Advertisement

12 ಸಾವಿರ ಜೆಡಿಎಸ್‌ ಸದಸ್ಯತ್ವ ನೋಂದಣಿ ಮಾಡಿಸಿ

02:44 PM Oct 26, 2021 | Team Udayavani |

ಚಿಂತಾಮಣಿ: ಭೂಮಿಗೆ ಬಿದ್ದ ಬೀಜ, ಜೆಡಿಎಸ್‌ಗೆ ಬಿದ್ದ ಮತ ಎಂದಿಗೂ ವ್ಯರ್ಥವಾಗುವುದಿಲ್ಲ, 2023ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ಪಷ್ಟ ಬಹುಮತ ಪಡೆದು ರಾಜ್ಯದಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ, ಹತ್ತು ಹಲವು ಜನಪರ ಯೋಜನೆ ಜಾರಿಗೆ ತಂದು ಅಭಿವೃದ್ಧಿಗೆ ಶ್ರಮಿಸುತ್ತಾರೆ ಎಂದು ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಅಭಿಪ್ರಾಯಪಟ್ಟರು.

Advertisement

ನಗರದ ವಾರ್ಡ್‌ ನಂ.31ರ ತಿಮ್ಮಸಂದ್ರದ ಬಿಎಂವಿ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ಸದಸ್ಯತ್ವ ನೋಂದಣಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಜೆಡಿಎಸ್‌ ರಾಷ್ಟ್ರೀಯ ಪಕ್ಷವಾಗಿಉಳಿಯಬೇಕಾದರೆ ಕನಿಷ್ಠ ಒಂದು ಲಕ್ಷದಷ್ಟು ಸದಸ್ಯತ್ವ ಕಡ್ಡಾಯವಾಗಿದೆ. ತಾಲೂಕಿನಿಂದ 12 ಸಾವಿರ ಜನ ಸದಸ್ಯತ್ವ ಪಡೆಯಬೇಕು ಎಂದು ಹೇಳಿದರು.

ಸಂಘಟನೆಗೆ ಮುಂದಾಗಿ: 2006ರಿಂದ 2008 ರವರೆಗೆ ರಾಜ್ಯದಲ್ಲಿ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಕೊಟ್ಟಿರುವ ಹಲವು ಯೋಜನೆಗಳು ಜನಪ್ರಿಯವಾಗಿದ್ದು. 2018ರಲ್ಲೂ ಒಂದು ವರ್ಷ ಸಿಎಂ ಆಗಿದ್ದು, ಮತ್ತೂಮ್ಮೆ ಅವರನ್ನು ರಾಜ್ಯದ ಮುಖ್ಯಮಂತ್ರಿಯನ್ನಾಗಿ ನೋಡಬೇಕು, ರಾಜ್ಯಅಭಿವೃದ್ಧಿ ಹೊಂದಬೇಕಾದರೆ ಜೆಡಿಎಸ್‌ ಕಾರ್ಯಕರ್ತರು ಈಗಿನಿಂದಲೇ ಪಕ್ಷದ ಸಂಘಟನೆಗೆ ಮುಂದಾಗಬೇಕು ಎಂದು ವಿವರಿಸಿದರು.

ಯೋಜನೆಗಳ ರೂಪು: ಅಧುನಿಕ ಶಿಕ್ಷಣ, ರೈತ ಅಭಿವೃದ್ಧಿ ಯೋಜನೆ, ಆರೋಗ್ಯ, ಯುವ ಮತ್ತು ನವ ಮಾರ್ಗ, ಮಹಿಳೆಯರಿಗೆ ಉದ್ಯೋಗ ಕಲ್ಪಿಸುವುದು, ವಸತಿ ಸೇರಿ ಇತರೆ ಯೋಜನೆಗಳನ್ನು ರೂಪಿಸಿದ್ದು, ಜನರಿಗೆ ಸೇರುವಂತೆ ಮಾಡಬೇಕಾಗಿದೆ ಎಂದು ಹೇಳಿದರು.

ನಮ್ಮದು ಜೆಡಿಎಸ್‌ ಪಕ್ಷ: ನಾವು ಎಂದಿಗೂ ಜೆಡಿಎಸ್‌ ಪಕ್ಷದಲ್ಲೇ ಇರುತ್ತೇವೆ. ನಾವು ಗ್ರಾಮೀಣ ಭಾಗದಲ್ಲಿ ಒಂದು ಪಕ್ಷ, ನಗರ ಭಾಗದಲ್ಲಿ ಒಂದು ಪಕ್ಷದ ನಾಯಕರ ಜೊತೆ ಗುರುತಿಸಿಕೊಳ್ಳುವುದಿಲ್ಲ, ಎಲ್ಲೇ ಇದ್ದರೂ ಯಾರ ಜೊತೆ ಹೋದರೂ ನಾವು ಒಂದೇ ಪಕ್ಷ. ಅದು ಜೆಡಿಎಸ್‌. ಇನ್ನೊಬ್ಬರ ತರ ನಾವು ದಿನಕ್ಕೆ ಒಬ್ಬೊಬ್ಬ ನಾಯಕರ ಜೊತೆ ಗುರ್ತಿಸಿಕೊಳ್ಳುವುದಿಲ್ಲ ಎಂದು ತಮ್ಮ ರಾಜಕೀಯ ವಿರೋಧಿಗಳ ತಿರುಗೇಟು ನೀಡಿದರು.

Advertisement

ಗೆಲ್ಲಲು ಆಗುತ್ತಿರಲಿಲ್ಲ: ಯಾರಿಗೆ ಏನು ತೊಂದರೆ ಆಗಿದಿಯೋ ಗೊತ್ತಿಲ್ಲ, ಕೆಲವರು ನನ್ನನ್ನು 9 ವರ್ಷಗಳ ಹಿಂದಿನಿಂದ ಕ್ಷೇತ್ರದಿಂದ ಓಡಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾನು ಮೊದಲನೇ ಬಾರಿ ಚುನಾವಣೆಯಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮತಗಳಿಂದ ಗೆದ್ದೆ, ಎರಡನೇ ಬಾರಿಯೂ ಐದು ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೇನೆ. ಜೆ.ಕೆ.ಕೃಷ್ಣಾರೆಡ್ಡಿ ಅಭಿವೃದ್ಧಿ, ಜನ ಸಾಮಾನ್ಯರ ಪರ ಇಲ್ಲದಿದ್ದರೆ ಎರಡನೇ ಬಾರಿ ಗೆಲ್ಲುವುದಕ್ಕೆ ಆಗುತ್ತಿರಲಿಲ್ಲ ಎಂದು ಹೇಳಿದರು.

ಕಾರ್ಯಕ್ರಮಕ್ಕೂ ಮೊದಲು ನಗರದ ಪ್ರವಾಸಿ ಮಂದಿರದಿಂದ ಜೆಡಿಎಸ್‌ ಕಾರ್ಯಕರ್ತರು ಬೈಕ್‌ ರ್ಯಾಲಿ ಆರಂಭಿಸಿ, ಪ್ರಮುಖ ಬೀದಿಗಳಲ್ಲಿ ಸಂಚರಿಸಿ ತಿಮ್ಮಸಂದ್ರದ ವೇದಿಕೆ ಕಾರ್ಯಕ್ರಮಕ್ಕೆ ಸೇರಿಕೊಂಡರು.

ಜೆಡಿಎಸ್‌ ನಗರ ಅಧ್ಯಕ್ಷ ವೆಂಕಟರವಣಪ್ಪ, ಘಟಕಗಳ ಅಧ್ಯಕ್ಷರು, ನಗರಸಭಾ ಸದಸ್ಯರು, ಜೆಡಿಎಸ್‌ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next