ಜೇವರ್ಗಿ: ಹಿಂದಿ ದಿವಸ್ ಆಚರಣೆ ವಿರೋ ಸಿ ಬುಧವಾರ ಜೆಡಿಎಸ್ ತಾಲೂಕು ಘಟಕದ ವತಿಯಿಂದ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಜೆಡಿಎಸ್ ಯುವ ಮುಖಂಡ ವಿಜಯಕುಮಾರ ಹಿರೇಮಠ ಮಾತನಾಡಿ, ಈ ಹಿಂದಿನಿಂದಲೂ ಭಾರತ ಒಕ್ಕೂಟ ಸರಕಾರವು ಕುತಂತ್ರದಿಂದ ಸೆ.14ರ ದಿನವನ್ನು “ಹಿಂದಿ ದಿವಸ್’ ಎಂಬ ಆಚರಣೆ ಸೃಷ್ಟಿಸಿ ದೇಶದ ಸಾವಿರಾರು ಪ್ರಾದೇಶಿಕ ಭಾಷೆಗಳಿಗೆ ಮೋಸ ಮಾಡುತ್ತಾ ಬಂದಿದೆ ಎಂದರು.
400 ವರ್ಷಗಳ ಇತಿಹಾಸವಿರುವ ಹಿಂದಿ ಭಾಷೆಗೆ ಹಬ್ಬ ಮಾಡುವ ಇವರಿಗೆ 2500 ವರ್ಷಗಳ ಇತಿಹಾಸವಿರುವ ಕನ್ನಡ ಭಾಷೆ ನೆನಪಿಗೆ ಬರುವುದಿಲ್ಲ. ರಾಜ್ಯವು ಕನ್ನಡ, ಕೊಂಕಣಿ, ತುಳು, ಕೊಡವ ಸೇರಿದಂತೆ ಹತ್ತಾರು ಭಾಷೆಗಳ ತವರೂರು. ವೈವಿದ್ಯಮಯ ಸಂಸ್ಕೃತಿ ಹೊಂದಿರುವ ಈ ರಾಜ್ಯದಲ್ಲಿ ನಮಗೆ ಸಂಬಂಧವೇ ಇಲ್ಲದ ಭಾಷೆ ಆಚರಣೆ ಮಾಡುತ್ತಿರುವುದು ಘೋರ ಅನ್ಯಾಯ. ಈ ಆಚರಣೆ ಹಿಂದಿ ಭಾಷಿಕ ರಾಜ್ಯಗಳಿಗೆ ಸೀಮಿತವಾಗಲಿ. ನಮ್ಮ ರಾಜ್ಯದಲ್ಲಿ ಒತ್ತಾಯಪೂರ್ವಕವಾಗಿ ಆಚರಣೆ ಮಾಡುವುದು ಬೇಡ. ನಮ್ಮ ಜನರ ತೆರಿಗೆ ಹಣದಲ್ಲಿ ಹಿಂದಿ ದಿವಸ್ ಆಚರಣೆ ಮಾಡಬಾರದು ಎಂದು ಮನವಿ ಮಾಡಿದರು.
ಜೆಡಿಎಸ್ ಜೇವರ್ಗಿ ತಾಲೂಕು ಅಧ್ಯಕ್ಷ ರಮೇಶ ಕಲಶೆಟ್ಟಿ, ಯಡ್ರಾಮಿ ಅದ್ಯಕ್ಷ ಚಂದ್ರಶೇಖರ ಹೊಸಮನಿ, ಮುಖಂಡರಾದ ಭಗವಂತ್ರಾಯಗೌಡ ಅಂಕಲಗಿ, ಭೀಮರಾಯ ನಾಟಿಕಾರ, ಶಿವಶಂಕರ ಜವಳಗಾ, ಶಹಾಬುದ್ಧೀನ ಪಟೇಲ, ಭಗವಂತ್ರಾಯ ಬಿರಾದಾರ, ಗೌಸುದ್ದೀನ್ ಬಡಾಘರ್, ಕೇರನಾಥ ಪಾರ್ಶಿ, ಶರಣು ದೊರೆ, ಬಸವರಾಜ ಕುಮ್ಮಣ್ಣಿ, ಶಿವಾನಂದ ಹೂಗಾರ, ಮಲ್ಲಿಕಾರ್ಜುನ ದಂಡೂಲ್ಕರ್, ಲಿಂಗರಾಜ ಗುತ್ತೇದಾರ, ಸಿದ್ಧಲಿಂಗಯ್ಯ ಮಠಪತಿ, ಮಹಾಂತೇಶ ಸ್ಥಾವರಮಠ ಮತ್ತಿತರರು ಇದ್ದರು.