Advertisement

ಜೆಡಿಎಸ್‌ ಶಾಸಕರಿಂದ ಪಕ್ಷಾಂತರ ಪರ್ವ?

10:20 AM Dec 19, 2019 | Team Udayavani |

ಬೆಂಗಳೂರು: ರಾಜ್ಯದಲ್ಲಿ ಮೈತ್ರಿ ಸರಕಾರ ಪತನಗೊಂಡ ಅನಂತರ ಜೆಡಿಎಸ್‌ನ ಸುಮಾರು 20ಕ್ಕೂ ಹೆಚ್ಚು ಶಾಸಕರು ತಮ್ಮ ಭವಿಷ್ಯದ ರಾಜಕಾರಣದ ಬಗ್ಗೆ ಆಲೋಚಿಸಿ ಬಿಜೆಪಿ ಸೇರುವ ತಮ್ಮ ಕಸರತ್ತನ್ನು ಮುಂದುವರಿಸಿದ್ದಾರೆ. “ಭವಿಷ್ಯದಲ್ಲಿ ಜೆಡಿಎಸ್‌ನಲ್ಲಿ ಭವಿಷ್ಯವಿಲ್ಲ’ ಎಂದು ಜೆಡಿಎಸ್‌ ಪಕ್ಷದ ನಾಯಕರ ವಿರುದ್ಧ ಮುನಿಸಿಕೊಂಡು ಸಾಮೂಹಿಕವಾಗಿ ಒಟ್ಟು ಶಾಸಕರ ಮೂರನೇ ಎರಡರಷ್ಟು ಶಾಸಕರು ಅಂದರೆ ಕನಿಷ್ಠ 22 ಶಾಸಕರು ಬಿಜೆಪಿ ಸೇರುವ ಬಗ್ಗೆ ಆಸಕ್ತಿ ತೋರಿದ್ದರು. ಈಗ ಅವರನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡು ಮುಂದಿನ ಚುನಾವಣೆಯಲ್ಲಿ ಹಳೇ ಮೈಸೂರು ಭಾಗವನ್ನು ತನ್ನ ವಶಕ್ಕೆ ಪಡೆಯಲು ಬಿಜೆಪಿ ಹೊಸ ಸೂತ್ರವೊಂದನ್ನು ಹೆಣೆದಿದೆ ಎಂದು ಮೂಲಗಳು ತಿಳಿಸಿವೆ.

Advertisement

ಆದರೆ ರಾಜ್ಯದಲ್ಲಿ ಈಗ ಬಿಜೆಪಿ ಸರಕಾರಕ್ಕೆ ಬಹುಮತ ಇರುವುದರಿಂದ ಮತ್ತೆ ಬೇರೆ ಪಕ್ಷಗಳ ಶಾಸಕರನ್ನು ರಾಜೀನಾಮೆ ಕೊಡಿಸಿ ಪಕ್ಷಕ್ಕೆ ಸೇರಿಸಿಕೊಳ್ಳುವುದರಿಂದ ತಪ್ಪು ಸಂದೇಶ ರವಾನೆ ಯಾದಂತಾಗುತ್ತದೆ. ಅಲ್ಲದೇ ಸದ್ಯಕ್ಕೆ ರಾಜ್ಯ ಸರಕಾರಕ್ಕೆ ಸಂಖ್ಯಾ ಬಲದ ಸಮಸ್ಯೆ ಇಲ್ಲ ದಿರುವುದರಿಂದ ರಾಜೀನಾಮೆ ಕೊಡಿ ಸುವ ಬದಲು ಬಿಜೆಪಿ ಸೇರುವ ಬಗ್ಗೆ ಒಲವಿರುವ ಶಾಸಕರನ್ನು ಈ ವಿಧಾನಸಭೆಯ ಅವಧಿ ಮುಕ್ತಾಯ ವಾಗುವವರೆಗೂ ಅವರ ಪಕ್ಷ ದಲ್ಲಿಯೇ ಇರುವಂತೆ ನೋಡಿ, ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಸೇರಿಸಿಕೊಳ್ಳುವ ಬಗ್ಗೆ ಲೆಕ್ಕಾಚಾರ ನಡೆದಿದೆ ಎಂದು ಹೇಳಲಾಗುತ್ತಿದೆ.

ಈಗ ಪಕ್ಷದಲ್ಲಿ ಭವಿಷ್ಯವಿಲ್ಲ ಎಂದು ಬೇಸರಗೊಂಡಿರುವ ಜೆಡಿಎಸ್‌ ಶಾಸಕರು ತಮ್ಮ ಕ್ಷೇತ್ರಗಳಿಗೆ ಸೂಕ್ತ ಅನುದಾನ ದೊರೆಯದಿದ್ದರೆ ಮುಂದಿನ ಸಾರಿ ಗೆಲ್ಲುವುದು ಕಷ್ಟ ಎನ್ನುವ ಆತಂಕ ವ್ಯಕ್ತಪಡಿಸಿ, ಈಗಲೇ ಪಕ್ಷಾಂತರ ನಿಷೇಧ ಕಾಯ್ದೆಗೆ ಅಡ್ಡಿಯಾಗದಂತೆ ಅಗತ್ಯ ಸಂಖ್ಯೆಯ ಶಾಸಕರು ಪ್ರತ್ಯೇಕ ಗುಂಪು ಮಾಡಿಕೊಂಡು ಜೆಡಿಎಸ್‌ನಿಂದ ಅಂತರ ಕಾಯ್ದುಕೊಳ್ಳುವ ಬಗ್ಗೆಯೂ ಚರ್ಚೆ ನಡೆಸಿದ್ದಾರೆ.

ಆದರೆ ಸದ್ಯ ಜೆಡಿಎಸ್‌ನ ಶಾಸಕರು
ಯಾವುದೇ ತೀರ್ಮಾನ ತೆಗೆದುಕೊಂಡರೂ ಬಿಜೆಪಿ ಮೇಲೆ ಆರೋಪ ಬರುತ್ತದೆ ಎನ್ನುವ ಕಾರಣಕ್ಕೆ ಜೆಡಿಎಸ್‌ ಶಾಸಕರು ಈ ಅವಧಿ ಮುಗಿಯುವವರೆಗೂ ಅದೇ ಪಕ್ಷದಲ್ಲಿ ಮುಂದುವರಿದರೂ ಅವರ ಕ್ಷೇತ್ರಗಳಿಗೆ ಅಗತ್ಯ ಅನುದಾನ, ಅವರ ಬೇಡಿಕೆಯ ಯೋಜನೆಗಳನ್ನು ಅಗತ್ಯಕ್ಕೆ ತಕ್ಕಂತೆ ಮಾಡಿ ಕೊಡುವ ಮೂಲಕ ಜೆಡಿಎಸ್‌ ಶಾಸಕರ ಕ್ಷೇತ್ರಗಳನ್ನು ಹಾಲಿ ಶಾಸಕರೊಂದಿಗೆ ಭವಿಷ್ಯದಲ್ಲಿ ಬಿಜೆಪಿ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ರಾಜಕೀಯ ದಲ್ಲಿಯೂ ಭವಿಷ್ಯ ನಿಧಿ ಲೆಕ್ಕಾಚಾರ ಹಾಕಿಕೊಂಡಿದೆ ಎನ್ನಲಾಗುತ್ತಿದೆ.

ಪ್ರಸ್ತುತ ಬಿಜೆಪಿ ಸರಕಾರಕ್ಕೆ ಪೂರ್ಣ ಬಹುಮತವಿದೆ. ಅವರಿಗೆ ನಮ್ಮ ಆವಶ್ಯಕತೆ ಇಲ್ಲ. ಹಾಗಾಗಿ ನಾನು ಜೆಡಿಎಸ್‌ ತ್ಯಜಿಸುವ ಪ್ರಶ್ನೆಯೇ ಇಲ್ಲ. ನಾವು ಮಾರಾಟಕ್ಕೂ ಇಲ್ಲ.
– ಕೆ. ಸುರೇಶ್‌ಗೌಡ, ನಾಗಮಂಗಲ ಶಾಸಕ

Advertisement

ನಾವು ಈಗ ಬಿಜೆಪಿ ಸೇರುತ್ತೇವೆ ಎನ್ನುವುದು ಶುದ್ಧ ಸುಳ್ಳು . ನಾನಾಗಲಿ, ಸುರೇಶ್‌ಗೌಡ ಆಗಲಿ ಸದ್ಯ ಬಿಜೆಪಿ ಸೇರುವುದಿಲ್ಲ. ಮುಂದಿನ ಚುನಾವಣೆವರೆಗೂ ಜೆಡಿಎಸ್‌ ಸದಸ್ಯರಾಗಿಯೇ ಇರುತ್ತೇವೆ. ಈ ವಿಷಯವಾಗಿ ಯಾರೂ ನಮ್ಮನ್ನು ಸಂಪರ್ಕಿಸಿಲ್ಲ.
– ರವೀಂದ್ರ ಶ್ರೀಕಂಠಯ್ಯ, ಶ್ರೀರಂಗಪಟ್ಟಣ ಶಾಸಕ

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next