ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿರುವವರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕ್ರಮ ಕೈಗೊಳ್ಳಲು ಕಾಂಗ್ರೆಸ್ ಪಕ್ಷದ ವತಿಯಿಂದ ಸ್ಪೀಕರ್‌ಗೆ ದೂರು ಸಲ್ಲಿಸಲಾಗಿದೆ. ಆದರೆ, ಜೆಡಿಎಸ್ ತನ್ನ ಮೂವರು ಶಾಸಕರ ವಿರುದ್ಧ ಯಾವುದೇ ರೀತಿಯ ದೂರು ಕೊಟ್ಟಿಲ್ಲ.
ಜೆಡಿಎಸ್ ಶಾಸಕರಾದ ಎಚ್.ವಿಶ್ವನಾಥ್, ಗೋಪಾಲಯ್ಯ, ನಾರಾಯಣಗೌಡ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅತೃಪ್ತ ಕಾಂಗ್ರೆಸ್ ಶಾಸಕರ ಜತೆ ಉಳಿದುಕೊಂಡಿದ್ದಾರೆ. ನಾರಾಯಣಗೌಡ ಅವರು, ದೇವೇಗೌಡರ ಕುಟುಂಬದ ಹೆಣ್ಣು ಮಕ್ಕಳ ಕಿರುಕುಳದಿಂದ ನಾನು ಬೇಸರಗೊಂಡಿದ್ದೇನೆಂದು ಬಹಿರಂಗವಾಗಿ ಹೇಳಿಕೆ ನೀಡಿದ್ದಾರೆ.
ಇಷ್ಟಾದರೂ ಜೆಡಿಎಸ್ ವತಿಯಿಂದ ಶಾಸಕರ ವಿರುದ್ಧ ಪಕ್ಷ ವಿರೋಧಿ ಚಟುವಟಿಕೆಯಡಿ ಕ್ರಮ ಕೈಗೊಳ್ಳಲು ಅಥವಾ ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆ ಮಾಡುವ ಬಗ್ಗೆ ಸ್ಪೀಕರ್‌ಗೆ ಯಾವುದೇ ರೀತಿಯ ದೂರು ಸಲ್ಲಿಸಿಲ್ಲ. ಮೂವರು ಶಾಸಕರ ಮನವೊಲಿಸಿ ಕರೆ ತರಬಹುದು ಎಂಬ ನಿರೀಕ್ಷೆಯಲ್ಲಿ ಪಕ್ಷದ ನಾಯಕರು ಇದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಪಕ್ಷದ ನಾಯಕರನ್ನು ವಿಚಾರಿಸಿದರೆ, ಶಾಸಕರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಲಾಗಿದೆ. ಸ್ಪೀಕರ್ ಅವರಿಗೂ ಸದ್ಯದಲ್ಲೇ ಮನವಿ ಸಲ್ಲಿಸಲಾಗುವುದು ಎಂದು ಸಮಜಾಯಿಷಿ ನೀಡುತ್ತಾರೆ.
ಅರಸೀಕೆರೆ ಶಾಸಕ ಶಿವಲಿಂಗೇಗೌಡ ಅವರು, ನಾರಾಯಣಗೌಡ ಸೇರಿ ಮೂವರು ಶಾಸಕರ ವಿರುದ್ಧ ಕ್ರಮಕ್ಕೆ ನಾವು ಸ್ಪೀಕರ್‌ಗೆ ದೂರು ನೀಡಲಿದ್ದೇವೆ. ಪಕ್ಷಕ್ಕೆ ದ್ರೋಹ ಎಸಗುವುದು ಒಂದೇ, ಹೆತ್ತ ತಾಯಿಗೆ ದ್ರೋಹ ಮಾಡುವುದೂ ಒಂದೇ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.