ಇಂಡಿ: ಮುಂದಿನ ಚುನಾವಣೆಯಲ್ಲಿ ಸ್ಪಷ್ಟ ಬಹುಮತದಿಂದ ಜೆಡಿಎಸ್ ಅಧಿಕಾರಕ್ಕೆ ಬಂದರೆ ವೃದ್ಧರಿಗೆ ಪ್ರತೀ ತಿಂಗಳು 5 ಸಾವಿರ ರೂ. ಮಾಸಾಶನ ನೀಡುವುದಾಗಿ ಮಾಜಿ ಮುಖ್ಯಮಂತ್ರಿ, ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಅಧಿಕಾರಕ್ಕೆ ಬಂದ 24 ತಾಸುಗಳಲ್ಲಿ ಸ್ತ್ರೀ ಶಕ್ತಿ ಗುಂಪುಗಳ ಸಂಪೂರ್ಣ ಸಾಲ ಮನ್ನಾ ಮಾಡಲಾಗುವುದು ಎಂದೂ ಪ್ರಕ ಟಿಸಿದ್ದಾರೆ.
ಇಂಡಿ ತಾಲೂಕಿನ ಅಗರಖೇಡ ಗ್ರಾಮದ ಸಿದ್ಧಾರೂಢ ಮಠದಲ್ಲಿ ಹಮ್ಮಿಕೊಂಡಿದ್ದ ಜೆಡಿಎಸ್ ಪಂಚರತ್ನ ರಥಯಾತ್ರೆ ಪುನಾರಂಭ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ದಿವ್ಯಾಂಗರು, ವಿಧವೆಯರು, ಮದುವೆಯಾಗದವರಿಗೆ ಪ್ರತೀ ತಿಂಗಳು 2,500 ಮಾಸಾಶನ ನೀಡಲಾಗುವುದು ಎಂದರು.
ತಾಲೂಕಿನ ಗ್ರಾ.ಪಂ. ವ್ಯಾಪ್ತಿಯಲ್ಲಿ ಉತ್ತಮ ಶಾಲೆಗಳನ್ನು ಸ್ಥಾಪಿಸಿ ಬಡ ಮಕ್ಕಳಿಗೆ ಎಲ್‌ಕೆಜಿಯಿಂದ ಪಿಯುಸಿವರೆಗೆ ಉತ್ತಮ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತದೆ.
ಗ್ರಾ.ಪಂ. ವ್ಯಾಪ್ತಿಯಲ್ಲಿಯೇ 30 ಹಾಸಿಗೆಯ ಉತ್ತಮ ಆಸ್ಪತ್ರೆ ನಿರ್ಮಿಸಿ ಅದಕ್ಕೆ ಮೂವರು ವೈದ್ಯರನ್ನು ನಿಯೋಜಿಸಿ ಉಚಿತ ಆರೋಗ್ಯ ಲಭಿಸುವಂತೆ ಮಾಡುತ್ತೇನೆ. ಯಾವುದೇ ಕಾಯಿಲೆ ಇದ್ದರೂ ಸರಕಾರದಿಂದಲೇ ವೆಚ್ಚ ಭರಿಸುವ ವ್ಯವಸ್ಥೆ ಮಾಡುತ್ತೇನೆ ಎಂದರು.
ಫಸಲ್ ಭೀಮಾ ಯೋಜನೆಯ ಮೂಲಕ ರೈತರಿಂದ 193 ಕೋಟಿ ರೂ. ಹಣ ಸಂಗ್ರಹಿಸಿ ಆ ಯೋಜನೆಗೆ ನಿಯಮ ಜಾರಿ ಮಾಡಿ ರೈತರಿಂದ ಕಟ್ಟಿಸಿಕೊಂಡ ಹಣದಲ್ಲಿ ಕೇವಲ 28 ಕೋಟಿ ರೂ. ಮಾತ್ರ ರೈತರಿಗೆ ಪರಿಹಾರ ನೀಡಿದ್ದಾರೆ. ಇನ್ನುಳಿದ ಹಣವನ್ನು ಈ ಸರಕಾರ ಲೂಟಿ ಹೊಡೆದಿದೆ ಎಂದು ಆರೋಪಿಸಿದರು.