Advertisement

JDS: ಮೈತ್ರಿಗೆ ಮುನಿಸು: ಶಾಸಕರು, ನಾಯಕರಿಗೆ ಅಸಮಾಧಾನ ಮೂಡಿಸಿದ ಗೆಳೆತನ

01:04 AM Sep 25, 2023 | Team Udayavani |

ಬೆಂಗಳೂರು: ಜೆಡಿಎಸ್‌ ಪಕ್ಷವು ಎನ್‌ಡಿಎ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ದೇವೇಗೌಡರು ಮತ್ತು ಕುಮಾರಸ್ವಾಮಿ ತೆಗೆದು ಕೊಂಡಿರುವ ನಿರ್ಧಾರ ಜೆಡಿಎಸ್‌ಗೆ ಬೆಂಬಲ ನೀಡುವ ಅಲ್ಪಸಂಖ್ಯಾಕರು, ಪಕ್ಷದ ಕೆಲವು ಹಾಲಿ ಹಾಗೂ ಮಾಜಿ ಶಾಸಕರ ಮುನಿಸಿಗೆ ಕಾರಣವಾಗಿದೆ. ಮೈತ್ರಿಯ ಸೂತ್ರ ಹೊರಬೀಳುವ ಮುನ್ನವೇ ಜೆಡಿಎಸ್‌ ಒಡೆದ ಮನೆಯಾಗಿದೆ.

Advertisement

ವರಿಷ್ಠರ ಹಂತದಲ್ಲಿ ನಡೆದ ಮೈತ್ರಿಯಾದ್ದರಿಂದ ತಳಮಟ್ಟದ ಕಾರ್ಯಕರ್ತರು, ಮುಖಂಡರನ್ನು ವಿಶ್ವಾಸಕ್ಕೆ ಪಡೆದಿಲ್ಲ ಎಂಬ ವೇದನೆ ಬಿಜೆಪಿ ಯಂತೆಯೇ ಜೆಡಿಎಸ್‌ನಲ್ಲೂ ವ್ಯಕ್ತವಾಗಿದೆ.

ಈ ಹಿಂದೆ ಬೆಂಗಳೂರಿನ ಅರಮನೆ ಮೈದಾನ ದಲ್ಲಿ ನಡೆದ ಜೆಡಿಎಸ್‌ ಸಮಾವೇಶದಲ್ಲಿ ಮೈತ್ರಿ ಕುರಿತು ಸ್ಪಷ್ಟ ಚಿತ್ರಣ ನೀಡಿರಲಿಲ್ಲ. ಏಕಾಏಕಿ ಎಚ್‌.ಡಿ. ಕುಮಾರಸ್ವಾಮಿ ಅವರೊಬ್ಬರೇ ಹೋಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರೊಂದಿಗೆ ಮೈತ್ರಿ ಮಾಡಿಕೊಂಡು ಬಂದಿದ್ದಾರೆ. ಇದು ಪಕ್ಷಗಳ ನಡುವಿನ ಮೈತ್ರಿಯೋ ಕೆಲವು ನಾಯಕರಿಗೆ ಸೀಮಿತವಾದ ಮೈತ್ರಿಯೋ ಎಂಬ ಪ್ರಶ್ನೆ ಜೆಡಿಎಸ್‌ನಲ್ಲಿ ಹುಟ್ಟಿಕೊಂಡಿದೆ.

ರಾಜ್ಯ ಘಟಕದ ನಾಯಕರನ್ನು ಕತ್ತಲಲ್ಲಿಟ್ಟು ಮೈತ್ರಿ ಮಾಡಿಕೊಂಡಿರುವುದಕ್ಕೆ ಅಸಮಾಧಾನ ಗೊಂಡಿರುವ ಕೆಲವು ನಾಯಕರು ಸಾಮೂಹಿಕ ರಾಜೀನಾಮೆಗೂ ಮುಂದಾಗಿದ್ದಾರೆ. ಮಾಜಿ ಸಚಿವ ಎನ್‌.ಎಂ. ನಬಿ ನೇತೃತ್ವದಲ್ಲಿ ಸಭೆ ನಡೆಸಿರುವ ಅಲ್ಪಸಂಖ್ಯಾಕ ನಾಯಕರು ಜಿಲ್ಲಾಮಟ್ಟದ ಅಭಿಪ್ರಾಯ ಪಡೆದು, ಮುಂದಿನ 10 ದಿನ ದೊಳಗಾಗಿ ನಿರ್ಣಯಕ್ಕೆ ಬರುವುದಾಗಿ ತಿಳಿಸಿ ದ್ದಾರೆ. ಸಭೆಯಲ್ಲಿ ಪಕ್ಷದ ಹಿರಿಯ ಉಪಾಧ್ಯಕ್ಷ ಸಯ್ಯದ್‌ ಶಫೀಉಲ್ಲಾ, ಯುವ ಘಟಕದ ಅಧ್ಯಕ್ಷ ಎನ್‌.ಎಂ. ನೂರ್‌, ಮುಖಂಡರಾದ ಮೊಹಿದ್‌ ಅಲ್ತಾಫ್, ನಾಸಿರ್‌ ಹುಸೇನ್‌ ಉಸ್ತಾದ್‌ ಇದ್ದರು.

ಮೈತ್ರಿಯಿಂದಾಗಿ ಕೆಲವು ಹಾಲಿ ಮತ್ತು ಮಾಜಿ ಶಾಸಕರಿಗೂ ಇರುಸು-ಮುರಿಸು ಉಂಟಾಗಿದೆ. ಪಕ್ಷದೊಳಗೆ ಇಷ್ಟೆಲ್ಲ ನಡೆಯುತ್ತಿದ್ದರೂ ಮುಗುಂ ಆಗಿರುವ ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರಾಗಲಿ, ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡರಾಗಲಿ ಅಥವಾ ಕುಮಾರಸ್ವಾಮಿ ಅವರಾಗಲಿ ಯಾರನ್ನೂ ಸಮಾಧಾನಪಡಿಸುವ ಯತ್ನ ನಡೆಸಿಲ್ಲ.

Advertisement

ಬಿಜೆಪಿ ಬಗ್ಗೆ ಅಲ್ಪಸಂಖ್ಯಾಕರ ಮನಃಸ್ಥಿತಿ ಬದಲಾಗಿದೆ
“ಉದಯವಾಣಿ’ ಜತೆಗೆ ಮಾತನಾಡಿರುವ ಮಾಜಿ ಸಚಿವ ಬಂಡೆಪ್ಪ ಖಾಶೆಂಪೂರ್‌, ಈ ಮೈತ್ರಿ ಮೊದಲೇ ಆಗಿದ್ದಿದ್ದರೆ ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ಬರುತ್ತಿರ ಲಿಲ್ಲ. 14 ತಿಂಗಳ ಆಡಳಿತದಲ್ಲಿ ನಮಗೆ ತೊಂದರೆ ಕೊಟ್ಟ ಕಾಂಗ್ರೆಸ್‌ ಈಗ 135 ಸ್ಥಾನ ಪಡೆದರೂ ನಮ್ಮ ಪಕ್ಷವನ್ನು ಗುರಿ ಮಾಡಿ ರಾಜ ಕೀಯ ದಾಳ ಉರುಳಿಸುತ್ತಿದೆ. ದೇಶದಲ್ಲಿ ಕಾಂಗ್ರೆಸ್‌ ನೆಲಕಚ್ಚಿರುವುದರಿಂದಲೇ ಐಎನ್‌ಡಿಐಎ ಮೈತ್ರಿಕೂಟ ರಚಿಸಿಕೊಂಡರೂ ಅವರಲ್ಲಿ ಒಗ್ಗಟ್ಟು ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ. ವಿಧಾನಸಭಾ ಚುನಾವಣೆಯೇ ಬೇರೆ, ಲೋಕಸಭಾ ಚುನಾವಣೆಯೇ ಬೇರೆ ಎಂದು ಹೇಳಿದ ಅವರು, ಈ ಸಂದರ್ಭದಲ್ಲಿ ನಮ್ಮ ಮೈತ್ರಿ ಅನಿವಾರ್ಯ. ಮುಸ್ಲಿಮರ ವಿಚಾರದಲ್ಲಿ ಬಿಜೆಪಿಯ, ಬಿಜೆಪಿ ವಿಚಾರದಲ್ಲಿ ಮುಸ್ಲಿಮರ ಮನಃಸ್ಥಿತಿ ಬದಲಾಗಿದೆ. ಅಲ್ಪಸಂಖ್ಯಾಕ ನಾಯಕರು ಕುಮಾರಸ್ವಾಮಿ ಅವರೊಂದಿಗೆ ಕುಳಿತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಯಾರ ಅಭಿಪ್ರಾಯವನ್ನೂ ಪಡೆಯದೆ ಮೈತ್ರಿ ಮಾತುಕತೆ ಮಾಡಲಾಗುತ್ತಿದೆ. ತುಮಕೂರು, ದಾವಣಗೆರೆ, ಕಾರವಾರ, ಭಟ್ಕಳ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಸಹಿತ ಹಲವು ಭಾಗದ ನಾಯಕರು ಪಾಲ್ಗೊಂಡು ಚರ್ಚಿಸಿದ್ದೇವೆ. ಜಿಲ್ಲಾವಾರು ಸಭೆ ನಡೆಸಿ 10 ದಿನಗಳಲ್ಲಿ ಮುಂದಿನ ನಿರ್ಣಯ ಕೈಗೊಳ್ಳುತ್ತೇವೆ.- ಎನ್‌.ಎಂ. ನಬಿ, ಮಾಜಿ ಸಚಿವ

ರಾಜಕಾರಣ ಎಂದರೆ ಕೇವಲ ಗಣಿತ ಅಲ್ಲ, ಅದರ ಹಿಂದೆ ಕೆಮಿಸ್ಟ್ರಿ
ಇರುತ್ತದೆ. ಅದು ಕಾರ್ಯಕರ್ತರ ಹಂತದಲ್ಲೇ ಸಮನ್ವಯ ಆಗುವ ರೀತಿಯಲ್ಲಿ ನೋಡಿಕೊಳ್ಳುವ ಜವಾಬ್ದಾರಿ ಎರಡೂ ಪಕ್ಷಗಳಿಗಿದೆ. ಈಗ ಎನ್‌ಡಿಎ ಭಾಗವಾಗಿ ಜೆಡಿಎಸ್‌ ಪಕ್ಷವನ್ನು ಸೇರಿಸಿಕೊಳ್ಳಲಾಗಿದೆ.
– ಸಿ.ಟಿ. ರವಿ, ಬಿಜೆಪಿ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next