ಹಾವೇರಿ: ಪೆಟ್ರೋಲ್, ಡೀಸೆಲ್, ವಿದ್ಯುತ್ ದರ ಏರಿಕೆ ಖಂಡಿಸಿ ಹಾಗೂ ಕೊರೊನಾ ಸೋಂಕಿನಿಂದ ಮೃತಪಟ್ಟ ಕುಟುಂಬಗಳಿಗೆ ಸೂಕ್ತ ಪರಿಹಾರಕ್ಕೆ ಆಗ್ರಹಿಸಿ ಜೆಡಿಎಸ್ ಜಿಲ್ಲಾ ಘಟಕದಿಂದ ಶುಕ್ರವಾರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಾತನಾಡಿದ ಜೆಡಿಎಸ್ ಮುಖಂಡರು, ದೇಶದಲ್ಲಿ ದಿನದಿಂದದಿನಕ್ಕೆ ಪ್ರಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವುದರಿಂದ ಜನಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗುತ್ತಿದೆ. ತೈಲ ಬೆಲೆ ಏರಿಕೆಯಿಂದಾಗಿ ಸರಕು ಸಾಗಾಣಿಕೆ, ಬಸ್ ದರ, ಆಟೋ, ಟ್ಯಾಕ್ಸಿಗಳ ದರ ಸಹ ಹೆಚ್ಚಳವಾಗಿದೆ. ಅಲ್ಲದೇ, ರೈತಾಪಿ ವರ್ಗ ಜಮೀನುಗಳ ಕೆಲಸಕ್ಕೆ ಟ್ರ್ಯಾಕ್ಟರ್‌ಗಳನ್ನು ಬಳಸಲು ಯೋಚಿಸುವಂತಾಗಿದೆ ಎಂದು ದೂರಿದರು.
ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ರೈತರು ಬೆಳೆದಿದ್ದ ಬೆಳೆಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಇಲ್ಲದೇ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಈ ನಡುವೆ ದಿನದಿಂದ ದಿನಕ್ಕೆ ಪೆಟ್ರೋಲ್, ಡೀಸೆಲ್ ದರ ಏರಿಕೆಯಾಗುತ್ತಿರುವುದರಿಂದ ರೈತಾಪಿ ಜನರು ಮತ್ತಷ್ಟು ಸಂಕಷ್ಟ ಪಡುವಂತಾಗಿದೆ. ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ರೈತ ಹಾಗೂ ಜನವಿರೋಧಿ ನೀತಿಗೆ ಸಾಕ್ಷಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಾಗಲೇ ಕೊರೊನಾ ಮಹಾಮಾರಿ ಸಂಕಷ್ಟದಿಂದ ತತ್ತರಿಸಿರುವ ಜನರಿಗೆ ತೈಲ ಹಾಗೂ ವಿದ್ಯುತ್ ದರ ಏರಿಕೆಯಾಗುತ್ತಿರುವುದು ಬದುಕಿನ ಮೇಲೆ ದೊಡ್ಡ ಹೊಡೆತ ನೀಡಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವ ಮೂಲಕ ತೈಲ ಬೆಲೆ ಏರಿಕೆಯನ್ನು ಹಿಂಪಡೆಯುವಂತೆ ಮಾಡಿ ರಾಜ್ಯದಜನತೆಯ ಮೇಲಿರುವ ತೆರಿಗೆ ಒತ್ತಡ ಕಡಿಮೆ ಮಾಡಬೇಕೆಂದು ಒತ್ತಾಯಿಸಿದರು.
ಕೋವಿಡ್ ಮೊದಲ ಹಾಗೂ ಎರಡನೇ ಅಲೆಯಿಂದ ದೇಶದಲ್ಲಿ ಸಾಕಷ್ಟು ಕುಟುಂಬಗಳು ಸಂಕಷ್ಟಕ್ಕೆ ತುತ್ತಾಗಿವೆ. ಕೊರೊನಾ ಸೋಂಕಿನಿಂದ ಸಾವಿರಾರು ಜನರು ಜೀವ ಕಳೆದುಕೊಂಡಿದ್ದು,ಅವರನ್ನು ಅವಲಂಬಿಸಿದ ಕುಟುಂಬಗಳು ಬೀದಿಗೆ ಬಿದ್ದಿವೆ. ಇಂತಹ ಕುಟುಂಬಗಳಿಗೆ ಸರ್ಕಾರ ಸೂಕ್ತ ಪರಿಹಾರ ಕಲ್ಪಿಸುವ ಮೂಲಕ ಅವರ ಸಂಕಷ್ಟಕ್ಕೆ ಸ್ಪಂದಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಹಲಗೇರಿ, ಜಿಲ್ಲಾ ಕಾರ್ಯಾಧ್ಯಕ್ಷ ಉಮೇಶ ತಳವಾರ, ಶಿವಕುಮಾರ ಮಠದ, ಆರ್ .ಬಿ.ಪಾಟೀಲ, ಸುರೇಶ ನಾಯಕ, ಮಹಬೂಬಲಿ ಸುಗ್ಗಮ್ಮನವರ, ಕೆಂಚಪ್ಪ ಗುದಗಿ, ನವೀನ ಡಾಂಗೆ,ರವಿ ಕೂರಗುಡಿ, ಬಸವಾರಜ ಹಾದಿ, ಕರಬಸಪ್ಪ ಜೆಡಿಎಸ್ ಜಿಲ್ಲಾ ಘಟಕದಿಂದ ಜಿಲ್ಲಾ ಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ದಾವಣಗೆರೆ ಇತರರು ಹಾಜರಿದ್ದರು.