Advertisement

ಎ.ಮಂಜು ವಿರುದ್ಧ ರೇವಣ್ಣ ಹಕ್ಕುಚ್ಯುತಿ ಮಂಡನೆ

06:50 AM Feb 09, 2018 | Team Udayavani |

ವಿಧಾನಸಭೆ:ರಾಷ್ಟ್ರಪತಿಯವರು ಪಾಲ್ಗೊಂಡಿದ್ದ ಶ್ರವಣಬೆಳಗೊಳದಲ್ಲಿ ಮಹಾಮಹಸ್ತಕಾಭಿಷೇಕ ಚಾಲನೆ ಕಾರ್ಯಕ್ರಮದಲ್ಲಿ ಆಹ್ವಾನ ಪತ್ರಿಕೆಯಲ್ಲಿ ಹೆಸರು ಇದ್ದರೂ ಸ್ವಾಗತ ಕೋರದ ಬಗ್ಗೆ ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಎ.ಮಂಜು ವಿರುದ್ಧ ಜೆಡಿಎಸ್‌ನ ಎಚ್‌.ಡಿ.ರೇವಣ್ಣ ಹಕ್ಕುಚ್ಯುತಿ ಮಂಡಿಸಿದರು.

Advertisement

ಶೂನ್ಯ ವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಆವರು, ರಾಷ್ಟ್ರಪತಿಯವರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ಶಾಸಕನಾಗಿ ನಾನೂ ಪಾಲ್ಗೊಂಡಿದ್ದೆ. ಆಹ್ವಾನ ಪತ್ರಿಕೆಯಲ್ಲಿ ಹೆಸರು ಇದ್ದರೂ ವೇದಿಕೆಯಲ್ಲಿದ್ದ ನನಗೆ ಸ್ವಾಗತ ಕೊರಲಿಲ್ಲ. ಉದ್ದೇಶಪೂರ್ವಕವಾಗಿ ಹೆಸರು ಹೇಳಲಿಲ್ಲ ಎಂದು ದೂರಿದರು.

ಹಾಸನ ಕ್ಷೇತ್ರದ ಸಂಸದರು ಹಾಗೂ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ, ಅವರಿಗೆ ಮಾತನಾಡಲು ಅವಕಾಶ ಕೊಡದೆ ಅಗೌರವ ತೋರಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದೇವೇಗೌಡರಿಗೆ ಮಾತನಾಡಲು ಅವಕಾಶ ಕೊಡದ ಬಗ್ಗೆ ಬಿಜೆಪಿಯ ಸಿ.ಟಿ.ರವಿ, ಆರ್‌.ಅಶೋಕ್‌ ಆಕ್ಷೇಪ ವ್ಯಕ್ತಪಡಿಸಿದರು. ಇದಕ್ಕೆ ಸಮಜಾಯಿಷಿ ನೀಡಿದ ಕೃಷಿ ಸಚಿವ ಕೃಷ್ಣಬೈರೇಗೌಡ, ರಾಷ್ಟ್ರಪತಿಯವರ ಕಾರ್ಯಕ್ರಮದಲ್ಲಿ ಪ್ರತಿ ನಿಮಿಷ ವೇಳಾಪಟ್ಟಿ ಮೊದಲೇ ನಿಗದಿಯಾಗಿರುತ್ತದೆ. ಅದು ಶಿಷ್ಟಾಚಾರ ವಿಚಾರ. ಆದರೂ  ಈ ಬಗ್ಗೆ ಜಿಲ್ಲಾಧಿಕಾರಿಯಿಂದ ವರದಿ ತರಿಸಿಕೊಂಡು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರು ಸಹ ಧ್ವನಿಗೂಡಿಸಿ ತಪ್ಪಾಗಿದ್ದರೆ ಕ್ರಮ ಕೈಗೊಳ್ಳಲಾಗುವುದು. ರೇವಣ್ಣ ಅವರದು ಹಾಸನದ್ದು  ವೈಯಕ್ತಿಕ ಸಂಘರ್ಷ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ರೇವಣ್ಣ, ವೈವಕ್ತಿಕ ವಿಚಾರ ಅಲ್ಲ, ಶಿಷ್ಟಾಚಾರ ಪಾಲನೆಯಾಗಿಲ್ಲ. ಇಲ್ಲೂ ರಾಜಕೀಯ ಮಾಡಲಾಗಿದೆ ಎಂದು ದೂರಿದರು. ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದರು.
ಸ್ಪೀಕರ್‌ ಪೀಠದಲ್ಲಿದ್ದ ಶಿವಶಂಕರರೆಡ್ಡಿ, ಜಿಲ್ಲಾಧಿಕಾರಿಯಿಂದ ವರದಿ ತರಿಸಿ ಕ್ರಮ ಕೈಗೊಳ್ಳಲಾಗುವುದು ಎಂದರು. ಅದಕ್ಕೆ ಪ್ರತಿಪಕ್ಷ ನಾಯಕ ಶೆಟ್ಟರ್‌ ಸೇರಿ ಇತರೆ ಸದಸ್ಯರು ಹಕ್ಕುಚ್ಯುತಿ ಸಮಿತಿಗೆ ಒಪ್ಪಿಸಿಬಿಡಿ. ಆವರೇ ವರದಿ ತರಿಸಿಕೊಳ್ಳುತ್ತಾರೆ ಎಂದು ಸಲಹೆ ನೀಡಿದರು. ನಂತರ ಅದಕ್ಕೆ  ಒಪ್ಪಿ ಹಕ್ಕುಚ್ಯುತಿ ಸಮಿತಿಗೆ ವಹಿಸಲಾಗುವುದು ಎಂದು ತಿಳಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next