ಬೆಂಗಳೂರು : ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಸಿಎಂ ಕುಮಾರಸ್ವಾಮಿಗೆ ಕೈಕೊಟ್ಟು ಮುಂಬಯಿಗೆ ಹಾರಿದ್ದಾರೆಯೇ ?
ಈ ರೀತಿಯ ಬಾಂಬನ್ನು ಬಿಜೆಪಿ ಶಾಸಕ ಶ್ರೀರಾಮುಲು ಸಿಡಿಸಿದ್ದಾರೆ. ಶ್ರೀರಾಮುಲು ಹೇಳುವ ಪ್ರಕಾರ ನಾವು ಆಪರೇಶನ್ ಕಮಲ ಮಾಡಲ್ಲ; ಅವರವರೇ ಆಪರೇಶನ್ ಮಾಡಿಕೊಳ್ಳುತ್ತಾರೆ !
ವಿಧಾನಸೌಧದಲ್ಲಿಂದು ಮಾತನಾಡಿದ ಶ್ರೀರಾಮುಲು, ನಾವು ಆಪರೇಶನ್ ಕಮಲ ಮಾಡ್ತಾ ಇದ್ದೀವಿ ಅಂತ ಆಡಳಿತ ಪಕ್ಷದ ನಾಯಕರು ಕೂಗೆಬ್ಬಿಸುತ್ತಿದ್ದಾರೆ. ಆದರೆ ನಾವಂತೂ ಆಪರೇಶನ್ ಕಮಲ ಮಾಡ್ತಿಲ್ಲ; ಅವರವರೇ ಆಪರೇಶನ್ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಮುಂದುವರಿದು ಮಾತನಾಡಿದ ಶ್ರೀರಾಮುಲು, ಇನ್ನಷ್ಟು ಕಾಂಗ್ರೆಸ್ ಶಾಸಕರು ಪಕ್ಷ ತೊರೆದು ಹೊರ ಬರುವ ಸಾಧ್ಯತೆ ಇದೆ; ಆಡಳಿತ ಪಕ್ಷದ ಶಾಸಕರೇ ತಮ್ಮ ಸರಕಾರದ ವಿರುದ್ಧ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ ಎಂದರು.
ಕುಮಾರ ಸ್ವಾಮಿ ನೇತೃತ್ವದ ದೋಸ್ತಿ ಸರಕಾರದಲ್ಲೀಗ ಸಂಖ್ಯಾಬಲದ ಕೊರತೆ ಇದೆ; ವಿಪ್ ಜಾರಿ ಮಾಡಿದರೂ ಈ ಸ್ಥಿತಿ ಒದಗಿದೆ. ಆದುದರಿಂದ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಶ್ರೀರಾಮುಲು ನೇರ ಮಾತು ನುಡಿದರು.
ಕಾಂಗ್ರೆಸ್ – ಜೆಡಿಎಸ್ ನಾಯಕರು ತಮ್ಮ ಶಾಸಕರನ್ನು ಅಂಕೆಯಲ್ಲಿಟ್ಟುಕೊಳ್ಳಲು ವಿಫಲರಾಗಿದ್ದಾರೆ. ಅವರನ್ನು ನಾವು ಕೂಡಿ ಹಾಕಿದ್ದೇವೆ ಎಂದು ನಮ್ಮ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಶ್ರೀರಾಮುಲು ಹೇಳಿದರು.