ಬೆಂಗಳೂರು: ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಬಿರುಸಿನ ಪ್ರಚಾರ ಆರಂಭಿಸಿದ್ದರೂ ಜೆಡಿಎಸ್ ಮಾತ್ರ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ಇನ್ನೂ ಡೋಲಾಯಮಾನ ಸ್ಥಿತಿಯಲ್ಲಿದೆ.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಬೇಡವೆಂಬ ಚಿಂತನೆಯಲ್ಲಿದ್ದರೆ, ಸ್ಥಳೀಯ ಕಾರ್ಯಕರ್ತರು ಸ್ಪರ್ಧೆಗೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಏನು ಮಾಡಬೇಕೆಂಬ ಗೊಂದಲದಲ್ಲಿ ಜೆಡಿಎಸ್ ಮುಖಂಡರು ಇದ್ದಾರೆಂದು ಮೂಲಗಳು ತಿಳಿಸಿವೆ.
ನಂಜನಗೂಡು ಮತ್ತು ಗುಂಡ್ಲುಪೇಟೆ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯುತ್ತಿರುವುದು ಒಂದು ವರ್ಷದ ಅವಧಿಗಷ್ಟೇ. ಈ ಒಂದು ವರ್ಷದಲ್ಲಿ ದೊಡ್ಡಮಟ್ಟದ ರಾಜಕೀಯ ಧ್ರುವೀಕರಣವಾಗಿ ಪಕ್ಷಕ್ಕೆ ಭಾರಿ ಪ್ರಮಾಣದ ಲಾಭ ಆಗುವಂತಹದ್ದೇನೂ ಇಲ್ಲ. ಅಲ್ಲದೆ, ಮಹದೇವಪ್ರಸಾದ್ ಮೂಲತಃ ಜನತಾ ಪರಿವಾರದವರು. ಅವರ ಅಕಾಲಿಕ ನಿಧನದಿಂದ ತೆರವಾದ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಕಣಕ್ಕಿಳಿದಿರುವ ಅವರ ಪತ್ನಿಯ ಪರ ಅನುಕಂಪ ಇರುತ್ತದೆ.
ಇನ್ನೊಂದೆಡೆ, ನಂಜನಗೂಡಿನಲ್ಲಿ ಕಳಲೆ ಕೇಶವಮೂರ್ತಿ ಅವರನ್ನು ಅಭ್ಯರ್ಥಿ ಎಂದು ಹಿಂದೆ ನಿರ್ಧರಿಸಲಾಗಿತ್ತಾದರೂ ಅವರು ಕಾಂಗ್ರೆಸ್ ಸೇರಿ ಸ್ಪರ್ಧೆಗಿಳಿದಿದ್ದಾರೆ. ಹೀಗಾಗಿ ಆ ಕ್ಷೇತ್ರಕ್ಕೆ ಹೊಸಬರನ್ನು ಹುಡುಕುವುದರ ಜತೆಗೆ ಚುನಾವಣೆಗೆ “ಸಂಪನ್ಮೂಲ’ ಕ್ರೋಡೀಕರಿಸಬೇಕಾಗುತ್ತದೆ.
ಅಲ್ಲದೆ, ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ದೊಡ್ಡಮಟ್ಟದ ಜಿದ್ದಾಜಿದ್ದಿಗೆ ಇಳಿದಿವೆ. ಇಂತಹ ಸಂದರ್ಭದಲ್ಲಿ ಜೆಡಿಎಸ್ ನಿಂದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ, ಒಂದು ವೇಳೆ ಪಕ್ಷದ ಅಭ್ಯರ್ಥಿಗಳು ತೀರಾ ಕಡಿಮೆ ಮತಗಳನ್ನು ಪಡೆದುಕೊಂಡರೆ ಕ್ಷೇತ್ರಗಳಲ್ಲಿ ಜೆಡಿಎಸ್‌ಗೆ ನೆಲೆ ಇಲ್ಲವೆಂಬ ಸಂದೇಶ ಹೋಗುತ್ತದೆ. ಇದು ಮುಂದಿನ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಬಹುದು. ಆದ್ದರಿಂದ ಒಂದು ವರ್ಷಕ್ಕಾಗಿ ಇಷ್ಟೊಂದು ತಾಕಲಾಟವೇಕೆ ಎಂಬ ಅಭಿಪ್ರಾಯಕ್ಕೆ ದೇವೇಗೌಡ ಮತ್ತು ಕುಮಾರಸ್ವಾಮಿ ಬಂದಿದ್ದಾರೆ ಎನ್ನಲಾಗಿದೆ.
ಆದರೆ, ಸ್ಥಳೀಯ ಮಟ್ಟದಲ್ಲಿ ಪಕ್ಷದ ವರ್ಚಸ್ಸು ಮತ್ತು ಅಸ್ತಿತ್ವ ಉಳಿಸಿಕೊಳ್ಳಲು ಸ್ಪರ್ಧೆ ಅನಿವಾರ್ಯ. ಉಪಚುನಾವಣೆ ಫಲಿತಾಂಶ ನಮಗೆ ಮುಖ್ಯವಲ್ಲ. ಮುಂದಿನ ಚುನಾವಣೆಗೆ ಈ ಕ್ಷೇತ್ರಗಳಲ್ಲಿ ಪಕ್ಷಕ್ಕೆ ಒಂದು ನೆಲೆ ಬೇಕು. ಅದಕ್ಕಾದರೂ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಬೇಕು ಎನ್ನುವುದು ಸ್ಥಳೀಯ ಕಾರ್ಯಕರ್ತರ ಒತ್ತಾಯವಾಗಿದೆ.
15ಕ್ಕೆ ತೀರ್ಮಾನ: ಎಲ್ಲ ಗೊಂದಲಗಳಿಗೆ ಮಾ.15 ರಂದು ನಡೆಯಲಿರುವ ಜೆಡಿಎಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ತೆರೆ ಬೀಳಲಿದೆ. ಬಜೆಟ್ ಅಧಿವೇಶನದ ಹಿನ್ನೆಲೆಯಲ್ಲಿ ಮಾ. 15ರಂದು ಶಾಸಕಾಂಗ ಪಕ್ಷದ ಸಭೆ ಕರೆಯಲಾಗಿದ್ದು, ಅಲ್ಲಿ ಈ ವಿಚಾರದ ಬಗ್ಗೆ ಚರ್ಚಿಸಿ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಈ ವಿಚಾರದಲ್ಲಿ ಏಕಪಕ್ಷೀಯ ನಿರ್ಧಾರ ಬೇಡ. ಚುನಾವಣೆಗೆ ಪಕ್ಷ ಸ್ಪರ್ಧಿಸಬೇಕು ಎಂದಾದರೆ ಸರ್ವಾನುಮತದ ತೀರ್ಮಾನವಾಗಬೇಕು ಎಂಬುದು ಜೆಡಿಎಸ್
ವರಿಷ್ಠ ದೇವೇಗೌಡರ ಅಭಿಪ್ರಾಯವಾಗಿದೆ ಎಂದು ಹೇಳಲಾಗಿದೆ.