Advertisement

ವಿಧಾನಸಭೆ ಚುನಾವಣೆಗೆ ಪಕ್ಷ ಸಜ್ಜುಗೊಳಿಸಲು ಇಂದು ಜೆಡಿಎಸ್‌ ಸಭೆ

07:10 AM Sep 12, 2017 | Team Udayavani |

ಬೆಂಗಳೂರು:ಮುಂದಿನ ವಿಧಾನಸಭೆ ಚುನಾವಣೆಗೆ ಪಕ್ಷ ಸಂಘಟನೆ ಹಾಗೂ ಬೂತ್‌ ಮಟ್ಟದಲ್ಲಿ ಸಕ್ರಿಯ ಕಾಯರ್ತರ ಪಡೆ ರಚನೆಗೆ ಸಂಬಂಧಿಸಿದಂತೆ ಚರ್ಚಿಸಲು ಮಂಗಳವಾರ ಜೆಡಿಎಸ್‌ ರಾಜ್ಯ ಪದಾಧಿಕಾರಿಗಳು ಹಾಗೂ ಶಾಸಕರ ಸಭೆ ಕರೆಯಲಾಗಿದೆ.

Advertisement

ನಗರದ ಖಾಸಗಿ ಹೋಟೆಲ್‌ನಲ್ಲಿ ಸಭೆ ನಿಗದಿಯಾಗಿದ್ದು ಇತ್ತೀಚೆಗೆ ನೇಮಕಗೊಂಡ ರಾಜ್ಯ ಘಟಕದ ಪದಾಧಿಕಾರಿಗಳು ಹಾಗೂ ಶಾಸಕರು, ವಿಧಾನಪರಿಷತ್‌ ಸದಸ್ಯರಿಗೆ ಆಹ್ವಾನ ನೀಡಲಾಗಿದೆ.

ಮಾಜಿ ಪ್ರಧಾನಿ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಸಮ್ಮುಖದಲ್ಲಿ ಸಭೆ ನಡೆಯಲಿದೆ.

ಪಕ್ಷ ಸಂಘಟನೆ ನಿಟ್ಟಿನಲ್ಲಿ  ಈಗಾಗಲೇ ರಚನೆಯಾಗಿರುವ ಐದು ತಂಡಗಳು ಹಾಗೂ ರಾಷ್ಟ್ರೀಯ ಅಧ್ಯಕ್ಷರ ನೇತೃತ್ವದ ಕಾರ್ಯನಿರ್ವಹಣೆ ತಂಡ, ರಾಜ್ಯಾಧ್ಯಕ್ಷರ ನೇತೃತ್ವದ ಕಾರ್ಯನಿರ್ವಹಣೆ ತಂಡಕ್ಕೆ ಸಭೆಯಲ್ಲಿ ಹೊಣೆಗಾರಿಕೆ ಹಂಚಿಕೆ ಮಾಡಲಾಗುವುದು.

ಜತೆಗೆ ಬೂತ್‌ ಮಟ್ಟದಲ್ಲಿ ನೇಮಕಗೊಂಡಿರುವ ಅಧ್ಯಕ್ಷರು ಪ್ರತಿ ಬೂತ್‌ನಲ್ಲಿ ಸಕ್ರಿಯ ಕಾರ್ಯಕರ್ತರ ಪಡೆ ರಚನೆ ಮಾಡಿಕೊಂಡು ನಿರಂತರವಾಗಿ ಮತದಾರರ ಜತೆ ಸಂಪರ್ಕ ಸಾಧಿಸುವಂತೆ ಸೂಚನೆ ನೀಡಲಾಗುವುದು.

Advertisement

ರಾಜ್ಯ ಪದಾಧಿಕಾರಿಗಳು, ಜಿಲ್ಲಾ ಮತ್ತು ತಾಲೂಕು ಅಧ್ಯಕ್ಷರು ಹಾಗೂ ಬೂತ್‌ ಸಮಿತಿ ಅಧ್ಯಕ್ಷರು ಹೊಣೆಗಾರಿಕೆ ನಿಭಾಯಿಸುವಲ್ಲಿ ವಿಫ‌ಲವಾದರೆ ಮುಲಾಜಿಲ್ಲದೆ ತೆಗೆದು ಹೊಸಬರ ನೇಮಕ ಮಾಡಲಾಗುವುದು ಎಂಬ ಎಚ್ಚರಿಕೆಯನ್ನೂ ಸಭೆಯಲ್ಲಿ ನೀಡಲಾಗುವುದು.

ಪ್ರತಿಯೊಬ್ಬ ಪದಾಧಿಕಾರಿಗೂ ಕರ್ತವ್ಯದ ಬಗ್ಗೆ ನಿಗದಿತ ಹೊಣೆಗಾರಿಕೆ ನೀಡಲಾಗುವುದು. ಆ ಪ್ರಕಾರ ಕೆಲಸ ಮಾಡಿ ವರದಿ ನೀಡುವಂತೆಯೂ ಸೂಚನೆ ನೀಡಲಾಗುವುದು ಎಂದು ಮೂಲಗಳು ತಿಳಿಸಿವೆ.

ಬಿಬಿಎಂಪಿ ಮೈತ್ರಿ ಚರ್ಚೆ ?
ಈ ಮಧ್ಯೆ, ಸೆಪ್ಟೆಂಬರ್‌ 28 ರಂದು ಬಿಬಿಎಂಪಿ ಮೇಯರ್‌-ಉಪ ಮೇಯರ್‌ ಚುನಾವಣೆ ನಿಗದಿಯಾಗಿರುವುದರಿಂದ ಕಾಂಗ್ರೆಸ್‌ ಜತೆ ಮೈತ್ರಿ ಮುಂದುವರಿಸುವುದೋ ಬೇಡವೋ ಅಥವಾ ಬೇರೆ ಯಾವ ನಿರ್ಧಾರ ಕೈಗೊಳ್ಳಬೇಕು ಎಂಬ ಬಗ್ಗೆಯೂ ಸಭೆಯಲ್ಲಿ ಚರ್ಚಿಸುವ ಸಾಧ್ಯತೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next