Advertisement
ಹೋದಲೆಲ್ಲ ಅದ್ಧೂರಿ ಜನಸಂದಣಿ ಇದಕ್ಕೆ ಪುಷ್ಟಿ ನೀಡುತ್ತಿದೆ. ಜೆಡಿ ಎಸ್ ಕಾರ್ಯಕರ್ತರು, ನಾಯಕರು ಮತ್ತು ಟಿಕೆಟ್ ಆಕಾಂಕ್ಷಿಗಳಲ್ಲಿ ಸಹಜವಾಗಿಯೇ ಉತ್ಸಾಹ ಹೆಚ್ಚಿದೆ. ಪಂಚ ರತ್ನ ರಥಯಾತ್ರೆ ಬೆನ್ನಲ್ಲೇ ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಿ ಬಹುಮತ ಪಡೆಯುವ ಉತ್ಸಾಹದಲ್ಲಿರುವ ಕುಮಾರ ಪಡೆ ಸದ್ಯಕ್ಕೆ 93 ಕ್ಷೇತ್ರದ ಅಭ್ಯರ್ಥಿಗಳ ಅಧಿಕೃತ ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್ ಭದ್ರಕೋಟೆ ಎಂದೇ ಕರೆಸಿಕೊಳ್ಳುವ ರಾಮನಗರ ಜಿಲ್ಲೆಯಲ್ಲಿ ಸದ್ಯದ ಮಟ್ಟಿಗೆ ಮೂರು ಕ್ಷೇತ್ರಗಳಲ್ಲಿ ಜೆಡಿಎಸ್ ಶಾಸಕರಿದ್ದಾರೆ. ಅಲ್ಲದೆ ಈ ಮೂರು ಕ್ಷೇತ್ರಗಳಿಗೆ ಮೊದಲ ಪಟ್ಟಿಯಲ್ಲೇ ಹೆಸರು ಘೋಷಣೆ ಮಾಡುವ ಮೂಲಕ ತಮ್ಮ ಪತ್ನಿ ಅನಿತಾ ಕುಮಾರಸ್ವಾಮಿ ಅವರಿಗೆ ರೆಸ್ಟ್ ನೀಡಿದ್ದು, ಅವರ ಇಚ್ಛೆಯಂತೆ ಮಗ ನಿಖೀಲ್ ಕುಮಾರ ಸ್ವಾಮಿ ಹೆಸರು ಘೋಷಣೆಯಾಗಿದೆ.
Related Articles
Advertisement
ಮುಂದಿನ ಸಿಎಂ ರೇಸ್‌ನಲ್ಲಿರುವ ಡಿ.ಕೆ. ಶಿವಕುಮಾರ್ ಕೂಡ ಜಿಲ್ಲೆಯಲ್ಲಿ ತಮ್ಮ ಪ್ರಾಬಲ್ಯಕ್ಕೆ ರಣತಂತ್ರ ಹೆಣೆಯುತ್ತಿದ್ದು , ಕಾದು ನೋಡುವ ತಂತ್ರಕ್ಕೆ ಎಚ್‌ಡಿಕೆ ಮುಂದಾದ್ರಾ ಎನ್ನುವ ಮಾತುಗಳೂ ಕೇಳಿ ಬರುತ್ತಿವೆ.
ರಾಜಕೀಯ ಏಳಿಗೆಗೆ ಕಲ್ಯಾಣೋತ್ಸವ: ಕಳೆದ ಹಲವು ದಿನಗಳಿಂದ ರಾಜ್ಯದಾದ್ಯಂತ ಪಂಚರತ್ನ ರಥಯಾತ್ರೆ ಮೂಲಕ ಜಿಲ್ಲೆಯಲ್ಲಿ ಶಕ್ತಿ ಪ್ರದರ್ಶನ ಮಾಡಿರುವ ಕುಮಾರ ಸ್ವಾಮಿ, ಆಧ್ಯಾತ್ಮಿಕವಾಗಿ ಹೆಚ್ಚು ಒಲವು ಹೊಂದಿರುವ ಎಚ್‌ಡಿಡಿ ಕುಟುಂಬ ತಮ್ಮ ಮೂರನೇ ತಲೆಮಾರಿಗೆ ನೆಲೆ ದಕ್ಕಿಸಲು ತಿರುಪತಿ ತಿಮ್ಮಪ್ಪನ ಮೊರೆ ಹೊಕ್ಕು, ಮೂಲ ದೇವರನ್ನೇ ಕರೆತಂದು ಶ್ರೀನಿವಾಸ ಪದ್ಮಾವತಿ ಕಲ್ಯಾಣೋತ್ಸವ ಕಾರ್ಯಕ್ರಮದ ಮೂಲಕ ಜನರನ್ನು ಸೆಳೆದು ವಿರೋಧ ಪಕ್ಷಗಳಿಗೆ ಸಂದೇಶದ ಜೊತೆಗೆ ಅಚ್ಚರಿ ಅಭ್ಯರ್ಥಿ ಘೋಷಣೆ ಕೂಡ ಮಾಡಿದ್ದಾರೆ.
ಕುತೂಹಲ ಕೆರಳಿಸಿದ ಕನಕಪುರ: ಒಂದು ಹಂತದಲ್ಲಿ ಜೆಡಿಎಸ್ ಭದ್ರಕೋಟೆಯಾಗಿದ್ದ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ಲಗ್ಗೆಯಿಟ್ಟ ಡಿ.ಕೆ. ಬ್ರದರ್ ಚಾಣಾಕ್ಷ ರಾಜಕಾರ ಣದಲ್ಲಿ ನಿಸ್ಸೀಮರು. ಹಾಗಾಗಿಯೇ ಕಳೆದ ಮೂರು ಚುನಾವಣೆಯಲ್ಲಿ ಸತತವಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಿದ್ದಾರೆ. ಆದರೆ, ಕನಕಪುರದಲ್ಲಿ ಜೆಡಿಎಸ್ ಭದ್ರವಾಗಿದೆ. ಪಕ್ಷದಿಂದ ಯಾರೇ ಅಭ್ಯರ್ಥಿಯಾದರು 45 ರಿಂದ 50 ಸಾವಿರ ಮತಗಳನ್ನು ಸುಲಭವಾಗಿ ಪಡೆಯುತ್ತಾರೆ. ಅದಕ್ಕಾಗಿಯೇ ಕುಮಾರಸ್ವಾಮಿ ರಥಯಾತ್ರೆ ವೇಳೆ ಘಂಟಾಘೋಷವಾಗಿ ಸಮರ್ಥ ಅಭ್ಯರ್ಥಿ ತರುತ್ತೇನೆ ಎಂದು ತೊಡೆ ತಟ್ಟಿದ್ದಾರೆ ಇದು ಕುತೂಹಲಕ್ಕೂ ಕಾರಣವಾಗಿದೆ.
ಉಭಯ ಸಿಎಂ ಅಭ್ಯರ್ಥಿಗಳ ಪ್ರತಿಷ್ಠೆ ಸಮರ: ಹಾವುಮುಂಗುಸಿಯಾಗಿದ್ದವರ ನಡುವೆ ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಉತ್ತಮ ಸ್ನೇಹ ಬೆಳೆದಿತ್ತು. ಸರ್ಕಾರ ಪತನದ ಬಳಿಕ ಮುಸು ಕಿನ ಗುದ್ದಾಟ ಆರಂಭವಾಗಿ ಮತ್ತೆ ವೈಮನಸ್ಯ ತಾರಕಕ್ಕೇರಿದೆ ಎನ್ನುವ ಸ್ಥಿತಿ ನಿರ್ಮಾಣವಾಗಿದೆ. ಇಬ್ಬರೂ ನಾಯಕರು ಸಿಎಂ ಗದ್ದುಗೆ ಮೇಲೆಯೇ ಕಣ್ಣಿಟ್ಟಿದ್ದಾರೆ. ಆದರೂ, ಇಬ್ಬರ ಗೆಲುವು ಕೂಡ ನಿರೀಕ್ಷಿತವಾಗಲೇಬೇಕಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವ ಪಡೆಯಲಿದೆ ಕಾದು ನೋಡಬೇಕಿದೆ. ಕನಕಪುರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆಯಲ್ಲಿ ಎಚ್‌ಡಿಕೆ ಅವರ ನಿರ್ಧಾರದ ಮೇಲೆ ಹಣಾಹಣಿಯ ಪ್ರಶ್ನೆ ಎನ್ನುವ ಮಾತು ಕೇಳಿಬರುತ್ತಿದೆ. ಅದೇನೇ ಆದ್ರೂ ಸಿಎಂ ಗಾದಿ ಮೇಲೆ ಕಣ್ಣಿಟ್ಟಿರುವ ಇಬ್ಬರು ನಾಯಕರಿಗೂ ಈ ಚುನಾವಣೆ ಪ್ರತಿಷ್ಠೆಯೇ ಸರಿ.
ಕನಕಪುರದಲ್ಲಿ ಶುರುವಾಯ್ತಾ ಹೊಂದಾಣಿಕೆ ಲೆಕ್ಕಾಚಾರ?: ಇನ್ನೂ ರಾಜ್ಯದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿರುವ ಡಿ.ಕೆ.ಶಿವಕುಮಾರ್ ಸಿಎಂ ರೇಸ್‌ನಲ್ಲಿದ್ದರೂ ಹಾದಿ ಸುಗಮವಾಗಿಲ್ಲ, ಹಾಗೂ ಜೆಡಿಎಸ್‌ನಿಂದ ಎಚ್‌ಡಿಕೆ ನಿರ್ಧಾರಿತ ಸಿಎಂ ಆಗಿದ್ದಾರೆ. ಯಾರಿಗೂ ಬಹುಮತ ಸಿಗದ ಸಂದರ್ಭ ಎದುರಾದ್ರೆ ರಾಜಕಾರಣದಲ್ಲಿ ಏನು ಬೇಕಾದ್ರೂ ನಡೆಯಬಹುದು. ಅಂತಹ ಸಂದರ್ಭ ಎದುರಾದ್ರೆ ಪರಸ್ಪರ ಇಬ್ಬರು ನಾಯಕರಿಗೆ ಸಹಕಾರ ಅನಿವಾರ್ಯವಾಗುತ್ತೆ. ಈ ಹಿನ್ನೆಲೆ ಅವರವರ ಪ್ರಬಲ ಕ್ಷೇತ್ರಗಳಿಗೆ ತೊಡಕಾಗದಂತೆ ನೋಡಿಕೊಳ್ಳಬೇಕಾದ ಅನಿವಾರ್ಯತೆ ಇದೆ. ಅಂತಹ ಒಂದು ವಾತಾವರಣ ಸೃಷ್ಟಿಯಾಗಬಹುದೇನೋ ಎನ್ನುವ ಗುಸುಗುಸು ಕೂಡ ಕೇಳಿಬಂದಿದೆ.
ಆದರೆ, ಈಗಾಗಲೇ ಕಾಂಗ್ರೆಸ್ ತನ್ನ ಅಭ್ಯರ್ಥಿ ಘೋಷಿಸಿದ್ದು, ಇದೀಗ ಹೊಸ ಗಾಳವನ್ನು ಜೆಡಿಎಸ್ ಬೀಸುತ್ತಿದೆಯಾ ಎಂಬ ಮಾತುಗಳೂ ಕೂಡ ಕೇಳಿಬರುತ್ತಿದೆ. ಅಲ್ಲದೆ ಡಿ.ಕೆ. ಬ್ರದರ್ಗೆ ಪಕ್ಕಾ ಪೈಪೋಟಿ ಕೊಡಬಲ್ಲ ಅಭ್ಯರ್ಥಿ ಅಲ್ಲಿ ಹಾಕಿದ್ರೆ ಅವರೂ ಕ್ಷೇತ್ರಬಿಟ್ಟು ಹೊರಬರದಂತೆ ಕಟ್ಟಿಹಾಕಬಹುದು ಎಂಬ ಲೆಕ್ಕಾಚಾರ ಜೆಡಿಎಸ್‌ದಾದ್ರೆ, ಚುನಾವಣಾ ಚಾಣಾಕ್ಷ ಎಂದೇ ಕರೆಸಿಕೊಳ್ಳುವ ಸಂಸದ ಡಿ.ಕೆ.ಸುರೇಶ್ ಇರೋದ್ರಿಂದ ಕಷ್ಟವಾಗದು ಎನ್ನುವುದು ಕಾಂಗ್ರೆಸ್ ಲೆಕ್ಕಾಚಾರ.
ಅದೇನೇ ಆದ್ರೂ ಇಬ್ಬರೂ ನಾಯಕರು ಕೋಲು ಕೊಟ್ಟು ಹೊಡೆಸಿಕೊಳ್ಳುವ ಸ್ಥಿತಿ ನಿರ್ಮಾಣವಾಗುತ್ತಾ ನೋಡೋಣ ಎನ್ನುವ ಬಗ್ಗೆ ಚಿಂತನೆ ಚರ್ಚೆ ಜೋರಾಗಿದೆ.
-ಎಂ.ಎಚ್.ಪ್ರಕಾಶ್