Advertisement

ಜೆಡಿಎಸ್‌ ಕಚೇರಿ ವಿದ್ಯುತ್‌ ಬಿಲ್‌ ಬಾಕಿ

03:03 PM Mar 30, 2019 | pallavi |

ವಿಜಯಪುರ : ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷದ ಓರ್ವ ಸಚಿವ, ಓರ್ವ ಸಂಪುಟ ದರ್ಜೆ ಸ್ಥಾನಮಾನ ಇರುವ ಶಾಸಕರಿದ್ದರೂ ನಗರದಲ್ಲಿರುವ ಜೆಡಿಎಸ್‌ ಜಿಲ್ಲಾ ಕಚೇರಿಯಲ್ಲಿ ಕಳೆದ ಸುಮಾರು ಒಂದು ದಶಕದಿಂದ ವಿದ್ಯುತ್‌ ಬಿಲ್‌ ಪಾವತಿಸಿಲ್ಲ. 5 ಸಾವಿರಕ್ಕೂ ಅಧಿಕ ಬಿಲ್‌ ಬಾಕಿ ಇದ್ದರೂ ಹೆಸ್ಕಾಂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಗಳಿಗೆ ಕಾರಣವಾಗಿದೆ.

Advertisement

ನಗರದಲ್ಲಿರುವ ಜೆಡಿಎಸ್‌ ಕಚೇರಿಗೆ ವಿದ್ಯುತ್‌ ಸಂಪರ್ಕ ಪಡೆದಿದ್ದು, ವಿದ್ಯುತ್‌ ಬಳಸಿದ್ದಕ್ಕೆ 5452 ರೂ. ಬಿಲ್‌ ಬಾಕಿ ಇದೆ. ಬಿಲ್‌ ಕಟ್ಟದೇ ಸುಮಾರು ದಶಕಗಳಿಂದ ವಿದ್ಯುತ್‌ ಕಳ್ಳತನ ಮಾಡುತ್ತಿದ್ದರೂ ಹೆಸ್ಕಾಂ ಅಧಿಕಾರಿಗಳು ಮೌನಕ್ಕೆ ಶರಣಾಗಿದ್ದಾರೆ. ಕಚೇರಿ ಜೆಡಿಎಸ್‌ ಪಕ್ಷದ್ದಾದರೆ ಹೆಸ್ಕಾಂ ದಾಖಲೆಯಲ್ಲಿ ಕಾಂಗ್ರೆಸ್‌ ಭವನ, ಆರ್‌.ಆರ್‌. ನಂ. 985 ಹಾಗೂ ಅಕೌಂಟ್‌ ನಂಬರ್‌ 1608893000 ಎಂದು ದಾಖಲೆ ಹೇಳುತ್ತಿದೆ.

ಎಸ್‌.ನಿಜಲಿಂಗಪ್ಪ ಅವರು ಮೈಸೂರು ರಾಜ್ಯದ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದಾಗ ಸದರಿ ಕಾಂಗ್ರೆಸ್‌ ಭವನ ನಿರ್ಮಿಸಿದ್ದು, ನಂತರ ನಡೆದ ಹಲವು ರಾಜಕೀಯ ಸ್ಥಿತ್ಯಂತರಗಳಲ್ಲಿ ಸದರಿ ಕಚೇರಿ ಜನತಾಪಕ್ಷ, ಜನತಾದಳ, ಸಂಯುಕ್ತ ಜನತಾದಳ ಹಾಗೂ ಇದೀಗ ಜೆಡಿಎಸ್‌ ಪಕ್ಷದ ಸುಪರ್ದಿಯಲ್ಲಿದೆ.

ಸಾರ್ವಜನಿಕರು ಮನೆ ಬಳಕೆಗೆ ಮಾಡಿಕೊಂಡ ವಿದ್ಯುತ್‌ ಬಿಲ್‌ ಪಾವತಿ ಒಂದು ತಿಂಗಳ ತಡವಾದರೂ ಹೆಸ್ಕಾಂ ಅಧಿಕಾರಿಗಳು ವಿದ್ಯುತ್‌ ಸಂಪರ್ಕ ಕಡಿತಗೊಳಿಸುತ್ತಾರೆ. ಆದರೆ ಜೆಡಿಎಸ್‌ ಕಚೇರಿ ವಿದ್ಯುತ್‌ ಬಿಲ್‌ ಪಾವತಿಸದೇ ಆಕ್ರಮವಾಗಿ ವಿದ್ಯುತ್‌ ಬಳಕೆ ಮಾಡುತ್ತಿದ್ದರೂ ಕ್ರಮಕ್ಕೆ ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಸರಕಾರದ ವಿದ್ಯುತ್‌ ಕಾಯ್ದೆ ಪ್ರಕಾರ ವಿದ್ಯುತ್‌ ಕಳ್ಳತನಕ್ಕೆ 3 ತಿಂಗಳಿಂದ 5 ವರ್ಷಗಳವರೆಗೆ ಗರಿಷ್ಠ ಜೈಲು ವಾಸ, 5 ಸಾವಿರ ರೂ.ದಿಂದ 50 ಸಾವಿರ ರೂ. ವರೆಗೆ ದಂಡ, 3 ತಿಂಗಳಿಂದ 1 ವರ್ಷದವರೆಗೆ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಅವಕಾಶವಿದೆ. ಸದರಿ ಪ್ರಕರಣಗಳಲ್ಲಿ ವಿಶೇಷ ನ್ಯಾಯಾಲಯ, ಉತ್ಛ ನ್ಯಾಯಾಲಯದಿಂದ ಮಾತ್ರ ಜಾಮೀನು ದೊರೆಯಲಿದೆ. ಅಲ್ಲದೇ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ, ವಿದ್ಯುತ್‌ ಕಳ್ಳರಿಗೆ ಸಹಾಯ ಮಾಡುವವರಿಗೆ ಮತ್ತು ಅವರನ್ನು ಉತ್ತೇಜಿಸುವವರಿಗೂ ಶಿಕ್ಷೆ ಎಂದು ಕಾನೂನು ಹೇಳುತ್ತದೆ. ಈ ಕುರಿತು ಹೆಸ್ಕಾಂ ಅಧಿಕಾರಿಗಳಿಗೆ ಕರೆ ಮಾಡಿದರೆ ಎಇಇಗಳಾದ ರವೀಂದ್ರ ಪತ್ತಾರ ಹಾಗೂ ರಾಜಶೇಖರ ಎಂಬವರು ಪರಸ್ಪರರು ಇದು ತಮ್ಮ ವ್ಯಾಪ್ತಿಯ ಪ್ರದೇಶದಲ್ಲಿಲ್ಲ. ಪರಿಣಾಮ ನಮಗೆ ಈ ಬಿಲ್‌ ಬಾಕಿ ಕುರಿತು ಯಾವ ಮಾಹಿತಿಯೂ ಇಲ್ಲ ಎಂದು ನುಣಚಿಕೊಳ್ಳುತ್ತಿದ್ದಾರೆ.

Advertisement

ಸಾಮಾನ್ಯರು ವಿದ್ಯುತ್‌ 50 ರೂ. ಬಿಲ್‌ ಬಾಕಿ ಇರಿಸಿಕೊಂಡರೂ ಸಂಪರ್ಕ ಕಡಿತಗೊಳಿಸುತ್ತಾರೆ. ವಿದ್ಯುತ್‌ ಕಳ್ಳತನ ಮಾಡಿದರೆ ದಂಡ, ಶಿಕ್ಷೆ ವಿಧಿಸುತ್ತಾರೆ. ರಾಜ್ಯದಲ್ಲಿ ಅಧಿಕಾರದಲ್ಲಿರುವ ಜೆಡಿಎಸ್‌ ಪಕ್ಷ, ಜನರಿಗೆ ಮಾದರಿ ಆಗಬೇಕಿದ್ದ ಆ ಪಕ್ಷದ ನಾಯಕರೇ ಇದೀಗ ವಿದ್ಯುತ್‌ ಬಿಲ್‌ ಪಾವತಿಸದೇ, ವಿದ್ಯುತ್‌ ಕಳ್ಳತನ ಮಾಡುತ್ತಿದ್ದರೂ ಸುಮ್ಮನಿರುವ ಅಧಿಕಾರಿಗಳ ವರ್ತನೆ ಅನುಮಾನ ಮೂಡಿಸುತ್ತಿದ್ದೆ ಎಂದು ಸಾಮಾಜಿಕ ಕಾರ್ಯಕರ್ತ ಶರಣು ಕಾಟಕರ ಆಕ್ರೋಶ ಹೊರ ಹಾಕಿದ್ದಾರೆ.

ವಿದ್ಯುತ್‌ ಬಿಲ್‌ ಪಾವತಿಸದ ಕಾರಣ ವಿದ್ಯುತ್‌ ಸಂಪರ್ಕ ಕಡಿತ ಮಾಡಿದ್ದಾರೆ. ಆದರೆ ಜೆಡಿಎಸ್‌ ನಾಯಕರು ಅಕ್ರಮವಾಗಿ ವಿದ್ಯುತ್‌ ಸಂಪರ್ಕ ಪಡೆದು, ವಿದ್ಯುತ್‌ ಕಳ್ಳತನ ಮಾಡುತ್ತಿದ್ದಾರೆ. ಸದರಿ ಕಚೇರಿಗೆ ಆ ಪಕ್ಷದ ನಾಯಕರು ಬಂದಾಗ ಅಕ್ರಮ ವಿದ್ಯುತ್‌ನಿಂದಲೇ ಧ್ವನಿವರ್ಧಕ ಬಳಸುತ್ತಾರೆ.

ಕಾಯಕರ್ತರು ಪಕ್ಷದ ಕಚೇರಿಯಲ್ಲಿ ಟಿವಿ ಬಳಸುತ್ತಾರೆ. ಜನಸಾಮಾನ್ಯರಿಗೆ ಮಾದರಿ ಆಗಬೇಕಿರುವ ರಾಜ್ಯದ ಆಡಳಿತ ಪಕ್ಷದ ನಾಯಕರು, ತಮ್ಮದೇ ಕಚೇರಿಗೆ ಅಕ್ರಮ ವಿದ್ಯುತ್‌ ಸಂಪರ್ಕ ಪಡೆದಿದ್ದು, ತಕ್ಷಣ ಹೆಸ್ಕಾಂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಬೇಕು ಎಂದು ಲಾಯಪ್ಪ ಇಂಗಳೆ ಆಗ್ರಹಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಜೆಡಿಎಸ್‌ ಜಿಲ್ಲಾ ವಕ್ತಾರ ರಾಜು ಹಿಪ್ಪರಗಿ, ಸದರಿ ನಮ್ಮ ಕಚೇರಿ ವಿದ್ಯುತ್‌ ಬಿಲ್‌ ಪಾವತಿ ಬಾಕಿ ಇರುವುದು ನನ್ನ ಗಮನಕ್ಕೆ ಬಂದಿಲ್ಲ. ನಾಳೆಯೇ ಸಂಪೂರ್ಣ ಬಿಲ್‌ ಪಾವತಿಗೆ ಮುಂದಾಗುತ್ತೇವೆ ಎಂದು ಸಮಜಾಯಿಸಿ ನೀಡಿದ್ದಾರೆ.

„ಜಿ.ಎಸ್‌. ಕಮತರ

Advertisement

Udayavani is now on Telegram. Click here to join our channel and stay updated with the latest news.

Next