ಚಳ್ಳಕೆರೆ: ನಗರಸಭಾ ಚುನಾವಣೆಯಲ್ಲಿ 26 ಸ್ಥಾನಗಳಲ್ಲಿ ಮಾತ್ರ ಜೆಡಿಎಸ್ ಸ್ಪ ರ್ಧಿಸಿತ್ತು. ಅದರಲ್ಲಿ 10 ಸ್ಥಾನಗಳಲ್ಲಿ
ಜಯ ಗಳಿಸಲು ಸಾಧ್ಯವಾಗಿದೆ. ಮೂರ್‍ನಾಲ್ಕು ಸ್ಥಾನಗಳಲ್ಲಿ ಅಲ್ಪ ಮತದಿಂದ ಸೋಲು ಅನುಭವಿಸಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಪಿ. ತಿಪ್ಪೇಸ್ವಾಮಿ ತಿಳಿಸಿದರು.
ಇಲ್ಲಿನ ಜೆಡಿಎಸ್ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್, ಬಿಜೆಪಿ, ಪಕ್ಷೇತರ ಹಾಗೂ ಕಾಂಗ್ರೆಸ್ ಸದಸ್ಯರೊಂದಿಗೆ ಸಂಪರ್ಕ ಹೊಂದಿದ್ದೇವೆ. ಸಾಧ್ಯವಾದಲ್ಲಿ ನಗರಸಭೆಯ ಚುಕ್ಕಾಣಿ ಹಿಡಿಯಲು ಪ್ರಯತ್ನ ಮಾಡಲಾಗುವುದು ಎಂದರು.
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕೀಯ ಪಕ್ಷಗಳು ಮತದಾರರಿಗೆ ಹಲವಾರು ರೀತಿಯ ಆಮಿಷಗಳನ್ನು ಒಡ್ಡುತ್ತವೆ. ಈ ಚುನಾವಣೆಯಲ್ಲಿ ಹೆಚ್ಚು ಸ್ಥಾನ ಗಳಿಸದಂತೆ ಜೆಡಿಎಸ್ ಪಕ್ಷವನ್ನು ನಿಯಂತ್ರಿಸಲು ವಿರೋಧ ಪಕ್ಷಗಳು ಹೆಚ್ಚಿನ ಪ್ರಮಾಣದ ಹಣವನ್ನು ಹಾಗೂ ಇತರೆ ಆಮಿಷವನ್ನು ಮತದಾರರಿಗೆ ಒಡ್ಡಿದ್ದಾರೆ. ಆದಾಗ್ಯೂ ನಗರದ ಮತದಾರರು ಜೆಡಿಎಸ್‌ಗೆ 10 ಸ್ಥಾನಗಳಲ್ಲಿ ಜಯ ತಂದುಕೊಟ್ಟಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.
ವಿಜೇತ ಅಭ್ಯರ್ಥಿಗಳ ಪರವಾಗಿ ಮಾತನಾಡಿದ ಕೆ.ಸಿ. ನಾಗರಾಜು, ನಾನು ಇದೇ ಮೊದಲ ಬಾರಿಗೆ ರಾಜಕೀಯ ಕ್ಷೇತ್ರ ಪ್ರವೇಶಿಸಿದ್ದೇನೆ. ಜೆಡಿಎಸ್ ಪಕ್ಷ ನನಗೆ ಸ್ಪರ್ಧಿಸಲು ಅವಕಾಶ ನೀಡಿತು. ಪ್ರಚಾರ ಸೇರಿದಂತೆ ಎಲ್ಲಾ ರೀತಿಯ ಸಹಕಾರ ಪಕ್ಷದ ಮುಖಂಡರಿಂದ ದೊರೆಯಿತು. ಪಕ್ಷದ ಎಲ್ಲ 10 ಸದಸ್ಯರು ಸದಾ ಕಾಲ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸುತ್ತೇವೆ ಎಂದರು.
ಹಿರಿಯ ಮುಖಂಡ ಎಚ್. ಆನಂದಪ್ಪ ಮಾತನಾಡಿ, ನಗರಸಭೆ ಚುನಾವಣೆಯಲ್ಲಿ ಜಯ ಸಾಧಿಸಲು ಕ್ಷೇತ್ರದ ಶಾಸಕರು ಹಣದ ಹೊಳೆಯನ್ನೇ ಹರಿಸಿದ್ದಾರೆ. ಇದು ಜೆಡಿಎಸ್ ಅಭ್ಯರ್ಥಿಗಳ ಗೆಲುವಿಗೆ ತೊಡಕಾಯಿತು. ಪ್ರಾಮಾಣಿಕವಾಗಿ ಚುನಾವಣೆ ನಡೆದಿದ್ದಲ್ಲಿ ಜೆಡಿಎಸ್ ಕನಿಷ್ಠ ಪಕ್ಷ 15 ಸ್ಥಾನಗಳಲ್ಲಿ ಜಯ ಗಳಿಸುತ್ತಿತ್ತು. ಆದರೆ ಮತದಾರರ ತೀರ್ಪು ನಮಗೆ ಅಂತಿಮವಾಗಿದ್ದು, ನಗರಸಭೆಯಲ್ಲಿ ಎಲ್ಲಾ ಸದಸ್ಯರು ಸಂಘಟನಾತ್ಮಕವಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ನಗರಸಭೆ ನೂತನ ಸದಸ್ಯರಾದ ಸಿ. ಶ್ರೀನಿವಾಸ್, ತಿಪ್ಪಕ್ಕ, ಎಚ್. ಪ್ರಶಾಂತ್‌ಕುಮಾರ್, ನಾಗವೇಣಮ್ಮ,
ಕವಿತಾ ನಾಯಕಿ, ನಿರ್ಮಲ, ವಿಶುಕುಮಾರ್, ವಿ.ವೈ. ಪ್ರಮೋದ್ ಇದ್ದರು.