Advertisement

ಸಿಎಂ ತವರಲ್ಲಿ ಜೆಡಿಎಸ್‌ ಶಕ್ತಿ ಪ್ರದರ್ಶನ

12:33 PM Nov 07, 2017 | Team Udayavani |

ಬೆಂಗಳೂರು: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತರುವ ಗುರಿಯೊಂದಿಗೆ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರ “ಕರ್ನಾಟಕ ವಿಕಾಸ ವಾಹಿನಿ’ಯಾತ್ರೆಗೆ ಮಂಗಳವಾರ ಚಾಲನೆ ದೊರೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸ್ಪರ್ಧೆ ಮಾಡಲಿದ್ದಾರೆಂದು ಹೇಳಲಾಗುತ್ತಿರುವ ಚಾಮುಂಡೇಶ್ವರಿ ವಿಧಾನಸಭೆ ಕ್ಷೇತ್ರದಲ್ಲಿ ಬೃಹತ್‌ ಸಮಾವೇಶದ ಮೂಲಕವೇ ಈ ಯಾತ್ರೆ ಪ್ರಾರಂಭವಾಗುತ್ತಿರುವುದು ವಿಶೇಷ.

Advertisement

ಚಾಮುಂಡಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಮುಖ್ಯಮಂತ್ರಿ ತವರು ಜಿಲ್ಲೆ ಮೈಸೂರಿನಿಂದಲೇ ಚುನಾವಣಾ ರಣಕಹಳೆ ಮೊಳಗಿಸುವ ಮೂಲಕ ಅಖಾಡ ಪ್ರವೇಶ ಮಾಡಲಿದ್ದಾರೆ. ಇತ್ತೀಚೆಗೆ ಸಿದ್ದರಾಮಯ್ಯ ಅವರು ಚಾಮುಂಡೇಶ್ವರಿ ಕ್ಷೇತ್ರದ ಜನ ಎಚ್‌.ಡಿ.ಕುಮಾರಸ್ವಾಮಿಯವರ ಜೇಬಿನಲ್ಲಿಲ್ಲ ಎಂದು ಹೇಳಿರುವುದಕ್ಕೆ ಅದೇ ಕ್ಷೇತಕ್ಕೆ ಹೋಗಿ ರಾಜ್ಯದ ಆರು ಕೋಟಿ ಜನ ಸಿದ್ದರಾಮಯ್ಯ ಜೇಬಿನಲ್ಲಿಲ್ಲ ಎಂದು ತಿರುಗೇಟು ನೀಡಲಿದ್ದಾರೆ ಎಂದು ಹೇಳಲಾಗಿದೆ.

ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಆಯೋಜಿಸಿರುವ ಸಮಾವೇಶ ಜೆಡಿಎಸ್‌ನ ಶಕ್ತಿ ಪ್ರದರ್ಶನವೂ ಆಗಿರುವುದರಿಂದ ಮಾಜಿ ಸಚಿವರಾದ ಜಿ.ಟಿ.ದೇವೇಗೌಡ ಹಾಗೂ ಇತ್ತೀಚೆಗಷ್ಟೇ ಪಕ್ಷಕ್ಕೆ ಸೇರ್ಪಡೆಯಾಗಿರುವ ಎಚ್‌.ವಿಶ್ವನಾಥ್‌ ಸಮಾವೇಶದ ಉಸ್ತುವಾರಿ ವಹಿಸಿದ್ದಾರೆ.

ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಹಾಗೂ ಜನತಾಪರಿವಾರದ ಮುಖಂಡ ಪಿ.ಜಿ.ಆರ್‌.ಸಿಂಧ್ಯಾ ಸಹ ಸಮಾವೇಶದಲ್ಲಿ ಭಾಗಿಯಾಗುವ ಸಾಧ್ಯತೆಯಿದೆ.
ಮೊದಲ ಹಂತದಲ್ಲಿ ಮೂರು ದಿನಗಳ ಕಾಲ ವಿಕಾಸವಾಹಿನಿ ಯಾತ್ರೆ ನಡೆಸಲಿರುವ ಕುಮಾರಸ್ವಾಮಿ, ಚಾಮುಂಡೇಶ್ವರಿ ಕ್ಷೇತ್ರದ ಸಮಾವೇಶದ ನಂತರ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಸಮಾವೇಶ ನಡೆಸಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ. ಚಿಕ್ಕಮಗಳೂರಿನಲ್ಲಿ ದಲಿತರ ಮನೆಯಲ್ಲಿ ಗ್ರಾಮವಾಸ್ತವ್ಯ ಹೂಡುವುದು ವಿಶೇಷ.

ರಾಜ್ಯ ವಿಧಾನಮಂಡಲ ಅಧಿವೇಶನದ ಹಿನ್ನೆಲೆಯಲ್ಲಿ ಮೊದಲ ಹಂತದ ಯಾತ್ರೆ ನಂತರ ಸ್ವಲ್ಪ ವಿರಾಮ ನೀಡಿ ನವೆಂಬರ್‌ 14 ರಂದು ಬೆಳಗಾವಿಯಲ್ಲಿ ರೈತ ಸಮಾವೇಶ ನಡೆಸಿ ಅಧಿವೇಶನ ಮುಗಿದ ನಂತರ ಉತ್ತರ ಕರ್ನಾಟಕ ಭಾಗದ 50 ವಿಧಾನಸಭೆ ಕ್ಷೇತ್ರಗಳಲ್ಲಿ ಎರಡನೇ ಹಂತದ ವಿಕಾಸ ವಾಹಿನಿ ಯಾತ್ರೆ ಮುಂದುವರಿಸಲಿದ್ದಾರೆ. ಜತೆಗೆ ಗ್ರಾಮವಾಸ್ತವ್ಯ ಸಹ ನಡೆಸಲಿದ್ದಾರೆ.

Advertisement

ಯಾತ್ರೆಗೆ ಮುನ್ನಾದಿನ ಸೋಮವಾರ ಹುಟ್ಟೂರು ಹಾಸನ ಜಿಲ್ಲೆ ಹೊಳೇನರಸೀಪುರದ ಹರದನಹಳ್ಳಿಯಲ್ಲಿ ಮನೆ ದೇವರಿಗೆ ಪೂಜೆ ಸಲ್ಲಿಸಿದ ಕುಮಾರಸ್ವಾಮಿ ನಂತರ ನಂಜನಗೂಡು ದೇವಾಲಯಕ್ಕೆ ಭೇಟಿ ನೀಡಿ ದರ್ಶನ ಪಡೆದರು. 

Advertisement

Udayavani is now on Telegram. Click here to join our channel and stay updated with the latest news.

Next