Advertisement
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿ ಗುರುವಾರ ಜೆಡಿಎಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ ರಾಯಚೂರು ಶಾಸಕ ಡಾ.ಶಿವರಾಜ್ ಪಾಟೀಲ್, ಲಿಂಗಸಗೂರು ಶಾಸಕ ಮಾನಪ್ಪ ವಜ್ಜಲ್ ಮತ್ತಿತರರನ್ನು ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಅವರು ಮಾತನಾಡಿದರು.
ರಾಜ್ಯ ಸರ್ಕಾರದ ಅಂಕಿ ಅಂಶಗಳ ಪ್ರಕಾರವೇ 20170-18ನೇ ಸಾಲಿನ ಬಜೆಟ್‌ನಲ್ಲಿ ನೀಡಿದ ಅನುದಾನವನ್ನು ಯಾವುದೇ ಇಲಾಖೆಯಲ್ಲಿ ಇದುವರೆಗೆ ಶೇ. 50ರಿಂದ 50ರಷ್ಟು ವೆಚ್ಚ ಮಾಡಿಲ್ಲ. ಇದೀಗ ಉಳಿದ 73 ದಿನಗಳಲ್ಲಿ 80 ಸಾವಿರ ಕೋಟಿ ರೂ. ವೆಚ್ಚ ಮಾಡಲು ಹೊರಟಿದ್ದಾರೆ. ಗುತ್ತಿಗೆದಾರರೊಂದಿಗೆ ಶಾಮೀಲಾಗಿ ಬಿಲ್‌ಗಳನ್ನು ಮಾಡಿಸಿ ಹಣ ಲೂಟಿ ಮಾಡಲು ಮುಂದಾಗಿದ್ದಾರೆ ಎಂದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
Related Articles
ರಾಜ್ಯದಲ್ಲಿ ಬಿಜೆಪಿ ಸೇರಲು ಕಾಂಗ್ರೆಸ್ ಮತ್ತು ಜೆಡಿಎಸ್‌ನಲ್ಲಿ ದೊಡ್ಡ ಸಾಲೇ ಇದೆ.ಆರಂಭಿಕವಾಗಿ ಜೆಡಿಎಸ್‌ನ ಇಬ್ಬರು ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದಾರೆ. ಚೆನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್ ಬಿಜೆಪಿ ಸೇರಿರುವುದರಿಂದ ಮಂಡ್ಯ, ಮೈಸೂರು, ಹಾಸನ, ರಾಮನಗರ, ಚಾಮರಾಜನಗರ ಭಾಗದಲ್ಲಿ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಎಲ್ಲಾ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದ್ದು, ಅಭ್ಯರ್ಥಿಯಾಗಲು ಭಾರೀ ಪೈಪೋಟಿ ಇರುವ ವಾತಾರಣ ಬಿಜೆಪಿಗೆ ಇದೆ ಎಂದು ಹೇಳಿದರು.
Advertisement
ಕೇಂದ್ರ ಸಚಿವ ಅನಂತಕುಮಾರ್, ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಪಿಯೂಷ್ ಗೋಯೆಲ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ರಾಜ್ಯ ಉಸ್ತುವಾರಿ ಮುರಳೀಧರರಾವ್, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಶಾಸಕರಾದ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ, ಎಸ್.ಆರ್.ವಿಶ್ವನಾಥ್ ಮತ್ತಿತರರು ಇದ್ದರು.
ಹಲವರು ಬಿಜೆಪಿ ಸೇರ್ಪಡೆ:ಇದೇ ವೇಳೆ ಜೆಡಿಎಸ್‌ನ ಮಾನಪ್ಪ ವಜ್ಜಲ್, ಡಾ.ಶಿವರಾಜ್ ಪಾಟೀಲ್ ಅವರ ಬೆಂಬಲಿಗರು ಮಾತ್ರವಲ್ಲದೆ ಗೌರಿಬಿದನೂರಿನ ಜೈಪಾಲ್ ರೆಡ್ಡಿ, ಕರ್ನಾಟಕ ಎಸ್‌ಸಿ, ಎಸ್ಟಿ ಗುತ್ತಿಗೆದಾರರ ಸಂಘದ ಕಾರ್ಯದರ್ಶಿ ಡಾ.ಶಂಕರಪ್ಪ ಸೇರಿದಂತೆ ನೂರಾರು ಮಂದಿ ಬಿಜೆಪಿ ಸೇರಿದರು. ಎಲ್ಲರಿಗೂ ಪಕ್ಷದ ಶಾಲು ಹೊದಿಸಿ ಬರಮಾಡಿಕೊಳ್ಳಲಾಯಿತು. ಜನರ ತೆರಿಗೆ ಹಣದಲ್ಲಿ ಕಾಂಗ್ರೆಸ್ ಪಕ್ಷವನ್ನು ಚುನಾವಣೆಗೆ ಸಜ್ಜುಗೊಳಿಸುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಜನತೆಗೆ ಘೋರ ಅನ್ಯಾಯ ಎಸಗುತ್ತಿದ್ದಾರೆ. ಕಾಂಗ್ರೆಸ್ ರಾಜ್ಯದಲ್ಲಿ ಹಲವು ವರ್ಷ ಆಡಳಿತ ನಡೆಸಿದ ಬಳಿಕ, ಸಿದ್ದರಾಮಯ್ಯ ನಾಲ್ಕೂಮುಕ್ಕಾಲು ವರ್ಷದ ಅಧಿಕಾರ ಪೂರೈಸಿದ ಮೇಲೆ ಈಗ ನವ ಕರ್ನಾಟಕ ನಿರ್ಮಾಣ ಎಂಬ ಜಾಹೀರಾತು ನೀಡಿದ್ದಾರೆ. ಹಾಗಿದ್ದರೆ ಇದುವರೆಗೆ ನೀವು ನಿರ್ಮಾಣ ಮಾಡದ ಹೊಸ ಕರ್ನಾಟಕ ಯಾವುದು?
– ಮುರಳೀಧರರಾವ್, ಬಿಜೆಪಿ ರಾಜ್ಯ ಉಸ್ತುವಾರಿ ಯಾರೊಂದಿಗೂ ಹೊಂದಾಣಿಕೆ ಇಲ್ಲ: ಪಿಯೂಷ್ ಗೋಯೆಲ್
ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಯಾರೊಂದಿಗೂ, ಯಾವುದೇ ಕಾರಣಕ್ಕೂ ಅದರಲ್ಲೂ ವಿಶೇಷವಾಗಿ ಜೆಡಿಎಸ್ ಜತೆ ಬಿಜೆಪಿ ರಾಜಕೀಯ ಹೊಂದಾಣಿಕೆ ಅಥವಾ ಒಪ್ಪಂದ ಮಾಡಿಕೊಳ್ಳುವುದಿಲ್ಲ ಎಂದು ಕೇಂದ್ರ ರೈಲ್ವೆ ಸಚಿವ ಹಾಗೂ ರಾಜ್ಯ ಬಿಜೆಪಿ ಚುನಾವಣಾ ಸಹ ಉಸ್ತುವಾರಿ ಪಿಯೂಷ್ ಗೋಯೆಲ್ ಸ್ಪಷ್ಟಪಡಿಸಿದ್ದಾರೆ.ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರನ್ನು ಇತ್ತೀಚೆಗೆ ದೆಹಲಿಯ ಅವರ ನಿವಾಸದಲ್ಲಿ ತಾವು ಭೇಟಿಯಾದ ಹಿನ್ನೆಲೆಯಲ್ಲಿ ಉದ್ಭವಿಸಿದ ಊಹಾಪೋಹಗಳಿಗೆ ಸಂಬಂಧಿಸಿದಂತೆ ಗುರುವಾರ ಸುದ್ದಿಗೋಷ್ಠಿಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ. ದೇವೇಗೌಡರ ಭೇಟಿ ಕುರಿತು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ರೈಲ್ವೆ ಇಲಾಖೆಗೆ ಸಂಬಂಧಿಸಿದಂತೆ ದೇವೇಗೌಡರು
ನನ್ನೊಂದಿಗೆ ಮಾತನಾಡಬೇಕು ಎಂದು ಹೇಳಿದ್ದರು. ಅವರು ದೇಶದ ಪ್ರಧಾನಿಯಾಗಿದ್ದವರು. ಮೇಲಾಗಿ ವಯಸ್ಸಿನಲ್ಲಿ ನನಗಿಂತ ಬಹಳ ಹಿರಿಯರು. ಅಂಥವರು ನನ್ನ ಬಳಿ ಬರುವುದು ಶಿಷ್ಟಾಚಾರವಲ್ಲ. ಹೀಗಾಗಿ ನಾನೇ ಬರುತ್ತೇನೆ ಎಂದು ಹೇಳಿ ಅವರ ಮನೆಗೆ ಹೋಗಿದ್ದೆ. ಮನಮೋಹನ್ ಸಿಂಗ್ ಅವರು ನನ್ನ ಬಳಿ ಮಾತನಾಡಲು ಬಯಸಿದರೂ ನಾನೇ ಅವರಿದ್ದಲ್ಲಿ ಹೋಗುತ್ತೇನೆಯೇ ಹೊರತು ನಾನಿದ್ದಲ್ಲಿ ಅವರು ಬರಲು ಬಿಡುವುಡಿಲ್ಲ. ಇದು ಮಾಜಿ ಪ್ರಧಾನಿಗೆ ನೀಡುವ ಗೌರವ ಎಂದು ಹೇಳಿದರು. ಅಂದು ನಾನು ದೇವೇಗೌಡರ ಮನೆಗೆ ಹೋದಾಗ ಮಾಧ್ಯಮ ಪ್ರತಿನಿಧಿಗಳು ಇದ್ದರು. ಹೀಗಾಗಿ ಜೆಡಿಎಸ್ ಜತೆ ಹೊಂದಾಣಿಕೆ ಊಹಾಪೋಹ ಸೃಷ್ಟಿಯಾಗಿದೆ ಎಂದರು.