜಿಲ್ಲೆಯ ಜೆಡಿಎಸ್ ಶಾಸಕರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ, ಪ್ರಜ್ವಲ್ ರೇವಣ್ಣ ಅವರೇ 2024ರ ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದ ಅಭ್ಯರ್ಥಿ ಎಂದು ದೇವೇಗೌಡರು ಪ್ರಕಟಿಸಿ ಈ ಬಗೆಗಿನ ಗೊಂದಲಗಳಿಗೆ ತೆರೆ ಎಳೆದರು.
ರಾಜ್ಯಸಭಾ ಸದಸ್ಯನಾಗಿರುವ ನನ್ನ ಅಧಿಕಾರಾವಧಿ ಇನ್ನೂ ಎರಡೂವರೆ ವರ್ಷ ಇದೆ. ಹಾಗಾಗಿ ನಾನು 2024ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ. ಹಾಸನ ಕ್ಷೇತ್ರವನ್ನು ಪ್ರಜ್ವಲ್‌ಗೆ ಬಿಟ್ಟುಕೊಡುವೆ. ಹಿಂದಿನ ಚುನಾವಣೆಯಲ್ಲಿ ಪ್ರಜ್ವಲ್ ಒಂದೂವರೆ ಲಕ್ಷದಿಂದ ಗೆಲುವು ಸಾಧಿಸಿದ್ದರು. ಈ ಬಾರಿಯೂ ಅವರು ಗೆಲ್ಲಬೇಕು. ಎಚ್.ಡಿ.ಕುಮಾರಸ್ವಾಮಿ ಅವರೂ ಜಿಲ್ಲೆಯಲ್ಲಿ ಪ್ರಚಾರ ಮಾಡುವರು. ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಅವೆಲ್ಲವನ್ನೂ ಮರೆತು ಪ್ರಜ್ವಲ್ ಅವರನ್ನು ಗೆಲ್ಲಿಸೋಣ ಎಂದರು.
ಲೋಕಸಭಾ ಚುನಾವಣೆಯ ಕ್ಷೇತ್ರಗಳ ಹಂಚಿಕೆ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಪ್ರಧಾನಿ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಜತೆ ಸಮಾಲೋಚನೆ ನಡೆಸಲಿದ್ದಾರೆ. ರಾಜ್ಯದಲ್ಲೂ ಮಾಜಿ ಸಿಎಂ ಯಡಿಯೂರಪ್ಪ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ವಿಪಕ್ಷ ನಾಯಕ ಅಶೋಕ್ ಜತೆಗೆ ಚರ್ಚಿಸಿದ ಬಳಿಕ ಕ್ಷೇತ್ರಗಳ ಹಂಚಿಕೆ ಅಂತಿಮ ತೀರ್ಮಾನವಾಗಲಿದೆ.
-ಎಚ್.ಡಿ.ದೇವೇಗೌಡ, ಜೆಡಿಎಸ್ ವರಿಷ್ಠ